ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Adigas Yatra's 32nd Anniversary: 3 ಲಕ್ಷ ಜನರಿಗೆ ಪ್ರವಾಸ; ಅಡಿಗಾಸ್‌ ಯಾತ್ರಾಗೆ ಸಭಾಪತಿ ಹೊರಟ್ಟಿ ಪ್ರಶಂಸೆ

ಬೆಂಗಳೂರಿನ ಮೈಸೂರು ಬ್ಯಾಂಕ್‌ ಸರ್ಕಲ್‌ ಹತ್ತಿರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಅಡಿಗಾಸ್‌ ಯಾತ್ರಾ ಸಂಸ್ಥೆಯ 32ನೇ ವಾರ್ಷಿಕೋತ್ಸವ ಭಾನುವಾರ ಅದ್ಧೂರಿಯಾಗಿ ನೆರವೇರಿದೆ. ಈ ವೇಳೆ ಸಂಸ್ಥೆಯ ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ ಮಾಡಲಾಗಿದೆ.

3 ಲಕ್ಷ ಜನರಿಗೆ ಪ್ರವಾಸ; ಅಡಿಗಾಸ್‌ ಯಾತ್ರಾಗೆ ಸಭಾಪತಿ ಹೊರಟ್ಟಿ ಪ್ರಶಂಸೆ

ಅಡಿಗಾಸ್‌ ಯಾತ್ರಾ ವಾರ್ಷಿಕೋತ್ಸವದಲ್ಲಿ ಗಣ್ಯರಿಂದ ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ. -

Prabhakara R
Prabhakara R Jan 18, 2026 6:03 PM

ಬೆಂಗಳೂರು: ಅಡಿಗಾಸ್‌ ಯಾತ್ರಾ (Adigas Yatra's 32nd Anniversary) ಕಳೆದ 32 ವರ್ಷಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರವಾಸಗಳನ್ನು ಆಯೋಜಿಸಿರುವುದು ಅಸಾಧಾರಣ ಸೇವೆಯಾಗಿದೆ. ಯಾವುದೇ ಒಂದು ಸರಕಾರ ಮಾಡದಿರುವ ಕೆಲಸವನ್ನು ಈ ಸಂಸ್ಥೆ ಮಾಡಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು (Basavaraj Horatti) ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರತಿಷ್ಠಿತ ಅಡಿಗಾಸ್‌ ಯಾತ್ರಾ ಟ್ರಾವೆಲ್ ಸಂಸ್ಥೆಯ 32ನೇ ವಾರ್ಷಿಕೋತ್ಸವ, ಹೊಸ ಲಾಂಛನ, ವೆಬ್‌ ಸೈಟ್‌, ಯೂಟ್ಯೂಬ್‌ ಲೋಕಾರ್ಪಣೆ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಅವರು ಮಾತನಾಡಿದರು.

Basavaraj Horatti

1984ರಲ್ಲಿ ತಮ್ಮ ವಿದೇಶ ಪ್ರವಾಸದ ನೆನಪುಗಳನ್ನು ಸ್ವಾರಸ್ಯಕರವಾಗಿ ವರ್ಣಿಸಿದ ಹೊರಟ್ಟಿಯವರು, ವಿದೇಶಗಳಲ್ಲಿ ಅನುಭವ ಇಲ್ಲದೆ ಪ್ರವಾಸ ಮಾಡುವವರಿಗೆ ಹಲವು ಸವಾಲುಗಳು ಎದುರಾಗಬಹುದು. ಅಂಥ ಸಂದರ್ಭದಲ್ಲಿ ಟೂರ್‌ ಆಪರೇಟರ್‌ ಸಂಸ್ಥೆಗಳ ಸೇವೆಗಳು ನೆರವಾಗುತ್ತವೆ. ಅಡಿಗಾಸ್‌ ಯಾತ್ರಾ ಸಂಸ್ಥೆಯಂತೂ ಶಾಲಾ ಮಕ್ಕಳನ್ನು ಕರೆದೊಯ್ಯುವಂತೆ ಅಚ್ಚುಕಟ್ಟಾಗಿ ದೇಶ-ವಿದೇಶಗಳ ಪ್ರವಾಸಗಳನ್ನು ಮಾಡಿ ತೋರಿಸುತ್ತದೆ ಎಂದರು.

ಕನ್ನಡದವರಿಂದ ಕನ್ನಡದವರಿಗಾಗಿಯೇ ಇರುವ ಪ್ರಯಾಣ ಸಂಸ್ಥೆ ಅಡಿಗಾಸ್‌ ಯಾತ್ರಾ: ಕೆ. ನಾಗರಾಜ್ ಅಡಿಗ

ಗ್ರಾಮೀಣ ಜನರಿಗೂ ಪ್ರವಾಸದ ರುಚಿ ತೋರಿಸಿ

_Basavaraj Horatti

ಇವತ್ತು ಪ್ರವಾಸೋದ್ಯಮ ವಿಸ್ತಾರವಾಗಿದೆ. ಉತ್ತರ ಕರ್ನಾಟಕದಲ್ಲೂ ಸಾಕಷ್ಟು ಪ್ರವಾಸಿ ತಾಣಗಳು ಇವೆ. ಅಲ್ಲಿನ ಗ್ರಾಮೀಣ ಜನರಿಗೂ ಪ್ರವಾಸದ ರುಚಿಯನ್ನು ಕಲ್ಪಿಸಲು ಲಕ್ಷ್ಯ ವಹಿಸಿ ಎಂದು ಅಡಿಗಾಸ್‌ ಯಾತ್ರಾಗೆ ಅವರು ಸಲಹೆ ನೀಡಿದರು.

ಅಡಿಗಾಸ್‌ ಯಾತ್ರಾ ನೂತನ ಲಾಂಛನ, ನ್ಯೂಸ್‌ ವೆಬ್‌ಸೈಟ್‌, ಯೂಟ್ಯೂಬ್‌ ಚಾನೆಲ್‌ ಲೋಕಾರ್ಪಣೆ

ಈ ಸಂದರ್ಭ ಸಂಸ್ಥೆಯ ನೂತನ ಲಾಂಛನ ಅನಾವರಣ, ಹೊಸ ಅಡಿಗಾಸ್‌ ಯಾತ್ರಾ ನ್ಯೂಸ್‌ ವೆಬ್‌ಸೈಟ್‌ ಮತ್ತು ನೂತನ ಯೂಟ್ಯೂಬ್‌ ಚಾನೆಲ್‌ ಅನ್ನು ಬಿಡುಗಡೆ ಮಾಡಲಾಯಿತು.

ಈ ವೇಳೆ ಹರಿಹರದ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮಿಯವರು ಮಾತನಾಡಿ, ಜಗತ್ತು ಯೋಗದ ಕಡೆಗೆ ಆಕರ್ಷಿತವಾಗುತ್ತದೆ. ಆಧ್ಯಾತ್ಮಿಕ ಪ್ರವಾಸೋದ್ಯಮ ಬೆಳೆಯುತ್ತಿದೆ. ಅಡಿಗಾಸ್‌ ಯಾತ್ರೆ ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.

ಪ್ರವಾಸಿಗರನ್ನು ಚೆನ್ನಾಗಿ ನೋಡಿಕೊಳ್ಳಿ: ಅದಿತಿ ಪ್ರಭುದೇವ

_Adigas Yatra's 32nd Anniversary (2)

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ನಟಿ ಅದಿತಿ ಪ್ರಭುದೇವ ಮಾತನಾಡಿ, "32 ವರ್ಷ ಟ್ರಾವೆಲ್‌ ಇಂಡಸ್ಟ್ರಿಯಲ್ಲಿ ಸೇವೆ ನೀಡುವುದು ದೊಡ್ಡ ಮಾತು. ದೇಶ ಸುತ್ತಬೇಕು, ಕೋಶ ಓದಬೇಕು ಎಂಬ ಮಾತಿದೆ. ಅದಕ್ಕೆ ಅನ್ವರ್ಥವಾಗುವಂತೆ ಅಡಿಗಾಸ್‌ ಯಾತ್ರಾ ಸೇವೆ ನೀಡುತ್ತಿರುವುದು ಸ್ವಾಗತಾರ್ಹ. ಪ್ರವಾಸ ಮಾಡುವುದರಿಂದ ಬದುಕಿನ ಬಗ್ಗೆ ಜ್ಞಾನ ಹೆಚ್ಚುತ್ತದೆ. ಬೇರೆ ಬೇರೆ ದೇಶಗಳನ್ನು ಭೇಟಿಯಾದಾಗ ಅಲ್ಲಿನ ಸ್ವಚ್ಛತೆ, ನೈರ್ಮಲ್ಯ ಕಂಡು ನಮ್ಮಲ್ಲಿ ಇದರ ಕೊರತೆ ಇದೆ ಎನ್ನಿಸುತ್ತದೆ. ಬೇಸರವಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಅದ್ಭುತ ವಾತಾವರಣ ಇದೆ. ಬೇರೆ ದೇಶಗಳಲ್ಲಿ ಒಂದಿಲ್ಲೊಂದು ಸಮಸ್ಯಾತ್ಮಕ ವಾತಾವರಣವಿದೆ. ಒಂದೋ ಅತಿಯಾದ ಶೀತ ಹವಾಮಾನ, ಇಲ್ಲವೇ ಅತಿಯಾದ ಉಷ್ಣತೆ. ಆದರೆ ಭಾರತದಲ್ಲಿ ಸಮತೋಲನದ ಹವಾಮಾನ ಇದೆ. ಅದರಲ್ಲೂ ಕರ್ನಾಟಕವಂತೂ ಅತ್ಯುತ್ತಮ. ನಾವು ಪ್ರವಾಸಿರಗರನ್ನು ಆದರ, ಪ್ರೀತಿ, ಗೌರವದಿಂದ ಸತ್ಕರಿಸಬೇಕು. ಅಂಥ ಸಂಸ್ಕೃತಿ ಹೆಚ್ಚಬೇಕುʼʼ ಎಂದು ತಿಳಿಸಿದರು.

ಅಡಿಗರು ಸ್ವತಃ ಪ್ರವಾಸಿಗರು: ವಿಶ್ವೇಶ್ವರ ಭಟ್‌

_Adigas Yatra  Anniversary

ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರು ಮಾತನಾಡಿ, "ಅಡಿಗಾಸ್‌ ಯಾತ್ರಾದ ಸ್ಥಾಪಕ ನಾಗರಾಜ್‌ ಅಡಿಗ ಅವರು ಸ್ವತಃ ಉತ್ತಮ ಪ್ರವಾಸಿಗರು. ಹೀಗಾಗಿ ಉದ್ಯಮ ಅವರಿಗೆ ಒಲಿದಿದೆ. ವಿಶ್ವವಾಣಿಯಿಂದ ಟೂರ್‌ ಆಯೋಜಿಸಿದ್ದಾಗಲೂ ಅವರು ಭಾಗವಹಿಸಿದ್ದರು. ಟ್ರಾವೆಲ್ಸ್‌ ಕುರಿತು ಹೊಸ ವಿಚಾರಗಳನ್ನು ಕಲಿಯುವುದು, ಅನುಷ್ಠಾನಗೊಳಿಸುವುದು ಅವರಿಗೆ ಅತ್ಯಂತ ಪ್ರಿಯ. ಇದು ಅವರ ಯಶಸ್ಸಿಗೆ ಕಾರಣವಾಗಿದೆ. ಟೂರ್‌ ಆಪರೇಟರ್‌ ಅನ್ನೋದು ಕ್ರೂಡ್‌ ಆಗುತ್ತದೆ. ವಾಸ್ತವವಾಗಿ ಅವರು ಟೂರ್‌ ಗೈಡ್.‌ ಫೆಸಿಲಿಟೇಟರ್‌ ಕೂಡ ಆಗಿರುತ್ತಾರೆ. ಮನೆಯ ಯಜಮಾನ ಇದ್ದಹಾಗೆ. ಯಾವುದೋ ಊರಿನಲ್ಲಿ ಪ್ರವಾಸ ಹೋಗಿದ್ದಾಗ ಯಾರಾದರೂ ಅಸೌಖ್ಯಗೊಂಡರೆ ತಕ್ಷಣ ಔಷಧ ವ್ಯವಸ್ಥೆ ಮಾಡಿಕೊಡುತ್ತಾರೆ. ಪ್ರವಾಸಿಗರಿಗೆ ಅವರು ಯೋಚಿಸಿಯೇ ಇರದ ತಾಣಗಳನ್ನು ಪರಿಚಯಿಸುತ್ತಾರೆ. ಜನರಿಗೆ ಉತ್ತಮ ಅನುಭವವನ್ನು ಕಟ್ಟಿಕೊಡುತ್ತಾರೆ. ಹೀಗಾಗಿ ಇದು ಜವಾಬ್ದಾರಿಯುತ ಕೆಲಸ ಎಂದು ಹೇಳಿದರು.

Vishweshwar Bhat

ಎಲ್ಲರನ್ನೂ ಸಮಾಧಾಪಡಿಸಲೂ ಆಗುವುದಿಲ್ಲ, ಆದರೆ ಇದು ಸುಲಭದ ಮಾತಲ್ಲ, ವೀಸಾದಿಂದ ಶುರುವಾಗಿ ಮನೆ ತಲುಪುವ ತನಕ ಯಾವುದೋ ಕಷ್ಟ, ನೋವುಗಳು ಎದುರಾಗಬಹುದು, 50 ಮಂದಿಯಲ್ಲಿ 49 ಮಂದಿ ಸರಿಯಾದ ಸಮಯಕ್ಕೆ ಬಂದರೂ, ಒಬ್ಬರು ವಿಳಂಬ ಮಾಡುತ್ತಾರೆ. ಹಾಗೂ ಅವರೊಬ್ಬರಿಂದಲೇ ಉಳಿದ 49 ಮಂದಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮೂರು ಲಕ್ಷಕ್ಕೂ ಹೆಚ್ಚು ಮಂದಿಗೆ ಅಡಿಗರು ಪ್ರವಾಸ ಸೇವೆ ಒದಗಿಸಿರುವುದು ಅಚ್ಚರಿದಾಯಕ ಸಂಗತಿʼʼ ಎಂದು ವಿವರಿಸಿದರು.

32ರ ಸಂಭ್ರಮದಲ್ಲಿ ಅಡಿಗಾಸ್ ಯಾತ್ರಾ

ಟೂರ್‌ ಆಪರೇಟರ್‌ಗಳಿಗೆ ಬೇಡಿಕೆ ಇದ್ದೇ ಇರುತ್ತದೆ

ಈಗ ಎಐ ತಂತ್ರಜ್ಞಾನ, ಚಾಟ್‌ ಜಿಪಿಟಿ, ಆನ್‌ಲೈನ್‌ ಟ್ರಾವೆಲ್‌ ಪ್ರೋಗ್ರಾಮ್‌ಗಳು ಬಂದಿರಬಹುದು. ಆದರೆ ಟೂರ್‌ ಆಪರೇಟರ್‌ಗಳ ಆಪ್ತತೆ ಇಲ್ಲಿ ಇರುವುದಿಲ್ಲ. ಆದ್ದರಿಂದ ಇದಕ್ಕೆ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ಕೋವಿಡ್‌ ಬಳಿಕ ಹೋಟೆಲ್‌, ಏರ್‌ಲೈನ್ಸ್‌ ಮತ್ತು ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಪ್ರವಾಸವು ಓದಿಗಿಂತ ಮಿಗಿಲಾದ ಅನುಭವವನ್ನು ಕೊಡುತ್ತದೆ. ಟೂರ್‌ ಆಪರೇಟರ್‌ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

_Adigas Yatra

ಇತ್ತೀಚೆಗೆ ಓವರ್‌ ಟೂರಿಸಂ ಆಗುತ್ತಿದೆ. ಎಲ್ಲಿ ಹೋದರೂ ಜನಜಂಗುಳಿ. ಜನ ದಟ್ಟಣೆಯ ಅನುಭವ. ಜೋಗಕ್ಕೆ ಹೋದಾಗಲೂ, ನಯಾಗರಕ್ಕೆ ತೆರಳಿದಾಗಲೂ ಜನ ಮೊಬೈಲ್‌ ಮೂಲಕ ಕ್ಲಿಕ್ಕಿಸುವುದರಲ್ಲೇ ಎಲ್ಲ ಸಮಯ ಕಳೆಯುತ್ತಾರೆ. ನಿಜಕ್ಕೂ ನಿಸರ್ಗವನ್ನು ಆಸ್ವಾದಿಸಲು ಮರೆಯುತ್ತಾರೆ. ಹೀಗಾಗದಂತೆ ಟೂರ್‌ ಆಪರೇಟರ್‌ಗಳು ಜನ ಜಾಗೃತಿಯನ್ನು ಮೂಡಿಸಬೇಕು ಎಂದು ವಿಶ್ವೇಶ್ವರ ಭಟ್‌ ಹೇಳಿದರು.

ಅಡಿಗಾಸ್‌ ಯಾತ್ರಾ ಕರ್ನಾಟಕದ ಹೆಮ್ಮೆ: ರಾಧಾಕೃಷ್ಣ ಹೊಳ್ಳ

ಕರ್ನಾಟಕ ಟ್ರಾವೆಲ್‌ ಆಪರೇಟರ್ಸ್ ಅಸೋಸಿಯೇಶನ್‌ ಅಧ್ಯಕ್ಷರಾದ ಕೆ. ರಾಧಾಕೃಷ್ಣ ಹೊಳ್ಳ ಅವರು ಮಾತನಾಡಿ, ಇದುವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ದೇಶ-ವಿದೇಶಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವ ಅದ್ಭುತ ಸೇವೆಯನ್ನು ಅಡಿಗಾಸ್‌ ಯಾತ್ರಾ ನೀಡಿರುವುದು ವಿಶೇಷ. ಕರಾವಳಿ ಮೂಲದ ಉದ್ಯಮಿ ನಾಗರಾಜ್‌ ಅಡಿಗ ಅವರು ಈ ಮೂಲಕ ಪ್ರವಾಸೋದ್ಯಮದಲ್ಲಿ ಛಾಪು ಮೂಡಿಸಿದ್ದಾರೆ. ಅಡಿಗಾಸ್‌ ಯಾತ್ರಾ ಕರ್ನಾಟಕದ ಹೆಮ್ಮೆಯ ಟ್ರಾವೆಲ್‌ ಸಂಸ್ಥೆಯಾಗಿದೆ ಎಂದು‌ ಹೇಳಿದರು.

ಕೇಂದ್ರ ಸರಕಾರವು ಅಡಿಗಾಸ್‌ ಯಾತ್ರಾಗೆ ಉತ್ತಮ ಸೇವಾ ಪೂರೈಕೆದಾರ ಎಂಬ ಮಾನ್ಯತೆ ನೀಡಿದೆ. ಆದರೆ ಉತ್ತಮ ಸೇವೆ ನೀಡುವ ಮೂಲಕ ಆ ಹಿರಿಮೆಯನ್ನು ಅಡಿಗಾಸ್‌ ಯಾತ್ರಾ ಉಳಿಸಿಕೊಂಡಿರುವುದು ಗಮನಾರ್ಹ. ದೇಶೀಯ ಟೂರಿಸಂನಲ್ಲಿ ಅಡಿಗಾಸ್‌ ಅತ್ಯಂತ ಗುಣಮಟ್ಟ ಸೇವೆ ನೀಡಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ದೇಶದಲ್ಲಿ ಟೂರಿಸಂ ಕೈಗೆಟಕುವ ದರದಲ್ಲಿ ಜನ ಸಾಮಾನ್ಯರಿಗೆ ಸಿಗುವಂತಾಗಬೇಕು. ಇವತ್ತು ಥಾಯ್ಲೆಂಡ್‌, ಇಂಡೊನೇಷ್ಯಾಗೆ ಕಡಿಮೆ ದರದಲ್ಲಿ ಹೋಗಿ ಬರಬಹುದು. ಆದರೆ ನಮ್ಮದೇ ಸ್ಥಳೀಯ ತಾಣಗಳಿಗೆ ಅದಕ್ಕಿಂತ ಹೆಚ್ಚು ದುಬಾರಿಯಾಗುತ್ತದೆ. ಆದ್ದರಿಂದ ದೇಶೀಯ ಟೂರಿಸಂ ಅಗ್ಗವಾಗಬೇಕು ಎಂದರು.

ಅಡಿಗಾಸ್ ಯಾತ್ರಾ ಸಂಸ್ಥಾಪಕರಾದ ನಾಗರಾಜ ಅಡಿಗ ಅವರು ಸ್ವಾಗತಿಸಿದರು. ಆಶಾ ಅಡಿಗ ಅವರು ವಂದಿಸಿದರು. ಅದ್ಧೂರಿ ಸಮಾರಂಭದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.