ಸಚಿವ ಡಿ. ಸುಧಾಕರ್ ನಿಧನ; ಸಿಎಂ, ಡಿಸಿಎಂ ಸೇರಿ ಹಲವು ಗಣ್ಯರಿಂದ ಸಂತಾಪ
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (62) ಅವರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೊಣಕಾಲು ಆಪರೇಷನ್ ಸಂಬಂಧ ಸಚಿವ ಸುಧಾಕರ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸಚಿವರಾದ ಡಿ. ಸುಧಾಕರ್ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಡಿ. ಸುಧಾಕರ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. "ಪ್ರತಿ ಕ್ಷಣವೂ ಕ್ಷೇತ್ರದ ಅಭಿವೃದ್ಧಿ ಕುರಿತು ಆಲೋಚನೆ, ಜನಸೇವೆ ಸೇರಿದಂತೆ ಅತ್ಯಂತ ಕ್ರಿಯಾಶೀಲ ಸಹೋದ್ಯೋಗಿಯಾಗಿದ್ದ ಸಚಿವ ಡಿ. ಸುಧಾಕರ್ ಅವರ ನಿಧನ ಅತ್ಯಂತ ನೋವಿನ ಸಂಗತಿ. ಅವರು ತಮ್ಮನ್ನು ಭೇಟಿ ಮಾಡಲು ಬಂದಾಗಲೆಲ್ಲ ಕ್ಷೇತ್ರದ ಒಂದಿಲ್ಲೊಂದು ಅಭಿವೃದ್ಧಿ ಕೆಲಸದ ಮನವಿ ಜತೆಗೆ ಬರುತ್ತಿದ್ದರು. ತಮಗೆ ಆಪ್ತರೂ ಆಗಿದ್ದ ಸುಧಾಕರ್ ಅಗಲಿಕೆ ಬಹಳ ನೋವು ತಂದಿದೆ ಎಂದು ಡಿಸಿಎಂ ಹೇಳಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವ ಮೂಲಕ ಸಹಕಾರಿ ಸಂಸ್ಥೆಯಿಂದ ರಾಜಕೀಯ ಆರಂಭಿಸಿದ ಸುಧಾಕರ್ ಅವರು ಸರ್ವ ಸಮುದಾಯಗಳೂ ಮೆಚ್ಚುವ ನಾಯಕರಾಗಿದ್ದರು. ಸಮುದಾಯದ ಸಂಖ್ಯಾಬಲ ಇಲ್ಲದಿದ್ದರೂ ನಾಲ್ಕು ಬಾರಿ ಶಾಸಕರಾಗಿದ್ದು ಕ್ಷೇತ್ರದ ಜನ ಇವರ ಮೇಲೆ ಇರಿಸಿದ್ದ ಪ್ರೀತಿ, ವಿಶ್ವಾಸ, ನಂಬಿಕೆಗೆ ಸಾಕ್ಷಿ. ಇದೇ ಸುಧಾಕರ್ ಅವರ ಹೆಗ್ಗಳಿಕೆ ಆಗಿತ್ತು.
ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ತಮ್ಮ ಕ್ಷೇತ್ರದ ನೀರಾವರಿ ಯೋಜನೆಗಳ ಕುರಿತು ನನ್ನ ಬಳಿ ಸದಾ ಚರ್ಚೆ ನಡೆಸುತ್ತಿದ್ದರು. ಕೊಡುಗೈ ದಾನಿಯಾಗಿ "ಬಡವರ ಬಂಧು" ಎಂದೇ ಜನರ ನಡುವೆ ಪ್ರಸಿದ್ದಿ ಪಡೆದಿದ್ದರು. ಕಾಲನ ಕರೆಗೆ ಓಗೊಟ್ಟು ನಮ್ಮನ್ನು, ಅಪಾರ ಅಭಿಮಾನಿಗಳನ್ನು ಅಗಲಿ ಹೋಗಿರುವ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಅವರ ಕುಟುಂಬವರ್ಗ ಹಾಗೂ ಲಕ್ಷಾಂತರ ಕಾರ್ಯಕರ್ತರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಶಿವಕುಮಾರ್ ತಿಳಿಸಿದ್ದಾರೆ.
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ನಮ್ಮ ಸಂಪುಟ ಸಹೋದ್ಯೋಗಿ, ನನ್ನ ಆತ್ಮೀಯ ಸ್ನೇಹಿತ ಡಿ. ಸುಧಾಕರ್ ಅವರು ಇಂದು ಕೊನೆಯುಸಿರೆಳೆದ ಸುದ್ದಿ ಅತೀವ ದುಃಖವನ್ನುಂಟು ಮಾಡಿದೆ.
— DK Shivakumar (@DKShivakumar) May 10, 2026
ಹಿರಿಯೂರು ಶಾಸಕರು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿದ್ದ ಡಿ. ಸುಧಾಕರ್ ಅವರು ಜನಪರ ಕಾಳಜಿಯುಳ್ಳ… pic.twitter.com/GFngq5BAYt
ಇನ್ನು ಸುಧಾಕರ್ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ , ನಮ್ಮ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು, ಹಿರಿಯ ನಾಯಕರು ಆಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನದಿಂದ ದುಃಖಿತನಾಗಿದ್ದೇನೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ನಾನು ಖುದ್ದು ಆಸ್ಪತ್ರೆಗೆ ಭೇಟಿನೀಡಿ ಸುಧಾಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಂದ ಅವರ ಆರೋಗ್ಯದ ಮಾಹಿತಿ ಪಡೆದಿದ್ದೆ, ಈ ವೇಳೆ ಅವರು ಗುಣಮುಖರಾಗುವ ಭರವಸೆ ನನ್ನಲ್ಲಿ ಮೂಡಿತ್ತು.
ಜನಸೇವೆಯಲ್ಲಿ ಅಪಾರ ಕಾಳಜಿ ಮತ್ತು ಬದ್ಧತೆಯಿದ್ದ ವ್ಯಕ್ತಿ ಸುಧಾಕರ್. ಇಂಥವರು ಇನ್ನಷ್ಟು ಕಾಲ ಜನರ ನಡುವೆ ಇರಬೇಕಿತ್ತು. ವೈದ್ಯರ ನಿರಂತರ ಪ್ರಯತ್ನ, ನಮ್ಮೆಲ್ಲರ ಹಾರೈಕೆಯ ಹೊರತಾಗಿಯೂ ಇಂದು ಸುಧಾಕರ್ ಅವರು ನಮ್ಮನ್ನಗಲಿದ್ದಾರೆ. ಇದು ಅತ್ಯಂತ ನೋವಿನ ಗಳಿಗೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.