ಲಂಚ ಪ್ರಕರಣ; ಶಾಸಕ ಚಂದ್ರು ಲಮಾಣಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ
1 ಕೋಟಿ ರೂ. ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿ ನಡೆಸಲು 11 ಲಕ್ಷ ರೂ. ಕಮಿಷನ್ ನೀಡಬೇಕೆಂದು ಶಾಸಕ ಚಂದ್ರು ಲಮಾಣಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಲಂಚ ಸ್ವೀಕರಿಸುವಾಗ ಶನಿವಾರ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.
ಶಾಸಕ ಚಂದ್ರು ಲಮಾಣಿ. -
ಬೆಂಗಳೂರು: ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬಿಜೆಪಿ ಶಾಸಕ ಚಂದ್ರು ಲಮಾಣಿ (Chandru Lamani) ಅವರಿಗೆ ಮಾ.2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗುತ್ತಿಗೆದಾರನಿಂದ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿಜೆಪಿ ಶಾಸಕ ಬಿದ್ದಿದ್ದರು. ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸಂತೋಷ್ ಗಜಾನನ ಭಟ್ ಅವರು ಶಾಸಕನಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸುಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿಗೆ 1 ಕೋಟಿ ರೂ. ಮಂಜೂರಾಗಿತ್ತು. ಗುತ್ತಿಗೆದಾರ ಕಾಮಗಾರಿ ನಡೆಸಲು 11 ಲಕ್ಷ ರೂ. ಕಮಿಷನ್ ನೀಡಬೇಕೆಂದು ಶಾಸಕ ಲಮಾಣಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅದರಂತೆ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಮುಂಡರಗಿ ತಾಲೂಕಿನ ದಿಂಡೂರು ತಾಂಡಾದ ಚಂದ್ರು ಲಮಾಣಿ ರಾಜಕಾರಣಿ ಆಗುವುದಕ್ಕೂ ಮುನ್ನ ಶಿರಹಟ್ಟಿ ತಾಲೂಕು ಆರೋಗ್ಯಾಧಿಕಾರಿಯಾಗಿದ್ದರು. ಆಗ ಹೊರರೋಗಿ ವಿಭಾಗದ ಚೀಟಿ ಮಾಡುವ ಹಣದಲ್ಲಿ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಆ ನಂತರ, ನೌಕರಿಗೆ ರಾಜೀನಾಮೆ ನೀಡಿ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಬಾಲಾಜಿ ಆಸ್ಪತ್ರೆಯನ್ನು ಆರಂಭಿಸಿದ್ದರು.
ಕೋವಿಡ್ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜನೆ, ಉಚಿತ ಆರೋಗ್ಯ ತಪಾಸಣೆ, ಆಹಾರ ಕಿಟ್ ವಿತರಣೆ ಮಾಡುವ ಮೂಲಕ ಜನರ ಮನಗೆಲ್ಲುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಇದೀಗ ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ.
ಏನಿದು ಪ್ರಕರಣ?
ಕಾಮಗಾರಿಯೊಂದರ ಸಂಬಂಧ ಲಕ್ಷ್ಮೇಶ್ವರ ಪಟ್ಟಣದ ಬಾಲಾಜಿ ಆಸ್ಪತ್ರೆಯಲ್ಲಿ ಲಂಚ ಸ್ವೀಕರಿಸುವ ವೇಳೆ ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಅವರನ್ನು ಶನಿವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಜಿಲ್ಲೆಯ ಸಂಕದಾಳ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚೆಕ್ ಡ್ಯಾಂ ನಿರ್ಮಾಣ ಹಾಗೂ ತಡೆಗೋಡೆ ಕಾಮಗಾರಿಗೆ 1 ಕೋಟಿ ರುಪಾಯಿ ಮಂಜೂರಾಗಿತ್ತು. ಈ ಕಾಮಗಾರಿ ವಿಜಯರಾಜ ಪೂಜಾರ ಎನ್ನುವವರು ಗುತ್ತಿಗೆ ಪಡೆದಿದ್ದರು. ಆದರೆ, ಕಾಮಗಾರಿ ನಡೆಸಲು ಒಟ್ಟು 11 ಲಕ್ಷ ಕಮಿಷನ್ (ಶೇ.12) ಬೇಡಿಕೆಯನ್ನು ಶಾಸಕರು ಇಟ್ಟಿದ್ದರು ಎನ್ನಲಾಗಿದೆ. ಅದರಂತೆ 5 ಲಕ್ಷ ರೂ. ಲಂಚ ಪಡೆಯುವ ವೇಳೆ ಬಿಜೆಪಿ ಶಾಸಕ ಚಂದ್ರ ಲಮಾಣಿ ಸಿಕ್ಕಿಬಿದ್ದಿದ್ದರು. ಇದೇ ವೇಳೆ ಶಾಸಕನ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಎಂಬುವರನ್ನೂ ವಶಕ್ಕೆ ಪಡೆಯಲಾಗಿತ್ತು.