Free Food in hospitals: ಇಸ್ಕಾನ್ ಸಹಯೋಗದಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಪ್ರಾರಂಭ
Government hospitals: ಇಸ್ಕಾನ್ ಬೆಂಗಳೂರು, ತಮ್ಮ ಅಕ್ಷಯಪಾತ್ರ ಯೋಜನೆಯ ಮೂಲಕ ಕಳೆದ 25 ವರ್ಷಗಳಿಂದಲೂ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ವಿಶಾಲ ಅನುಭವವನ್ನು ಹೊಂದಿದೆ. ಅವರು ಸ್ವಚ್ಛ ವಾತಾವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಿ ವಿತರಿಸಲು ಪರಿಣತಿಯನ್ನು ಹೊಂದಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

-

ಬೆಂಗಳೂರು, ಸೆ. 2, 2025: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಸ್ಕಾನ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ ಸೆಪ್ಟೆಂಬರ್ 2025 ರಿಂದ ನಗರದ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಪೌಷ್ಟಿಕ ಆಹಾರವನ್ನು (Free Food in hospitals) ವಿತರಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.
ಈ ಕಾರ್ಯಕ್ರಮವನ್ನು ಮಂಗಳವಾರ, ಸರ್ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಎಸ್. ರಘು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಜಯನಗರ ಜೆನೆರಲ್ ಆಸ್ಪತ್ರೆಯಲ್ಲಿ ಜಯನಗರ ಕ್ಷೇತ್ರದ ಶಾಸಕರಾದ ಸಿ.ಕೆ. ರಾಮಮೂರ್ತಿ ಅವರು ಆಸ್ಪತ್ರೆಯ ಹಿರಿಯ ಅಧಿಕಾರಿಗಳೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಪೌಷ್ಟಿಕ ಆಹಾರ ವಿತರಣೆ ಕೆ.ಸಿ. ಜನರಲ್ ಆಸ್ಪತ್ರೆ (ಮಲ್ಲೇಶ್ವರಂ), ಸರ್ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ ಮತ್ತು ಜಯನಗರ ಜನರಲ್ ಆಸ್ಪತ್ರೆಗಳಲ್ಲಿ ಪ್ರತಿ ದಿನ ಐದು ಬಾರಿ, ಒಳರೋಗಿಗಳಿಗೆ ನೀಡಲಾಗುತ್ತದೆ.
ಆಹಾರ ಯೋಜನೆಯ ಮುಖ್ಯಾಂಶಗಳು:
ಪ್ರತಿ ದಿನ ಬೆಳಗಿನ ಉಪಹಾರ, ತಿಂಡಿ, ಮಧ್ಯಾಹ್ನದ ಊಟ, ಸಂಜೆ ತಿಂಡಿ ಮತ್ತು ರಾತ್ರಿ ಊಟ.
ವಿಶೇಷ ಆಹಾರ ಯೋಜನೆಗಳು:
- ಸಾಮಾನ್ಯ ಆಹಾರ
- ಚಿಕಿತ್ಸಾ ಆಹಾರ
- ಗರ್ಭಿಣಿ ಮತ್ತು ಬಾಣಂತಿಯರ ಆಹಾರ
- ಮಧುಮೇಹಿ ರೋಗಿಗಳ ಆಹಾರ
- ಮಕ್ಕಳ ಆಹಾರ
ಮೆನು:
- ರವೆ ಉಪ್ಮಾ, ಪೊಂಗಲ್, ಗೋಧಿ ಗಂಜಿ, ರಾಗಿಮುದ್ದೆ, ಚಪಾತಿ, ಅನ್ನ, ಸಾಂಬಾರ್, ಪಲ್ಯ, ಸೋಯಾ, ಹಾಲು, ಹಣ್ಣುಗಳು, ಮೊಸರು, ಬಿಸ್ಕತ್ ಮತ್ತು ಚಿಕ್ಕಿ.
ಪೌಷ್ಟಿಕ ಮಾನದಂಡಗಳು:
- ಸಾಮಾನ್ಯ ರೋಗಿಗಳು – ಸುಮಾರು 2200 ಕ್ಯಾಲರಿ, 70 ಗ್ರಾಂ ಪ್ರೋಟೀನ್
- ತಾಯಂದಿರು – 1800–2460 ಕ್ಯಾಲರಿ, 60–69 ಗ್ರಾಂ ಪ್ರೋಟೀನ್
- ಮಕ್ಕಳು – 1300–1400 ಕ್ಯಾಲರಿ, 40 ಗ್ರಾಂ ಪ್ರೋಟೀನ್
ಈ ಸುದ್ದಿಯನ್ನೂ ಓದಿ | CM Siddaramaiah: ಧರ್ಮಸ್ಥಳಕ್ಕೆ ಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗುವುದಿಲ್ಲ- ಸಿಎಂ ಸಿದ್ದರಾಮಯ್ಯ ಟಾಂಗ್
ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಗಳಲ್ಲೂ ಪೌಷ್ಟಿಕ ಆಹಾರ ವಿತರಣೆ
ಪೌಷ್ಟಿಕ ಆಹಾರ ವಿತರಣೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, “ಸರ್ಕಾರದ ಈ ಮುಂದಾಳತ್ವದಿಂದ ರೋಗಿಗಳ ಶೀಘ್ರ ಗುಣಮುಖತೆಗೆ ಮತ್ತು ಉತ್ತಮ ಆರೋಗ್ಯ ಫಲಿತಾಂಶಕ್ಕೆ ಅಗತ್ಯವಾದ ಪೌಷ್ಟಿಕತೆ ದೊರೆಯುತ್ತದೆ. ಇದು ರೋಗಿಯ ಆರೈಕೆ, ತಾಯಂದಿರ ಆರೋಗ್ಯ ಮತ್ತು ಮಕ್ಕಳ ಪೌಷ್ಟಿಕತೆಗೆ ಸರ್ಕಾರ ನೀಡುತ್ತಿರುವ ಬದ್ಧತೆಯ ಪ್ರತೀಕವಾಗಿದೆ. ಇಸ್ಕಾನ್ ಬೆಂಗಳೂರು, ತಮ್ಮ ಅಕ್ಷಯಪಾತ್ರ ಯೋಜನೆಯ ಮೂಲಕ ಕಳೆದ 25 ವರ್ಷಗಳಿಂದಲೂ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವ ವಿಶಾಲ ಅನುಭವವನ್ನು ಹೊಂದಿದೆ. ಅವರು ಸ್ವಚ್ಛ ವಾತಾವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಆಹಾರವನ್ನು ತಯಾರಿಸಿ ವಿತರಿಸಲು ಪರಿಣತಿಯನ್ನು ಹೊಂದಿದ್ದು, ರೋಗಿಗಳ ಅಗತ್ಯಕ್ಕೆ ಅನುಗುಣವಾದ ಆಹಾರವನ್ನು ಪೂರೈಸಲು ಸಮರ್ಥರಾಗಿದ್ದಾರೆ. ಈ ಆಸ್ಪತ್ರೆಗಳಲ್ಲಿ ದೊರೆಯುವ ಪ್ರತಿಕ್ರಿಯೆಗಳ ಆಧಾರದ ಮೇಲೆ, ಮುಂದಿನ ದಿನಗಳಲ್ಲಿ ಇಸ್ಕಾನ್ ಕೈಗೆತ್ತಿಕೊಳ್ಳಬಹುದಾದ ಇತರ ಜಿಲ್ಲಾ ಆಸ್ಪತ್ರೆಗಳಿಗೂ ಸರ್ಕಾರ ಈ ಸೌಲಭ್ಯವನ್ನು ವಿಸ್ತರಿಸುವ ವಿಚಾರ ಹೊಂದಿದೆ.” ಎಂದು ಹೇಳಿದರು.