ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪ ಅನಾವರಣ; ಟರ್ಮಿನಲ್-2ರ ಸೌಂದರ್ಯಕ್ಕೆ ಹೊಸ ಮೆರುಗು

Kempegowda International Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಬೆಂಗಳೂರಿನ ಆತ್ಮ' ಹೆಸರಿನ ಸುಂದರ ಹಾಗೂ ಬೃಹತ್ ಕಲಾತ್ಮಕ ಶಿಲ್ಪವನ್ನು ಲೋಕಾರ್ಪಣೆ ಮಾಡಲಾಗಿದೆ. ಬಯೊಕಾನ್ ಫೌಂಡೇಷನ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್‌) ಸಹಯೋಗದಲ್ಲಿ ಈ ಕಲಾಕೃತಿಯನ್ನು ಟರ್ಮಿನಲ್-2ರ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ.

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪ ಅನಾವರಣ

ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ 'ಬೆಂಗಳೂರಿನ ಆತ್ಮ' ಶಿಲ್ಪ ಅನಾವರಣ. -

Profile
Siddalinga Swamy Apr 25, 2026 9:30 PM

ಬೆಂಗಳೂರು, ಏ.25: ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೇ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬೆಂಗಳೂರಿನ ಸಂಸ್ಕೃತಿ ಮತ್ತು ಸೃಜನಶೀಲತೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) 'ಬೆಂಗಳೂರಿನ ಆತ್ಮ' ಹೆಸರಿನ ಸುಂದರ ಹಾಗೂ ಬೃಹತ್ ಕಲಾತ್ಮಕ ಶಿಲ್ಪವನ್ನು ಲೋಕಾರ್ಪಣೆ ಮಾಡಲಾಗಿದೆ. ಬಯೊಕಾನ್ ಫೌಂಡೇಷನ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್‌) ಸಹಯೋಗದಲ್ಲಿ ಈ ಕಲಾಕೃತಿಯನ್ನು ಟರ್ಮಿನಲ್-2ರ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ. ಸ್ಪೇನ್‌ನ ಖ್ಯಾತ ಕಲಾಕಾರ ಜೌಮೆ ಪ್ಲೆನ್ಸಾ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಈ ಶಿಲ್ಪವು ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.

ಭಾರತದಲ್ಲಿನ ಸ್ಪೇನ್ ರಾಯಭಾರಿ ಜುವಾನ್ ಆಂಟೋನಿಯೊ ಮಾರ್ಚ್ ಪೂಜೋಲ್ ಅವರು ಈ ಕಲಾಕೃತಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಸಮಾರಂಭದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಬಯೊಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹರಿ ಮರಾರ್ ಮತ್ತು ಕಲಾಕೃತಿಯ ರೂವಾರಿ ಜೌಮೆ ಪ್ಲೆನ್ಸಾ ಉಪಸ್ಥಿತರಿದ್ದರು.

Bengaluru News

ಏನು ಈ ಕಲಾಕೃತಿಯ ವೈಶಿಷ್ಟ್ಯ?

ಬಣ್ಣ ಬಳಿದಿರುವ ಸ್ಟೇನ್‌ಲೆಸ್ ಸ್ಟೀಲ್ ಲೋಹದಿಂದ ಈ ಕಲಾಕೃತಿಯನ್ನು ನಿರ್ಮಿಸಲಾಗಿದ್ದು, ಇದು 500 x 319 x 375 ಸೆಂ.ಮೀ ಗಾತ್ರ ಹೊಂದಿದೆ. ಬೆಂಗಳೂರು ನಗರವು ಹೇಗೆ ಭಿನ್ನ-ವಿಭಿನ್ನ ಸಂಸ್ಕೃತಿಗಳು, ನಾವೀನ್ಯತೆ ಹಾಗೂ ಸೃಜನಶೀಲತೆಯ ಸಂಗಮವಾಗಿದೆ ಎಂಬುದನ್ನು ಈ ಕಲಾಕೃತಿ ಪ್ರತಿನಿಧಿಸುತ್ತದೆ. ಇದರ ಕಲಾವಿದ ಜೌಮೆ ಪ್ಲೆನ್ಸಾ ಅವರು ಶಿಕಾಗೊ, ನ್ಯೂಯಾರ್ಕ್, ಲಂಡನ್, ಟೋಕಿಯೊ, ಬಾರ್ಸಿಲೋನಾ, ಮ್ಯಾಡ್ರಿಡ್ ಸೇರಿದಂತೆ ಜಗತ್ತಿನ ಬಹುದೊಡ್ಡ ಮಹಾನಗರಗಳಲ್ಲಿ ತಮ್ಮ ಸಾರ್ವಜನಿಕ ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಯೊಕಾನ್ ಗ್ರೂಪ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ, ʼನಗರವೊಂದರ ಅಭಿವೃದ್ಧಿ ಎಂದರೆ ಕೇವಲ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುವುದಲ್ಲ. ಕಲೆ ಮತ್ತು ಸಂಸ್ಕೃತಿಯಲ್ಲೂ ಹೂಡಿಕೆ ಮಾಡುವುದು ಅತ್ಯಗತ್ಯ ಎಂಬುದು ಬಯೊಕಾನ್ ಫೌಂಡೇಷನ್‌ನ ನಂಬಿಕೆಯಾಗಿದೆ. ಇಂತಹ ಸಾರ್ವಜನಿಕ ಕಲಾಕೃತಿಗಳು ನಾಗರಿಕರು ಬಳಸುವ ಸ್ಥಳಗಳಿಗೆ ಮಾನವೀಯತೆಯ ಸ್ಪರ್ಶ ನೀಡುತ್ತವೆ. 'ಬೆಂಗಳೂರಿನ ಆತ್ಮ' ಕಲಾತ್ಮಕ ಶಿಲ್ಪದ ಸ್ಥಾಪನೆಗೆ ಕೈಜೋಡಿಸಿರುವುದು ನಮಗೆ ಹೆಮ್ಮೆಯ ವಿಚಾರʼ ಎಂದು ತಿಳಿಸಿದರು.

ಬಿಐಎಎಲ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಪ್ರತಿಕ್ರಿಯಿಸಿ, ʼವಿಮಾನ ನಿಲ್ದಾಣದ ಟರ್ಮಿನಲ್ 2ನ್ನು ಕೇವಲ ಪ್ರಯಾಣದ ತಾಣವಾಗಿರಿಸದೆ ಸಾಂಸ್ಕೃತಿಕ ಹೆಬ್ಬಾಗಿಲಾಗಿ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಕಲೆ ಮತ್ತು ಮೂಲಸೌಕರ್ಯಗಳ ಅದ್ಭುತ ಸಮ್ಮಿಲನವಿದೆ. ಜೌಮೆ ಪ್ಲೆನ್ಸಾ ಅವರ ಈ ಕಲಾಕೃತಿಯು, ಜಾಗತಿಕವಾಗಿ ಸಂಪರ್ಕ ಹೊಂದಿರುವ ಜೊತೆಗೆ ನಮ್ಮ ಮೂಲ ವೈವಿಧ್ಯತೆಯನ್ನು ಎತ್ತಿಹಿಡಿಯುತ್ತದೆ. ದಿನನಿತ್ಯ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವ ಲಕ್ಷಾಂತರ ದೇಶ-ವಿದೇಶಿ ಪ್ರಯಾಣಿಕರಿಗೆ ಈ 'ಬೆಂಗಳೂರಿನ ಆತ್ಮ' ಶಿಲ್ಪವು ಉದ್ಯಾನ ನಗರಿಯ ಮರೆಯಲಾಗದ ನೆನಪನ್ನು ಕಟ್ಟಿಕೊಡಲಿದೆʼ ಎಂದು ಹೇಳಿದರು.‌

Wind Energy: ಪವನ ಶಕ್ತಿ ಸಾಮರ್ಥ್ಯದಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿದೆ ಭಾರತ: ಪ್ರಲ್ಹಾದ್ ಜೋಶಿ‌

ಬಯೊಕಾನ್ ಗ್ರೂಪ್‌ನ ಸಿಎಸ್‌ಆರ್ ವಿಭಾಗವಾದ ಬಯೊಕಾನ್ ಫೌಂಡೇಷನ್ ತನ್ನ ನಗರಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳ ಭಾಗವಾಗಿ ಈ ಯೋಜನೆಗೆ ಬೆಂಬಲ ನೀಡಿದೆ. ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ವಿಶಿಷ್ಟ ವಿನ್ಯಾಸ ಮತ್ತು ಕಲಾತ್ಮಕ ಅಭಿವ್ಯಕ್ತಿಯೊಂದಿಗೆ ಸಂಯೋಜಿಸುವ ಮೂಲಕ, ಬಿಎಲ್‌ಆರ್‌ ವಿಮಾನ ನಿಲ್ದಾಣವು ಈಗಾಗಲೇ ಸಾಂಸ್ಕೃತಿಕ ಹೆಬ್ಬಾಗಿಲಾಗಿ ಗುರುತಿಸಿಕೊಂಡಿದೆ. ಈ ಕಲಾಕೃತಿಯ ಸ್ಥಾಪನೆ ಇದಕ್ಕೆ ಮತ್ತಷ್ಟು ಮೆರುಗು ನೀಡಿದೆ. ಸ್ಕೈಟ್ರ್ಯಾಕ್ಸ್‌ನ 2026ರ 'ವಿಶ್ವದ ಅತ್ಯುತ್ತಮ ಕಲಾ ವಿಮಾನ ನಿಲ್ದಾಣ' ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 8ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದ್ದು, ಇದು ಬಿಐಎಎಲ್‌ನ ಕಲಾ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.