ಬಿಸಿಯೂಟ ಸೇವಿಸಿ ಬಾಗಲಕೋಟೆ ಸರ್ಕಾರಿ ಶಾಲೆಯ 12 ಮಕ್ಕಳು ಅಸ್ವಸ್ಥ
Bagalkot News: ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ 12 ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಮಕ್ಕಳಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ -
ಬಾಗಲಕೋಟೆ: ಮುಧೋಳ (Bagalkot) ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ ಬಳಿಕ 12 ಮಕ್ಕಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಮಕ್ಕಳಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡ 12 ಮಕ್ಕಳ ಪೈಕಿ 9 ಮಂದಿಯನ್ನು ಮುಧೋಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 3 ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ರವಾನಿಸಲಾಗಿದೆ.
ಮಧ್ಯಾಹ್ನ ಬಿಸಿಯೂಟ ಸೇವಿಸಿದ ಕೆಲವೇ ಹೊತ್ತಿನಲ್ಲಿ ಮಕ್ಕಳಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿದೆ. ಇದರಿಂದ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.
ಕಲಬುರಗಿಯ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ನಿಲಯದ ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಶಾಲೆಯ ಪ್ರಭಾರಿ ಪ್ರಾಂಶುಪರಾದ ನಜೀಮಾ ಬೇಗಂ ಮತ್ತು ಪ್ರಭಾರಿ ವಾರ್ಡನ್ ಭೀಮಬಾಯಿ ಅವರನ್ನು ಅಮಾನತ್ತುಗೊಳಿಸಲಾಗಿದೆ. ಗುರುವಾರ ರಾತ್ರಿ ಶಾಲೆಯ 50 ಮಕ್ಕಳು ರಾತ್ರಿ ಊಟ ಸೇವಿಸಿದ ನಂತರ ಅದರಲ್ಲಿ ಸುಮಾರು 39 ಮಕ್ಕಳು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಅವರನ್ನು ಚಿತ್ತಾಪುರ ತಾಲೂಕಾ ಆಸ್ಪತ್ರೆ, ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕರ್ತವ್ಯ ಲೋಪದ ಆಧಾರದ ಮೇಲೆ ನಜೀಮಾ ಬೇಗಂ ಮತ್ತು ಭೀಮಬಾಯಿ ಅವರನ್ನು ಅಮಾನತ್ತುಗೊಳಿಸಿದೆ. ಅಲ್ಲದೆ ಹೊರಗುತ್ತುಗೆ ಸಿಬ್ಬಂದಿಯನ್ನು ಸಹ ಬದಲಾಯಿಸಿದೆ ಎಂದು ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಗಮೇಶ ತಿಳಿಸಿದ್ದಾರೆ. ಇನ್ನು ಗುರುವಾರ ರಾತ್ರಿ ಆಸ್ಪತ್ರೆಗೆ ಎಲ್ಲಾ 50 ವಿದ್ಯಾರ್ಥಿಗಳನ್ನು ಆರೋಗ್ಯ ತಪಾಸಣೆ ಮಾಡಿಸಿದ ನಂತರ ವೈದ್ಯರ ನಿರ್ದೇಶನದಂತೆ ದಾಖಲಾದ 39 ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಅದರಂತೆ ಗುಣಮುಖರಾದ ಎಲ್ಲಾ 39 ವಿದ್ಯಾರ್ಥಿಗಳನ್ನು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.