CET 2025: ಜನಿವಾರ ವಿವಾದ; ಸಿಇಟಿ ವಂಚಿತ ವಿದ್ಯಾರ್ಥಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ
CET 2025: ಸಿಇಟಿ ಅಭ್ಯರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಪ್ರತಿಕ್ರಿಯಿಸಿದ್ದು, ಜಿಲ್ಲಾಧಿಕಾರಿಗಳಿಂದ ವರದಿ ಬಂದ ಬಳಿಕ ವಿದ್ಯಾರ್ಥಿಗೆ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.


ಬೆಂಗಳೂರು: ಬೀದರ್ ಮತ್ತು ಶಿವಮೊಗ್ಗದಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಿಇಟಿ (CET 2025) ವೇಳೆ ಜನಿವಾರ ತೆಗೆಸಿದ ಘಟನೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಖಂಡಿಸಿ ವಿವಿಧ ಜಿಲ್ಲೆಗಳಲ್ಲಿ ಬ್ರಾಹ್ಮಣರ ಸಮಾಜದಿಂದ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ ಪರೀಕ್ಷೆ ವಂಚಿತ ವಿದ್ಯಾರ್ಥಿಗೆ ಮರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲು ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಆಗ್ರಹಿಸಿತ್ತು. ಇದರ ಬೆನ್ನಲ್ಲೇ ಪರೀಕ್ಷೆ ವಂಚಿತ ಬೀದರ್ ವಿದ್ಯಾರ್ಥಿಗೆ ಮತ್ತೊಮ್ಮೆ ಸಿಇಟಿ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಲೋಪಗಳಾಗದಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಆದರೆ, ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯದ ಕಾರಣ ಪರೀಕ್ಷೆಗೆ ಅನುಮತಿ ನೀಡದಿರುವುದು ಖಂಡನೀಯ. ಎಲ್ಲಾ ಸಂಪ್ರದಾಯಗಳನ್ನು ನಾವು ಗೌರವಿಸಬೇಕು. ಈ ನಡೆಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಈಗಾಗಲೇ ವರದಿ ಕಳಿಸುವಂತೆ ಸೂಚಿಸಲಾಗಿದೆ. ಬೀದರ್ ಜಿಲ್ಲಾಧಿಕಾರಿಗಳಿಂದ ವರದಿ ಬಂದ ಬಳಿಕ ವಿದ್ಯಾರ್ಥಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಭರವಸೆ ನೀಡಿದ್ದಾರೆ.
ಲೋಪಗಳಾಗದಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಆದರೆ, ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯದ ಕಾರಣ ಪರೀಕ್ಷೆಗೆ ಅನುಮತಿ ನೀಡದಿರುವುದು ಖಂಡನೀಯ. ಎಲ್ಲಾ ಸಂಪ್ರದಾಯಗಳನ್ನು ನಾವು ಗೌರವಿಸಬೇಕು. ಈ ನಡೆಯನ್ನು ನಮ್ಮ ಸರ್ಕಾರ ಒಪ್ಪುವುದಿಲ್ಲ. ಈಗಾಗಲೇ ವರದಿ ಕಳಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ವರದಿ… pic.twitter.com/xMWSPTYeGX
— DIPR Karnataka (@KarnatakaVarthe) April 19, 2025
ಪ್ರಾಂಶುಪಾಲ, ಸಿಬ್ಬಂದಿ ಅಮಾನತು
ಬೀದರ್ ನಗರದಲ್ಲಿ ಸಿಇಟಿ ಬರೆಯಲು ಹೋಗಿದ್ದ ಅಭ್ಯರ್ಥಿಗೆ ಜನಿವಾರ ತೆಗೆಸಿದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳು ಕೆಇಎಗೆ ವರದಿಯಲ್ಲಿ ನೀಡಿದ್ದರು. ಈ ವರದಿ ಆಧರಿಸಿ ತಪ್ಪಿತಸ್ಥ ಪ್ರಿನ್ಸಿಪಾಲ್, ತಪಾಸಣಾ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕೆ.ಜಿ ಜಗದೀಶ್ ಆದೇಶಿಸಿದ್ದಾರೆ. ಬೀದರ್ ನಗರದ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ವೇಳೆಯಲ್ಲಿ ಜನಿವಾರ ತೆಗೆಸಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ ಬಿರಾದಾರ್ ಹಾಗೂ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ | CET 2025: ಜನಿವಾರದಿಂದ ಪರೀಕ್ಷಾ ನಿಯಮಕ್ಕೇನು ತೊಂದರೆ?: ರಾಘವೇಶ್ವರ ಭಾರತೀ ಶ್ರೀ ಅಸಮಾಧಾನ
ಘಟನೆ ಕುರಿತಂತೆ ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೀದರ್ ಜಿಲ್ಲಾಧಿಕಾರಿ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕೆ.ಜಿ ಜಗದೀಶ್ ಅವರು ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ ಬಿರಾದಾರ್ ಹಾಗೂ ತಪಾಸಣಾ ಸಿಬ್ಬಂದಿ ಸತೀಶ್ ಪವಾರ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.