ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ನಮ್ಮ ಸರ್ಕಾರವೇ ಎಂದ ಡಿ.ಕೆ. ಶಿವಕುಮಾರ್‌

Bengaluru metro fare hike: ಮೆಟ್ರೋ ಪ್ರಯಾಣ ದರ ಏರಿಕೆ ತಡೆ ಹಿಡಿಯಿರಿ ಎಂದು ಕೇಂದ್ರ ಸರ್ಕಾರದವರು ಪತ್ರ ಬರೆದಿರಬಹುದು. ಆದರೆ ಈ ರೀತಿ ಮಾಡಲು ಅವರಿಗೂ ಕಾನೂನಿನಲ್ಲಿ ಅವಕಾಶವಿಲ್ಲ. ಅವರು ಯಾವ ಕಾನೂನಿನ ಅಡಿ, ಯಾವ ಆಕ್ಟ್‌ ಅನ್ವಯ ಪತ್ರ ಬರೆದಿದ್ದಾರೆ ಎಂದು ಹೇಳಿದರೆ ಒಪ್ಪಿಕೊಳ್ಳೋಣ. ಇದನ್ನು ಹೊಸದಾಗಿ ತೀರ್ಮಾನ ಮಾಡಬೇಕು ಎಂದಾದರೆ ನೂತನ ದರ ನಿಗದಿ ಸಮಿತಿ ರಚನೆ ಆಗಬೇಕು. ನಾನು ನಮ್ಮ ಜನರ ದನಿಯಾಗಬೇಕು ಎಂದು ಕೆಲಸ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ: ಡಿಕೆಶಿ

ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್. -

Profile
Siddalinga Swamy Feb 9, 2026 9:09 PM

ಬೆಂಗಳೂರು, ಫೆ.9: ರಾಜ್ಯ ಕಾಂಗ್ರೆಸ್ ಸರ್ಕಾರವೇ ಮೆಟ್ರೋ (Namma Metro) ಪ್ರಯಾಣ ದರ ಏರಿಕೆ ತಡೆಹಿಡಿಯುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಕಳುಹಿಸಿರುವ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar)‌ ಹೇಳಿದರು. ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಉಂಟಾಗಿರುವ ವಿವಾದದ ಬಗ್ಗೆ ಅವರು ಸ್ಪಷ್ಟನೆ ನೀಡಿದರು.

ಇಲ್ಲಿ ಯಾವುದೇ ರಾಜಕೀಯವಿಲ್ಲ. ನಮಗೆ ಯಾವುದೇ ರೀತಿಯ ನಿರ್ದೇಶನ ನೀಡುವ ಹಾಗೂ ಹಸ್ತಕ್ಷೇಪ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ದೆಹಲಿ ಮೆಟ್ರೋ ಅಳವಡಿಸಿಕೊಂಡಿರುವ ಸೂತ್ರದ ಅನ್ವಯದಂತೆ ಹೊಸದಾಗಿ ಲೆಕ್ಕಾಚಾರ ಮಾಡಲು ತಿಳಿಸಿದ್ದೇನೆ ಎಂದರು.

ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ದೆಹಲಿಯಲ್ಲಿ ಸಭೆ ಕರೆಯುತ್ತಾರೆ ಎಂದುಕೊಂಡಿದ್ದೆ. ಸಭೆ ನಡೆಸಿ ಏನು ಆದೇಶ ಕೊಡುತ್ತಾರೆ ಎಂದು ಕಾಯುತ್ತಿದ್ದೆ. ಏನು ರಾಜಕಾರಣ ಮಾಡುತ್ತಾರೆ ಎಂದು ನೋಡುತ್ತಿದ್ದೆ. ವಾಸ್ತವತೆ ಬಿಟ್ಟು ಇದರಲ್ಲಿ ರಾಜಕಾರಣ ಹೆಚ್ಚಾಗಿದೆ. ಆದ ಕಾರಣ ನಾನು ಇದರ ಬಗ್ಗೆ ಏನೂ ಮಾತನಾಡದೇ ಸುಮ್ಮನಿದ್ದೆ. ದೆಹಲಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ತಾತ್ಕಾಲಿಕ ಜಯ ಎಂದು ಹೇಳುತ್ತಿರುವವರು ಇಂದು ಬೋರ್ಡ್‌ ಮೀಟಿಂಗ್‌ ಮಾಡಿ ನಿರ್ದೇಶನ ನೀಡಬೇಕಿತ್ತು ಎಂದರು.

ಪಾಪ ಆತನಿಗೆ ಅನುಭವ ಕಡಿಮೆ; ಮೆಟ್ರೋ ದರ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯಗೆ ಡಿ.ಕೆ. ಶಿವಕುಮಾರ್‌ ತಿರುಗೇಟು

ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರ ಕೇಳಿಕೊಂಡಿದೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ʼದರ ಏರಿಕೆ ತಡೆ ಹಿಡಿಯಿರಿ ಎಂದು ಕೇಂದ್ರ ಸರ್ಕಾರದವರು ಪತ್ರ ಬರೆದಿರಬಹುದು. ಆದರೆ ಈ ರೀತಿ ಮಾಡಲು ಅವರಿಗೂ ಕಾನೂನಿನಲ್ಲಿ ಅವಕಾಶವಿಲ್ಲ. ಅವರು ಯಾವ ಕಾನೂನಿನ ಅಡಿ, ಯಾವ ಆಕ್ಟ್‌ ಅನ್ವಯ ಪತ್ರ ಬರೆದಿದ್ದಾರೆ ಎಂದು ಹೇಳಿದರೆ ಒಪ್ಪಿಕೊಳ್ಳೋಣ. ಇದನ್ನು ಹೊಸದಾಗಿ ತೀರ್ಮಾನ ಮಾಡಬೇಕು ಎಂದಾದರೆ ನೂತನ ದರ ನಿಗದಿ ಸಮಿತಿ ರಚನೆ ಆಗಬೇಕು. ನಾನು ನಮ್ಮ ಜನರ ದನಿಯಾಗಬೇಕು ಎಂದು ಕೆಲಸ ಮಾಡುತ್ತಿದ್ದೇನೆʼ ಎಂದರು.

ನನ್ನ ರಾಜಕೀಯದ ಅನುಭವದ ಆಧಾರದ ಮೇಲೆ ಹಾಗೂ ನಾನು ಇತರೇ ರಾಜ್ಯಗಳ ಮೇಲೆ ಮೆಟ್ರೋ ನಿಗಮದ ಬಳಿ, ವಿಷಯ ತಜ್ಞರು, ಕೇಂದ್ರದ ತಜ್ಞರ ಬಳಿ ಇದರ ಬಗ್ಗೆ ಚರ್ಚೆ ನಡೆಸಿ ಗಮನಿಸಿದಾಗ ಹೊಸ ಸಮಿತಿ ರಚನೆಯಾಗುವ ತನಕ ಈ ರೀತಿ ಶಿಫಾರಸ್ಸು ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಹೊಸ ಸಮಿತಿ ಇದರ ಬಗ್ಗೆ ನಿರ್ದೇಶನ ನೀಡುತ್ತದೆ. ಪತ್ರ ಬರೆದಿರುವವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದೇನಲ್ಲ. ಅವರು ದಡ್ಡರಲ್ಲ ಎಂದು ಕೊಂಡಿದ್ದೇನೆ. ಇದರ ಬಗ್ಗೆ ಸ್ಥಳೀಯ ಸಂಸದರು ಒಂದಷ್ಟು ಜನ ಮಾತನಾಡಬಹುದಷ್ಟೇ. ಅವರೂ ಸಹ ಎಲ್ಲಾ ರಾಜ್ಯಗಳನ್ನು ನಡೆಸಬೇಕಲ್ಲವೇ. ಈಗ ಬರೆದಿರುವ ಪತ್ರವನ್ನು ಇಟ್ಟುಕೊಂಡು ಯಾರೋ ಹೆಸರು ತೆಗೆದುಕೊಳ್ಳುತ್ತಿದ್ದಾರಲ್ಲ ಅದು ಸಾಧ್ಯವಿಲ್ಲ. ನಾವು ದರ ಏರಿಕೆ ಮಾಡಿ ಎಂದು ಕೇಳಿಲ್ಲ. ಈ ಹಿಂದಿನ ಸಮಿತಿ ಏನು ತೀರ್ಮಾನ ಮಾಡಿದೆ ಅದರಂತೆ ಮುನ್ನಡೆದಿದೆʼ ಎಂದರು.

ಜನರಿಗಾಗಿ ಯುದ್ಧ ಮಾಡುತ್ತಿರುವೆ

ನಮ್ಮಿಂದ ದರ ಏರಿಕೆಗೆ ತಡೆ ಬಿದ್ದಿದೆ ಎಂದು ಹೇಳುತ್ತಿರುವವರ ಬಗ್ಗೆ ಕೇಳಿದಾಗ, ʼಇದರಿಂದ ಹೆಸರನ್ನು ಯಾರು ಬೇಕಾದರೂ ತೆಗೆದುಕೊಳ್ಳಲಿ. ಅಂತಿಮವಾಗಿ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ. ನನ್ನ ವಾರ್‌ ಕ್ರೆಡಿಟ್‌ ಪಡೆಯಲು ಅಲ್ಲ. ಜನರಿಗೆ ಒಳ್ಳೆಯದಾಗಬೇಕು ಎಂದು ಯುದ್ಧ ಮಾಡುತ್ತಿರುವೆ. ಜನರಿಗೆ ಹಾಗೂ ಮೆಟ್ರೋ ಸಂಸ್ಥೆಗೂ ಭಾರ ಆಗಬಾರದು. ನಾನು ಯಾರ ಒತ್ತಡಕ್ಕೂ ಒಳಗಾಗಿ ಕೆಲಸ ಮಾಡುತ್ತಿಲ್ಲ. ನನಗೆ ಅಂತಿಮವಾಗಿ ಬಿಎಂಆರ್‌ಸಿಎಲ್‌ ಸಂಸ್ಥೆ ಹಾಗೂ ಜನರೂ ಉಳಿಯಬೇಕುʼ ಎಂದರು.

ದರ ಏರಿಕೆ ಬಗ್ಗೆ ನಮ್ಮ ಬಳಿ ಏನೂ ಕೇಳಿಲ್ಲ, ಮಾತನಾಡಿಲ್ಲ. ನಾವು ಚರ್ಚೆ ಮಾಡಿಲ್ಲ. ನಾವು ಅವರನ್ನು ಕೇಳೇ ಇಲ್ಲ, ಇದರ ಬಗ್ಗೆ ಹೇಳೇ ಇಲ್ಲ. ಮೆಟ್ರೋ ದರ ಏರಿಕೆ ಬಗ್ಗೆ ತೀರ್ಮಾನವಾಗಿರುವುದು ಈಗಲ್ಲ. ಒಂದು ವರ್ಷದ ಹಿಂದೆ. ಅಂದರೆ 09.02.2025 ರಂದೇ ಶೇ.5 ರಷ್ಟು ದರ ಏರಿಕೆಯನ್ನು 9.02.26 ರಂದು ಮಾಡಬೇಕು ಎಂದು ದರ ಏರಿಕೆ ಸಮಿತಿ ಅಂದೇ ಆದೇಶ ನೀಡಿದೆ. ಆ ಪ್ರಕಾರ ದರ ಏರಿಕೆ ಮಾಡಲಾಗಿದೆ. ಈಗ ಮಾತನಾಡುತ್ತಿರುವವರು ಯಾರು ಸಹ ಅವತ್ತು ಇದರ ಬಗ್ಗೆ ಮಾತನಾಡಲಿಲ್ಲ. ಬೆಂಗಳೂರಿನ ಜನತೆ ಗೌರವದಿಂದ ಇದನ್ನು ಸ್ವೀಕಾರ ಮಾಡಿದ್ದಾರೆ ಎಂದರು.

ದರ ಏರಿಕೆಯನ್ನು ತಡೆಯುವುದರ ಕುರಿತಂತೆ ರಾಜ್ಯ ಸರ್ಕಾರ, ಅಧಿಕಾರಿಗಳು ಒಂದು ತೀರ್ಮಾನ ಮಾಡಿದ್ದೇವೆ. ಬಿಎಂಆರ್‌ಸಿಎಲ್‌ ದರ ಏರಿಕೆಗೆ ಮೂರು ಮುಖ್ಯ ಮಾನದಂಡಗಳಿವೆ. ಓಎಂಆರ್‌ ವೆಚ್ಚ, ಬದಲಾಗುವ ಸಿಪಿಐ, ಸಿಬ್ಬಂದಿ ವೆಚ್ಚ, ಪ್ರತಿ ಯುನಿಟ್‌ ವೆಚ್ಚ, ಇಂಧನ ವೆಚ್ಚವನ್ನು ಲೆಕ್ಕಚಾರ ಮಾಡಲು ಅವಕಾಶವಿದೆ. ಇವುಗಳ ಆಧಾರದ ಮೇಲೆ ಮತ್ತೊಮ್ಮೆ ಮರು ಲೆಕ್ಕಚಾರವನ್ನು ಮಾಡಿಕೊಂಡು ಬನ್ನಿ ಎಂದು ನಮ್ಮ ಸರ್ಕಾರ ಮಾರ್ಗದರ್ಶನ ನೀಡಿದೆ. ಅಲ್ಲಿಯವರೆಗೂ ದರ ಏರಿಕೆಯನ್ನು ತಡೆಯಿಡಿಯಿರಿ ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಸಾಲ ಮರುಪಾವತಿ ಸೇರಿದಂತೆ ಒಟ್ಟು 5,066 ಕೋಟಿ ರೂ. ಹಣ ಕೊಟ್ಟಿದ್ದೇವೆ

ಬೇರೆ ಮೆಟ್ರೋಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ದರ ಪಟ್ಟಿ ಹೆಚ್ಚಿದೆ ಎಂದು ಹೇಳುತ್ತಾರೆ. ಉದಾಹರಣೆಗೆ ದೆಹಲಿಯಲ್ಲಿ ಭದ್ರತಾ ವಿಭಾಗದ ಜವಾಬ್ದಾರಿ ಕೇಂದ್ರ ಸರ್ಕಾರದ ಅಡಿಯಲ್ಲಿದೆ. ಸಿಎಸ್‌ಎಫ್‌ ಅಲ್ಲಿನ ಜವಾಬ್ದಾರಿ ತೆಗೆದುಕೊಂಡಿದೆ. ಇಲ್ಲಿ ನಾವೇ ಭದ್ರತೆಯ ಜವಾಬ್ದಾರಿ ಹೊತ್ತಿದ್ದೇವೆ. ಜತೆಗೆ ನಾವು ಇಲ್ಲಿ ಇದಕ್ಕೆ ಜಿಎಸ್‌ಟಿಯನ್ನೂ ಸಹ ಪಾವತಿಸುತ್ತಿದ್ದೇವೆ. ಕ್ಯಾಶ್‌ ಲಾಸ್‌ ಮರುಪಾವತಿಗೆ ಎಂದು 1064.32 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ನೀಡಿದೆ. ಸಾಲ ಮರುಪಾವತಿಗೆ ಎಂದು ಕೇಂದ್ರ ಸರ್ಕಾರಕ್ಕೆ 4,002.23 ಕೋಟಿ ರೂ. ನೀಡಿದ್ದೇವೆ. ಒಟ್ಟು 5,066. 55 ಕೋಟಿ ರೂ. ಕೊಟ್ಟಿದ್ದೇವೆ ಎಂದರು.

ದರ ಏರಿಕೆಯಲ್ಲಿ ನಮ್ಮ ಪಾಲಿಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಆರ್‌.ಆಶೋಕ್‌ ಅವರು ಹೇಳಿರುವ ಬಗ್ಗೆ ಕೇಳಿದಾಗ, ʼಮಾಧ್ಯಮದ ಮುಂದೆ ಅವರು ಏನು ಬೇಕಾದರೂ ತಿಳಿಸಲಿ. ಏನು ಬೇಕು ಎಂದು ನನಗೆ ತಿಳಿಸಿದರೆ, ನಾನು ಅದಕ್ಕೆ ಉತ್ತರ ನೀಡುತ್ತೇನೆʼ ಎಂದರು.

ಹೊಸ ದರ ನಿಗದಿ ಸಮಿತಿಗೆ ಒತ್ತಾಯ ಮಾಡುವಿರಾ ಎಂದು ಕೇಳಿದಾಗ, ʼಸದ್ಯಕ್ಕೆ ಈ ಗೊಂದಲಕ್ಕೆ ನಾನು ಹೋಗುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್‌ ಏನು ಮಾಡಲು ಸಾಧ್ಯವೋ ಅದನ್ನು ಮಾಡಲಾಗುವುದು. ಇದು ನಮ್ಮ ಭೂಮಿ. ನಮ್ಮ ಗ್ರಾಹಕರಿಗೆ ಯಾವ ರೀತಿ ಸಹಾಯ ಮಾಡಲಾಗುವುದೋ ಆ ದಾರಿಯನ್ನು ಹುಡುಕಲಾಗಿದೆʼ ಎಂದರು.

ಶೇ. 5ರಷ್ಟು ದರ ಇಳಿಕೆಯಾಗುತ್ತದೆ ಎಂದು ಆಶಾಭಾವನೆ ಇಟ್ಟುಕೊಳ್ಳಬಹುದೇ ಎಂದು ಕೇಳಿದಾಗ, ʼಮರು ಲೆಕ್ಕಾಚಾರ ಮಾಡಿ ಎಂದು ಸೂಚನೆ ನೀಡಿದ್ದೇನೆ. ಯಾವುದೇ ಸಂಸ್ಥೆಯಾದರೂ ಅಲ್ಲಿನ ಖರ್ಚು ವೆಚ್ಚದಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ. ಅದೇ ರೀತಿ ಇಲ್ಲಿ ಇಂಧನ ದರ ಏರಿಕೆ ಸೇರಿದಂತೆ ಇತರೇ ಲೆಕ್ಕಾಚಾರಗಳು ಇರುತ್ತವೆʼ ಎಂದರು.

ದರ ಏರಿಕೆ ನಿರ್ಧಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ಎಂದು ಕೇಳಿದಾಗ, ʼಯಾರ ವ್ಯಾಪ್ತಿಗೂ ಬರುವುದಿಲ್ಲ. ದರ ಪರಿಷ್ಕರಣಾ ಸಮತಿಯ ಅಡಿಯಲ್ಲಿ ಬರುತ್ತದೆ. ಈ ಮೊದಲು ರಾಜ್ಯ ಸರ್ಕಾರದವರು ಈ ಸಮಿತಿಯಲ್ಲಿ ಇರುತ್ತಿದ್ದರು. ಈಗ ಇಲ್ಲʼ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟ ಖಾಲಿ ಟ್ರಂಕ್ ಹಿಡಿದಿರುವ ತೇಜಸ್ವಿ ಸೂರ್ಯ: ಡಿ.ಕೆ. ಸುರೇಶ್ ವ್ಯಂಗ್ಯ

ಹಳೇ ಸಮಿತಿ ಅನ್ವಯ ದರ ಪರಿಷ್ಕರಣೆ ಮಾಡಲಾಗುವುದೇ ಎಂದು ಕೇಳಿದಾಗ, ʼಈ ರೀತಿ ಮಾಡಲು ಅಧಿಕಾರವಿಲ್ಲ. ಹೊಸ ಸಮಿತಿ ರಚನೆ ಆಗುವ ತನಕ ಕೇಂದ್ರ, ರಾಜ್ಯ, ಬಿಎಂಆರ್‌ಸಿಎಲ್‌ ಯಾರಿಗೂ ಅಧಿಕಾರವಿಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.