ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bagalkot Child Death: ಸಂಪ್‌ಗೆ ಬಿದ್ದು ಮಗು ಸಾವು; ಉಪ್ಪಿನ ರಾಶಿ ಮೇಲೆ ಮೃತದೇಹವಿಟ್ಟು, ಕುರಾನ್‌ ಪಠಿಸಿ ಬದುಕಿಸಲು ಪೋಷಕರ ಯತ್ನ

ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 38ರಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಗುವನ್ನು ಬದುಕಿಸಲು ಪೋಷಕರು ನಡೆಸಿದ ಪ್ರಯತ್ನದ ದೃಶ್ಯ ನೋಡುಗರ ಮನ ಕಲಕುವಂತೆ ಮಾಡಿದೆ.

ಸಂಪ್‌ಗೆ ಬಿದ್ದು ಮಗು ಸಾವು; ಮೃತದೇಹ ಉಪ್ಪಿನಲ್ಲಿಟ್ಟು ಬದುಕಿಸಲು ಯತ್ನ

ಬಾಗಲಕೋಟೆಯಲ್ಲಿ ಸಂಪ್‌ಗೆ ಬಿದ್ದು ಮೃತಪಟ್ಟ ಮಗು. -

Prabhakara R
Prabhakara R Jun 8, 2026 9:30 PM

ಬಾಗಲಕೋಟೆ: ನೀರಿನ ಸಂಪ್‌ಗೆ ಬಿದ್ದು 18 ತಿಂಗಳ ಹೆಣ್ಣು ಮಗು ಮೃತಪಟ್ಟಿರುವ ದಾರುಣ ಘಟನೆ (Bagalkot Child Death) ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 38ರಲ್ಲಿ ನಡೆದಿದೆ. ಮೃತ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ. ಆದರೆ, ಮಗುವಿನ ಸಾವಿನ ನಂತರ ಆಕೆಯನ್ನು ಬದುಕಿಸಲು ಪೋಷಕರು ನಡೆಸಿದ ಪ್ರಯತ್ನದ ದೃಶ್ಯವು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

ಮಗು ಅಮೀನಾ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಎದುರಿನ ಮನೆಯವರ ಸಂಪ್‌ಗೆ ಬಿದ್ದಿದೆ. ಮಗು ನೀರಿನಲ್ಲಿ ಮುಳುಗಿದ್ದನ್ನು ತಡವಾಗಿ ಗಮನಿಸಲಾಗಿದ್ದು, ಅಷ್ಟರಲ್ಲೇ ಮಗು ಕೊನೆಯುಸಿರೆಳೆದಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಉಪ್ಪಿನಲ್ಲಿ ಮುಳುಗಿಸಿದರೆ ಮಗು ಬದುಕುತ್ತದೆ ಎಂಬ ನಂಬಿಕೆ

ಮಗು ಮೃತಪಟ್ಟಿದ್ದರೂ ಅದನ್ನು ಒಪ್ಪಿಕೊಳ್ಳದ ಪೋಷಕರು ಮತ್ತು ಕುಟುಂಬಸ್ಥರು, ಮಗುವನ್ನು ಹೇಗಾದರೂ ಮಾಡಿ ಬದುಕಿಸಲೇಬೇಕು ಎಂದು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟರೆ ಮತ್ತೆ ಜೀವ ಬರುತ್ತದೆ ಎಂದು ಯಾರೋ ಹೇಳಿದ ಮಾತು ನಂಬಿ, ಮಗುವನ್ನು ಉಪ್ಪಿನ ರಾಶಿ ಮೇಲೆ ಪೋಷಕರು ಇಟ್ಟಿದ್ದಾರೆ.

ಮಗುವಿನ ಶವವನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ತಂದ ಮೇಲೂ ಪೋಷಕರ ಈ ಪ್ರಯತ್ನ ನಿಂತಿರಲಿಲ್ಲ. ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಯ ಬಳಿಯೇ ಮಗುವನ್ನು ಉಪ್ಪಿನಲ್ಲಿ ಮುಳುಗಿಸಿ ಇಟ್ಟಿದ್ದ ಪೋಷಕರು, ಮಗುವಿನ ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪ್ರಾರ್ಥನೆಯನ್ನು ಹಾಕಿ ಬದುಕಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಆಸ್ಪತ್ರೆಯ ಆವರಣದಲ್ಲೇ ನಡೆದ ಈ ದೃಶ್ಯ ನೋಡುಗರ ಮನಕಲಕುವಂತೆ ಮಾಡಿದೆ.

ಮಗುವಿಗೆ ಮತ್ತೆ ಜೀವ ಬರಬಹುದು ಎಂಬ ಆಸೆಯಿಂದ ಪೋಷಕರು ಸರಿಸುಮಾರು ಎರಡು ತಾಸಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲೇ ಇಟ್ಟಿದ್ದರು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಪೋಷಕರು ನಿರಾಸೆಗೊಂಡಿದ್ದಾರೆ.

Koppal Horror: ಆನ್‌ಲೈನ್‌ ಗೇಮ್‌ ಆಡದಂತೆ ಬುದ್ಧಿಮಾತು; ಕೊಪ್ಪಳದಲ್ಲಿ ತಂದೆ, ಅಕ್ಕನನ್ನು ಕತ್ತು ಸೀಳಿ ಕೊಂದ ಬಾಲಕ!

ಎರಡು ಗಂಟೆಗಳ ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ತಿಳಿಹೇಳಿದ ನಂತರ, ಮಗುವಿನ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಶವಪರೀಕ್ಷೆ ಕಾರ್ಯ ನಡೆದಿದೆ.