ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Metro Yellow Line: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್; ಆ.10ರಂದು ಹಳದಿ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರಕಿದ್ದು, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಆ.10ರಂದು ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಕೇಂದ್ರ ಸಚಿವ ಮನೋಹರ್ ಲಾಲ್ ಮಾಹಿತಿ ನೀಡಿದ್ದಾರೆ.

ಆ.10ರಂದು ಹಳದಿ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ

Vishakha Bhat Vishakha Bhat Aug 3, 2025 12:28 PM

ಬೆಂಗಳೂರು: ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ದೊರಕಿದ್ದು, ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಆ.10ರಂದು ನಮ್ಮ ಮೆಟ್ರೋ ಯೆಲ್ಲೋ ಲೈನ್ (Metro Yellow Line) ಉದ್ಘಾಟನೆ ಮಾಡಲಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಕೇಂದ್ರ ಸಚಿವ ಮನೋಹರ್ ಲಾಲ್ ಮಾಹಿತಿ ನೀಡಿದ್ದಾರೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗ ಸುಮಾರು 19.5 ಕಿ.ಮೀ ಇದೆ. ಈಗಾಗಲೇ ಸಂಚಾರ ಮುಕ್ತಕ್ಕೆ ಸಿದ್ಧವಾಗಿದೆ. ಹಳದಿ ಮಾರ್ಗದ ಪ್ರಾರಂಭಕ್ಕೆ ಕಾಯುತ್ತಿರುವವರಿಗೆ ಇನ್ನು ಮುಂದೆ ಸಂಚಾರ ಸುಲಭವಾಗಲಿದೆ.

ಮಾರ್ಗ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ, ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸಲಿದೆ. ಪ್ರತಿದಿನ ಸುಮಾರು 25,000 ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆ ಇದೆ. ರೈಲುಗಳು 20 ರಿಂದ 30 ನಿಮಿಷಗಳ ಅಂತರದಲ್ಲಿ ಸಂಚರಿಸಬಹುದು ಎಂದು ಹೇಳಲಾಗಿದೆ. 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹಳದಿ ಮಾರ್ಗವು 16 ನಿಲ್ದಾಣಗಳನ್ನು ಹೊಂದಿದ್ದು, ವಿಶೇಷವಾಗಿ ಜನದಟ್ಟಣೆಯ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುವ ನಿರೀಕ್ಷೆಯಿದೆ.

ಈ ಮಾರ್ಗದಲ್ಲಿ ಪ್ರತಿದಿನ ಸುಮಾರು ಎಂಟು ಲಕ್ಷ ಪ್ರಯಾಣಿಕರು ಸಂಚರಿಸಬಹುದು ಎಂದು ಊಹಿಸಲಾಗಿದೆ. ಇದು ದಕ್ಷಿಣ ಬೆಂಗಳೂರಿನ ಪ್ರಮುಖ ವಸತಿ ಮತ್ತು ಕೈಗಾರಿಕಾ ಕಾರಿಡಾರ್‌ಗಳು ಮತ್ತು ಎಲೆಕ್ಟ್ರಾನಿಕ್ ಸಿಟಿಯ ನಡುವೆ ಪ್ರಮುಖ ಸಂಪರ್ಕವನ್ನು ನೀಡುತ್ತದೆ. ಹಳದಿ ಮಾರ್ಗದ ಉದ್ಘಾಟನೆಯ ಜೊತೆ ಪ್ರಧಾನಿ 15,611 ಕೋಟಿ ರೂ. ವೆಚ್ಚದ ಹಂತ-3 ವಿಸ್ತರಣೆಯನ್ನು ಉದ್ಘಾಟಿಸಲಿದ್ದಾರೆ. ಇದು 44.65 ಕಿ.ಮೀ ಹೊಸ ಮಾರ್ಗಗಳನ್ನು ಸೇರಿಸುವ ಮೂಲಕ ನಗರದ ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಯಾಗಿದೆ. ಈ ಯೋಜನೆಯು ಎರಡು ಮಾರ್ಗಗಳು ಮತ್ತು 31 ನಿಲ್ದಾಣಗಳನ್ನು ಒಳಗೊಂಡಿದೆ, 2029 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಈ ಸುದ್ದಿಯನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಇದೇ ಮೊದಲ ಬಾರಿಗೆ ಯಕೃತ್‌ ಸಾಗಣೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ ಅಂಗ ಕಸಿ ಯಶಸ್ವಿ

ಹಳದಿ ಮಾರ್ಗದ ಉದ್ಘಾಟನೆ ಕುರಿತು ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, "ಈ ಪ್ರದೇಶಕ್ಕೆ ಮಾತ್ರ ಸುಮಾರು 20,000 ಕೋಟಿ ರೂಪಾಯಿ ಮೌಲ್ಯದ ಮೆಟ್ರೋ ಮೂಲಸೌಕರ್ಯವನ್ನು ಮೀಸಲಿಟ್ಟಿದ್ದು, ಬೆಂಗಳೂರು ದಕ್ಷಿಣದ ಸಾರ್ವಜನಿಕ ಸಾರಿಗೆ ಮೂಲಸೌಕರ್ಯಕ್ಕೆ ಪ್ರಧಾನಿ ಮೋದಿ ಅವರು ವಿಶೇಷ ಕಾಳಜಿ ತೆಗೆದುಕೊಂಡು ಮಂಜೂರಾತಿ ನೀಡಿದ್ದರು. ಅವರ ಈ ಕಾರ್ಯಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.