ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸದನದಲ್ಲಿ ಭಾರೀ ಹೈಡ್ರಾಮಾ; ಸರ್ಕಾರ ನೀಡಿದ ಭಾಷಣ ಓದದೆ ತೆರಳಿದ ಗವರ್ನರ್‌ ಗೆಹ್ಲೋಟ್

Governor Gehlot: ಇಂದಿನಿಂದ ಆರಂಭವಾಗ್ತಿರುವ ರಾಜ್ಯ ವಿಧಾನಸಭೆ–ವಿಧಾನಪರಿಷತ್ ಜಂಟಿ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹಾಜರಾಗಿದ್ದರು. ಆದರೆ ಸರ್ಕಾರದ ಭಾಷಣಕ್ಕೆ ರಾಜ್ಯಪಾಲರು ವಿರೋಧ ವ್ಯಕ್ತ ಪಡಿಸಿದ್ದು, ಕೇವಲ ಎರಡೇ ಸಾಲಿನಲ್ಲಿ ಭಾಷಣ ಮುಗಿಸಿ ಅಧಿವೇಶನದಿಂದ ಹೊರ ನಡೆದಿದ್ದಾರೆ.

ಸರ್ಕಾರ ನೀಡಿದ ಭಾಷಣ ಓದದೆ ತೆರಳಿದ ಗವರ್ನರ್‌

ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ -

Vishakha Bhat
Vishakha Bhat Jan 22, 2026 11:20 AM

ಬೆಂಗಳೂರು: ಇಂದಿನಿಂದ ಆರಂಭವಾಗಿರುವ ರಾಜ್ಯ ವಿಧಾನಸಭೆ–ವಿಧಾನಪರಿಷತ್ ಜಂಟಿ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲ (Governor Gehlot) ಥಾವರ್‌ಚಂದ್ ಗೆಹ್ಲೋಟ್ ಹಾಜರಾಗಿದ್ದರು. ಆದರೆ ಸರ್ಕಾರದ ಭಾಷಣಕ್ಕೆ ರಾಜ್ಯಪಾಲರು ವಿರೋಧ ವ್ಯಕ್ತ ಪಡಿಸಿದ್ದು, ಕೇವಲ ಎರಡೇ ಸಾಲಿನಲ್ಲಿ ಭಾಷಣ ಮುಗಿಸಿ ಅಧಿವೇಶನದಿಂದ ಹೊರ ನಡೆದಿದ್ದಾರೆ. ರಾಜ್ಯಪಾಲರು ನಿರ್ಗಮಿಸುತ್ತಿದ್ದಂತೆ ಕೈ ಶಾಸಕರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, “ನನ್ನ ಸರ್ಕಾರವು ರಾಜ್ಯದ ಅರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿಯನ್ನು ದ್ವಿಗುಣ ಮಾಡಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದಷ್ಟೇ ಹೇಳಿ, ಭಾಷಣ ಮುಗಿಸಿದ್ದಾರೆ.

ರಾಜ್ಯಪಾಲರು ಭಾಷಣ ಪೀಠದಿಂದ ಕೆಳಗಿಳಿದು ಬಂದಾಗ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರು ರಾಜ್ಯಪಾಲರಿಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಪಾಲರ ನಿರ್ಗಮದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ನಡೆಯನ್ನು ಖಂಡಿಸಿ ಬೃಹತ್‌ ಪ್ರತಿಭಟನೆಯನ್ನು ಕೈಗೊಳ್ಳುತ್ತೇವೆ. ಇದು ಸಂವಿಧಾನಕ್ಕೆ ಅವರು ಮಾಡಿದ ಅವಮಾನ ಎಂದು ಕಿಡಿ ಕಾರಿದರು.

ವಿವಾದಕ್ಕೆ ಕಾರಣವೇನು?

ಸರ್ಕಾರವು ರಾಜ್ಯಪಾಲರ ಭಾಷಣದ ಪ್ರತಿಯನ್ನು ಸಿದ್ಧಪಡಿಸಿ ಲೋಕಭವನಕ್ಕೆ ಕಳುಹಿಸಿಕೊಟ್ಟಿತ್ತು. ಆದರೆ, ಸರ್ಕಾರ ಸಿದ್ಧಪಡಿಸಿದ ಈ ಭಾಷಣದ ಬಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಮನ್‌ನರೇಗಾ ಹೆಸರು ಬದಲಾವಣೆ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕೆಲ ವಿಚಾರಗಳನ್ನು ಒಳಗೊಂಡಿತ್ತು.

ಈ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಲೋಕಭವನ ಮತ್ತು ರಾಜ್ಯ ಸರ್ಕಾರದ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಭಾಷಣದಲ್ಲಿರುವ ಕೆಲವು ರಾಜಕೀಯ ಅಂಶಗಳು ಅಥವಾ ಕೇಂದ್ರ ಸರ್ಕಾರದ ಬಗೆಗಿನ ಟೀಕೆಗಳ ಬಗ್ಗೆ ರಾಜ್ಯಪಾಲರು ಅಸಮಾಧಾನ ಹೊಂದಿದ್ದರು. ಅಂತಿಮವಾಗಿ ಈ ಭಿನ್ನಾಭಿಪ್ರಾಯ ಬಗೆಹರಿಯದ ಕಾರಣ, ರಾಜ್ಯಪಾಲರು ಭಾಷಣ ಮಾಡದೆ ವಾಪಸ್ ಹೋಗುವ ನಿರ್ಧಾರ ಕೈಗೊಂಡಿದ್ದಾರೆ.