ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೇವಲ 47 ಗಂಟೆಯಲ್ಲೇ 14,275‌ ಬಾರ್‌ ಲೈಸೆನ್ಸ್‌ ನವೀಕರಣ; ಅಬಕಾರಿ ಇಲಾಖೆಯಿಂದ ಹೊಸ ದಾಖಲೆ

ಅಬಕಾರಿ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯಲು ಇನ್ನು ಮುಂದೆ 'ಕೌನ್ಸೆಲಿಂಗ್' ಮೂಲಕ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ವರ್ಗಾವಣೆ ನಂತರ ಲೈಸೆನ್ಸ್ ರಿನೀವಲ್ ವಿಚಾರದಲ್ಲಿ ಅಂಗಡಿಯವರಿಗೆ ಆಗುತ್ತಿದ್ದ ತೊಂದರೆಗಳನ್ನು ಪರಿಹರಿಸಲಾಗುವುದು ಎಂದು ಸಚಿವ ಆರ್‌.ಬಿ.ತಿಮ್ಮಾಪುರ ತಿಳಿಸಿದ್ದಾರೆ.

ಕೇವಲ 47 ಗಂಟೆಯಲ್ಲೇ 14,275‌ ಬಾರ್‌ ಲೈಸೆನ್ಸ್‌ ನವೀಕರಣ

ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ. -

Prabhakara R
Prabhakara R Feb 10, 2026 9:10 PM

ಬೆಂಗಳೂರು, ಫೆ.10: ಎಲ್ಲಾ ಸರ್ಕಾರಗಳಲ್ಲೂ ಆರೋಪಗಳು ಬಂದಿವೆ. ವರ್ಗಾವಣೆ ದಂಧೆ, ಲೈಸೆನ್ಸ್‌ ನವೀಕರಣದಲ್ಲಿ ಅಧಿಕಾರಿಗಳು ದುಡ್ಡು ತಿಂದರು ಎಂಬ ಆರೋಪಗಳು ಬರುತ್ತವೆ. ಇವುಗಳನ್ನು ಸರಿ ಮಾಡುವ ಕೆಲಸ ನಾನು ಮಾಡಿದ್ದೇನೆ. ಅಬಕಾರಿ ಇಲಾಖೆಯಲ್ಲಿ (Excise Department) ಪಾರದರ್ಶಕತೆ ತರಲು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ. ಕೇವಲ 47 ಗಂಟೆಗಳಲ್ಲಿ 14,275‌ ಬಾರ್‌ ಲೈಸೆನ್ಸ್‌ಗಳನ್ನು ನವೀಕರಿಸುವ ಮೂಲಕ ಇಲಾಖೆ ಹೊಸ ದಾಖಲೆ ಬರೆದಿದೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಮಂಗಳವಾರ ಸಭೆ ನಡೆದ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಮದ್ಯ ಮಾರಾಟ ಸನ್ನದು ನೀಡುವಲ್ಲಿ ಲಂಚ ಪಡೆಯಲು ಅಧಿಕಾರಿಗಳು ನನ್ನ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹಾಗೆ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಸಾರ್ವಜನಿಕರು ಮತ್ತು ವ್ಯಾಪಾರಿಗಳಿಗೆ ಸನ್ನದು (License) ಪಡೆಯುವಲ್ಲಿ ಆಗುತ್ತಿದ್ದ ವಿಳಂಬ ಮತ್ತು ಕಿರುಕುಳ ತಪ್ಪಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 'ಈ ಹಿಂದೆ ಸಿಎಲ್-7 ಲೈಸೆನ್ಸ್ ಪಡೆಯಲು ಅರ್ಜಿದಾರರು ಸುಮಾರು 16 ಟೇಬಲ್‌ಗಳಿಗೆ ಅಲೆಯಬೇಕಿತ್ತು. ಈ ಅಲೆದಾಟವನ್ನು ತಪ್ಪಿಸಲು ನಾವು ಆ ಸಂಖ್ಯೆಯನ್ನು ಕೇವಲ 7 ಟೇಬಲ್‌ಗಳಿಗೆ ಸೀಮಿತಗೊಳಿಸಿದ್ದೇವೆ. ಇಡೀ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದಂತೆ ಮಾಡಲಾಗುತ್ತಿದೆ' ಎಂದು ಸಚಿವರು ವಿವರಿಸಿದರು.

ಇನ್ನು ಬಾರ್ ಲೈಸೆನ್ಸ್‌ಗಳನ್ನು ರಿನಿವಲ್ ಮಾಡಿಕೊಳ್ಳುವುದಕ್ಕೂ ಪರದಾಡಬೇಕಿತ್ತು. ಆದರೆ, ಅದನ್ನೂ ಸರಳೀಕೃತಗೊಳಿಸಿ ಈ ಬಾರಿ ಕೇವಲ 47 ಗಂಟೆಗಳಲ್ಲಿ 14,275 ಲೈಸೆನ್ಸ್‌ಗಳನ್ನು ನವೀಕರಿಸುವ ಮೂಲಕ ಇಲಾಖೆ ಹೊಸ ದಾಖಲೆ ಬರೆದಿದೆ ಎಂದು ತಿಳಿಸಿದರು.

ಭ್ರಷ್ಟಚಾರ ಎಸಗಿದರೆ ಕಠಿಣ ಕ್ರಮ:

ಇಲಾಖೆಯಲ್ಲಿ ಕರ್ತವ್ಯ ಲೋಪ ಎಸಗುವ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಈ ವರ್ಷ ಲೋಕಾಯುಕ್ತದಲ್ಲಿ 54 ಪ್ರಕರಣಗಳು ದಾಖಲಾಗಿದ್ದು, ಇಲಾಖಾ ಹಂತದಲ್ಲಿ 85 ಪ್ರಕರಣಗಳು ದಾಖಲಾಗಿವೆ. ಸರ್ಕಾರದ ಹಂತದಲ್ಲಿ 19 ಸೇರಿ ಒಟ್ಟು 158 ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. 'ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಇಲಾಖಾ ವಿಚಾರಣೆ ಬಾಕಿ ಇದ್ದರೆ, ಅಂತಹವರಿಗೆ ಯಾವುದೇ ಕಾರಣಕ್ಕೂ ಎಕ್ಸಿಕ್ಯೂಟಿವ್ ಪೋಸ್ಟ್ (ಕಾರ್ಯಕಾರಿ ಹುದ್ದೆ) ನೀಡುವುದಿಲ್ಲ' ಎಂದು ಸಚಿವರು ಎಚ್ಚರಿಸಿದರು.

ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ಗೊಂದಲಗಳಿಗೆ ತೆರೆ ಎಳೆಯಲು ಇನ್ನು ಮುಂದೆ 'ಕೌನ್ಸೆಲಿಂಗ್' ಮೂಲಕ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ವರ್ಗಾವಣೆ ನಂತರ ಲೈಸೆನ್ಸ್ ರಿನೀವಲ್ ವಿಚಾರದಲ್ಲಿ ಅಂಗಡಿಯವರಿಗೆ ಆಗುತ್ತಿದ್ದ ತೊಂದರೆಗಳನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

43,000 ಕೋಟಿ ರಾಜಸ್ವ ಸಂಗ್ರಹದ ಗುರಿ

ಚಾಲ್ತಿ ಸಾಲಿನಲ್ಲಿ ಅಬಕಾರಿ ಇಲಾಖೆಯಿಂದ 43,000 ಕೋಟಿ ರೂಪಾಯಿ ರಾಜಸ್ವ ಸಂಗ್ರಹದ ಗುರಿ ಹೊಂದಲಾಗಿದ್ದು, ಈವರೆಗೆ 34,235 ಕೋಟಿ ರೂಪಾಯಿ ಸಂಗ್ರಹವಾಗಿದೆ. ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಸೇಂದಿ ಮಾರಾಟ ಮತ್ತು ಹೊರ ರಾಜ್ಯಗಳಿಗೆ ಅಕ್ರಮವಾಗಿ ಮದ್ಯ ಸಾಗಾಣಿಕೆಯಾಗುವುದನ್ನು ತಡೆಗಟ್ಟಲು ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗಡಿ ಭಾಗಗಳಲ್ಲಿ ಕಣ್ಗಾವಲು ಹೆಚ್ಚಿಸಲು ಮತ್ತು ಇಲಾಖೆಯ ತೊಡಕುಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಮ್ಮಾಪುರ ತಿಳಿಸಿದರು.