Shivam Associates Scam: ಬಹುಕೋಟಿ ವಂಚನೆ ಆರೋಪ; ಶಿವಾನಂದ ನೀಲಣ್ಣವರ್ ವಿರುದ್ಧ ಕಾಗವಾಡದಲ್ಲಿ ಕೇಸ್ ದಾಖಲು
ಶಿವಂ ಅಸೋಸಿಯೇಟ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮೊದಲ ಖಾಸಗಿ ದೂರು ದಾಖಲಾಗಿದೆ. ಶೇ.36 ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ತನ್ನಿಂದ 5 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಶಿವಾನಂದ ನೀಲಣ್ಣವರ್. -
ಬೆಳಗಾವಿ: ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ್ ವಿರುದ್ಧ ಕೇಳಿಬಂದಿರುವ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲೆಯ ಕಾಗವಾಡ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಮೊದಲ ಖಾಸಗಿ ದೂರು ದಾಖಲಾಗಿದೆ. ಕೃಷ್ಣಾ ಅಪ್ಪಣ್ಣ ಅಪ್ರಾಜ್ ಎಂಬ ಹೂಡಿಕೆದಾರ ದೂರು ನೀಡಿದ್ದು, ಶೇ.36 ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ತನ್ನಿಂದ ₹5 ಲಕ್ಷ ಹಣ ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಹಂತ ಹಂತವಾಗಿ ₹5 ಲಕ್ಷ ಹಣವನ್ನು ಶಿವಾನಂದ ನೀಲಣ್ಣವರ ಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿತ್ತು. ಬಳಿಕ ಠೇವಣಿ ಹಣಕ್ಕೆ ಭರವಸೆ ನೀಡಿದಂತೆ ಬಡ್ಡಿ ಹಾಗೂ ಹಣ ಮರಳಿ ನೀಡದೆ ವಂಚನೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಕೈಗೆತ್ತಿಕೊಂಡಿರುವ ನಡುವೆಯೇ ಶಿವಾನಂದ ನೀಲಣ್ಣವರ್ ವಿರುದ್ಧ ದಾಖಲಾಗಿರುವ ಮೊದಲ ಅಧಿಕೃತ ಪ್ರಕರಣ ಇದಾಗಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.