ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಮ್ಮನ್ನು ಟೀಕೆ ಮಾಡದಿದ್ರೆ ಕುಮಾರಸ್ವಾಮಿ ರಾಜಕೀಯವಾಗಿ ಬದುಕಲು ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

DK Shivakumar: ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಕುಮಾರಸ್ವಾಮಿ ವಿರೋಧ ಮಾಡುತ್ತಾರೆ. ಅವರು ನಮ್ಮ ಬಗ್ಗೆ ಟೀಕೆ ಮಾಡಲಿಲ್ಲ ಎಂದರೆ ರಾಜಕೀಯವಾಗಿ ಬದುಕಿರಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಎಚ್‌ಡಿಕೆ ವಿರೋಧಿಸುತ್ತಾರೆ ಎಂದ ಡಿಕೆಶಿ

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ) -

Profile
Siddalinga Swamy May 15, 2026 4:37 PM

ಬೆಂಗಳೂರು, ಮೇ 15: ಕುಮಾರಸ್ವಾಮಿ ಅವರು ನಮ್ಮ ಬಗ್ಗೆ ಟೀಕೆ ಮಾಡಲಿಲ್ಲ ಎಂದರೆ ರಾಜಕೀಯವಾಗಿ ಬದುಕಿರಲು ಆಗುವುದಿಲ್ಲ. ನಾವು ಒಳ್ಳೆಯ ಕೆಲಸ ಮಾಡುತ್ತೇವೆ, ಅವರು ವಿರೋಧ ಮಾಡುತ್ತಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದರು. ಸದಾಶಿವನಗರದ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಅವರು ಬಿಡದಿ ಟೌನ್ ಶಿಪ್ ಯೋಜನೆಯ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ‘ಅವರು ಮಾಡಿದ ಯೋಜನೆಯನ್ನೇ ನಾವು ಮುಂದುವರೆಸುತ್ತಾ ಇರುವುದು. ನಾನು ರೈತರ ಬಳಿ ಮಾತನಾಡಲು ಸಮಯ, ದಿನಾಂಕ ನಿಗದಿ ಮಾಡಿಕೊಂಡು ಹೋಗುತ್ತೇನೆ. ರೈತರು ನನಗೆ ಎರಡೇಟು ಹೊಡೆಯಬಹುದು, ಅಷ್ಟೇ ತಾನೇ..? ಬಟ್ಟೆ ಹರಿಯಬಹುದು, ಕಲ್ಲೆಸೆಬಹುದು, ಧಿಕ್ಕಾರ ಹಾಕಬಹುದು. ಅದಕ್ಕೆಲ್ಲಾ ಹೆದರಿಕೊಳ್ಳಲು ಆಗುತ್ತದೆಯೇ? ಮುಂದೆ ಅವರ ಭವಿಷ್ಯ, ಮಕ್ಕಳ ಹಾಗೂ ಆಸ್ತಿಗಳ ಭವಿಷ್ಯ ಮುಖ್ಯ. ಇವತ್ತಲ್ಲ ಮುಂದಿನ 20 ವರ್ಷಗಳ ನಂತರ ಬಿಡದಿ, ಬೆಂಗಳೂರು ದಕ್ಷಿಣದ ಜನರು ನನ್ನನ್ನು ನೆನಪಿಸಿಕೊಳ್ಳುತ್ತಾರೆ’ ಎಂದರು.

ಕುಮಾರಸ್ವಾಮಿ ಅವರೇ ಈ ಯೋಜನೆಯ ಭೂಮಿಯನ್ನು ಡಿನೊಟಿಫೈ ಮಾಡಬಹುದಿತ್ತಲ್ಲವೇ? ಯಾಕೆ ಮಾಡಲಿಲ್ಲ? ನಾನು ಡಿನೋಟಿಫೈ ಮಾಡಲು ತಯಾರಿಲ್ಲ. ಅವರು ಡಿನೋಟಿಫೈ ಮಾಡಿ ಎಷ್ಟು ಅನುಭವಿಸುತ್ತಿದ್ದಾರೆ ಎಂದು ಅವರಿಗೆ ಗೊತ್ತು‌. ಯಡಿಯೂರಪ್ಪ ಅವರಿಗೆ, ನನಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು‌.

ಬೆಲೆ ಏರಿಕೆ ಮೋದಿ ಅವರ ಕೊಡುಗೆ

ಬೆಲೆ ಏರಿಕೆ ಮೋದಿ ಅವರ ಕೊಡುಗೆ. ಅವರು ಬೇರೆ ರಾಷ್ಟ್ರಗಳ ಜತೆ ಉತ್ತಮ ಸಂಬಂಧ ಉಳಿಸಿಕೊಂಡು ಬಂದಿಲ್ಲ. ಅಂತಾರಾಷ್ಟ್ರೀಯ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಮೋದಿ ಅವರು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅದಕ್ಕೆ ಅವರು ವಿದ್ಯುತ್ ಉಳಿಸಿ, ಪೆಟ್ರೋಲ್ ಬಳಸಬೇಡಿ ಎಂದು ಹೇಳುತ್ತಿದ್ದಾರೆ. ಇಂಧನಗಳನ್ನು ಬಳಸದೇ ದಿನನಿತ್ಯ ಜೀವನ ಮಾಡುವುದು ಹೇಗೆ. ಅನೇಕರು ತಮ್ಮ ಬೆಂಗಾವಲು ಪಡೆ ವಾಹನಗಳನ್ನು ಕಡಿತ ಮಾಡಿದ್ದಾರೆ. ಇದು ಆಗಬಹುದು. ಆದರೆ ಜನ ಸಾಮಾನ್ಯ ಓಡಾಟ ಮಾಡದೇ ಇರಲು ಹೇಗೆ ಸಾಧ್ಯ. ಬದುಕಿಗಾಗಿ ಪ್ರಯಾಣ ಮಾಡಬೇಕಲ್ಲವೇ? ಚಿನ್ನ‌ ಖರೀದಿ ಮಾಡಬೇಡಿ ಎಂದಿದ್ದಾರೆ ಇದು ಹೇಗೆ ಸಾಧ್ಯ. ವಿವಾಹಿತ ಮಹಿಳೆಯರಿಗೆ ಮಾಂಗಲ್ಯ ಸರ ಬೇಕು.‌ ಹೀಗಿದ್ದಾಗ ಚಿನ್ನ ಕೊಂಡುಕೊಳ್ಳಬೇಡಿ ಎಂಬುದು ಹೇಗೆ ಸಾಧ್ಯ ಎಂದರು.

ದೇಶ ದೊಡ್ಡ ದುರಂತದ ಸ್ಥಿತಿಗೆ ಬಂದಿದೆ. ಅಡುಗೆ ಎಣ್ಣೆ ಬಳಸಬೇಡಿ ಎಂದರೆ ಎಲ್ಲಿ ಕಡಿಮೆ ಮಾಡೋಕೆ ಆಗುತ್ತೆ. ಇದೆಲ್ಲಾ ಮಾಡೋಕೆ ಆಗಲ್ಲ. ಜನ ಸಂಪಾದನೆ ಮಾಡುತ್ತಾರೆ ಬದುಕುತ್ತಾರೆ. ಯಾರನ್ನೂ ನಿಯಂತ್ರಣ ಮಾಡೋಕೆ ಆಗಲ್ಲ ಎಂದರು.

ಕೇರಳ ನೂತನ ಸಿಎಂಗೆ ಶುಭಕೋರುತ್ತೇನೆ

ಕೇರಳಕ್ಕೆ ನೂತನ ಸಿಎಂ ಆಯ್ಕೆಯಾಗಿರುವ ಬಗ್ಗೆ ಕೇಳಿದಾಗ, ʼನಾನು ಅವರಿಗೆ ಶುಭಾಶಯ ಕೋರುತ್ತೇನೆ. ಪಕ್ಷದಲ್ಲಿ ಅರ್ಹತೆ ಇರುವ ಅನೇಕ ಹಿರಿಯ ನಾಯಕರು ಇದ್ದಾರೆ‌. ಪಕ್ಷದ ಹೈಕಮಾಂಡ್ ಸತೀಶನ್ ಅವರಿಗೆ ಅವಕಾಶ ನೀಡಿದೆ. ಅವರಿಗೆ ನಾನು ಮನಃಪೂರ್ವಕವಾಗಿ ಶುಭ ಕೋರುತ್ತೇನೆ. ಎಲ್ಲಾ ಮೈತ್ರಿ ಪಕ್ಷಗಳಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಜನರ ಆಶೋತ್ತರಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತೇವೆʼ ಎಂದರು.

ಎಸ್‌ಐಆರ್ ಕರ್ನಾಟಕಕ್ಕೆ ಕಾಲಿಡುತ್ತಿರುವ ಬಗ್ಗೆ ಕೇಳಿದಾಗ, ʼನಮಗೂ ಇದರ ಬಗ್ಗೆ ಅರಿವಿದೆ. ಪಕ್ಷದ ನಾಯಕರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲಾಗಿದೆ. ಎಲ್ಲಾ ಪಕ್ಷಗಳು ಈ ಕೆಲಸ ಮಾಡುತ್ತಿವೆ. ಬಿಜೆಪಿ, ಜನತಾದಳ ಎಲ್ಲರೂ ಅವರವರ ಮತಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬೆಂಗಳೂರಿನ ಜನರಿಗೆ ಭೂಮಿ ಗ್ಯಾರಂಟಿ

ಜನಸಾಮಾನ್ಯರು ಸಂಪಾದಿಸಿದ ಆಸ್ತಿಗಳಿಗೆ ಸರಿಯಾದ ರೀತಿಯಲ್ಲಿ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ನಾವು ಆರನೇ ಗ್ಯಾರಂಟಿಯಾಗಿ "ಭೂಮಿ ಗ್ಯಾರಂಟಿ" ಯನ್ನು ಜಾರಿಗೆ ತಂದಿದ್ದೇವೆ. ಜನರ ಮನೆ ಬಾಗಿಲಿಗೆ ಇ ಖಾತೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ‌. ಬಿ ಯಿಂದ ಎ ಖಾತೆ ಬದಲಾವಣೆ ಮಾಡಿಕೊಡುತ್ತಿದ್ದೇವೆ ಎಂದರು.

ನಾನೇ ಅನೇಕ ಬ್ಯಾನರ್‌ಗಳನ್ನು ಹೇಳಿ ತೆಗಿಸಿದ್ದೇನೆ

ನಾನೇ ಬ್ಯಾನರ್ ಹಾಕಬೇಡಿ ಕೇಸ್ ಹಾಕಲಾಗುವುದು ಅಂತ ಹೇಳಿದ್ದೆ. ಆದರೂ ಅಭಿಮಾನದಿಂದ ಹಾಕಿಸಿದ್ದಾರೆ. ನಾನೇ ಹಲವರಿಗೆ ಹೇಳಿ ಬ್ಯಾನರ್‌ಗಳನ್ನು ತೆಗಿಸಿದ್ದೇನೆ. 50ರಷ್ಟು ಬ್ಯಾನರ್‌ಗಳು ತೆರವುಗೊಳಿಸಲಾಗಿದೆ. ಹಾಕಿರೋದು ತಪ್ಪು. ಕಾರ್ಪೋರೇಷನ್ ಅವರಿಗೂ ಕೂಡಲೇ ತೆಗೆಯಬೇಕು ಎಂದು ಸೂಚಿಸಿದ್ದೇನೆ. ಬಿಜೆಪಿ ಲೀಡರ್‌ಗಳು ಸಹ ಅವರ ನಾಯಕರುಗಳು ಬರುವುದನ್ನು ಬ್ಯಾನರ್ ಹಾಕಿದ್ದಾರೆ ಅವನ್ನು ಸಹ ತೆಗೆಯಲಾಗುವುದು ಎಂದು ಹೇಳಿದರು.

DK Shivakumar: ಕೋರ್ಟ್ ನಿರ್ದೇಶನದಂತೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿ.ಕೆ. ಶಿವಕುಮಾರ್

ಎಷ್ಟೇ ಕಠಿಣ ನಿಯಮ ತಂದರೂ ಇದನ್ನು ತಡೆಯಲು ಆಗುತ್ತಿಲ್ಲ. ಇದು ಸರಿಯಲ್ಲ. ದಯವಿಟ್ಟು ಬೆಂಗಳೂರು ನಗರವನ್ನು ಸ್ವಚ್ಛವಾಗಿಡಬೇಕು.‌ ನಗರ ವ್ಯಾಪ್ತಿ ಬಿಟ್ಟು ಹಳ್ಳಿ ಭಾಗದಲ್ಲಿ ಹಾಕಿಕೊಂಡರೆ ಬೇಡ ಎನ್ನಲ್ಲ. ಆದರೆ ನಗರ ಭಾಗದಲ್ಲಿ ಬೇಡ. ನಾನು ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ ಎಂದಿದ್ದೆ. ಕಳೆದ ರಾತ್ರಿ ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಹಾಗೂ ಸಚಿವರು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಲು ಕಾಯುತ್ತಿದ್ದರು. ಅವರ ಪ್ರೀತಿ ವಿಶ್ವಾಸ, ಆಶೀರ್ವಾದ ಬೇಡ ಎನ್ನಲು ಆಗುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.