ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಸ ವಿಲೇವಾರಿಗೆ ಅಡ್ಡಿಪಡಿಸಿದ್ರೆ ಮನೆ ಮುಂದೆ ಸುರಿಯುತ್ತೇವೆ: ಬಿಜೆಪಿ ಶಾಸಕರಿಗೆ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ

DK Shivakumar: ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಕಸ ವಿಲೇವಾರಿಗೆ ಅಡ್ಡಿಪಡಿಸಿದ್ರೆ ಮನೆ ಮುಂದೆ ಸುರಿಯುತ್ತೇವೆ: ಡಿಕೆಶಿ

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮಾತನಾಡಿದರು. -

Profile
Siddalinga Swamy Feb 18, 2026 5:40 PM

ಬೆಂಗಳೂರು, ಫೆ.18: ಗೌರವದಿಂದ ಇದ್ದರೆ ಸರಿ. ಇಲ್ಲ ಅಂದರೆ ಕಸ ವಿಲೇವಾರಿಗೆ ಅಡ್ಡಿ ಪಡಿಸುವವರು ಶಾಸಕರಾದರೂ ಸರಿ, ಬೇರೆ ಯಾರೇ ಆಗಿದ್ದರೂ ಸಹ ಎಸ್ಮಾ ಕಾಯ್ದೆ ಅಡಿ, ಯಾವುದೇ ಕರುಣೆ ಇಲ್ಲದೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಶಾಸಕರ ಮನೆ ಮುಂದೆ ಅಥವಾ ಬಿಜೆಪಿ ಕಚೇರಿ ಎದುರು ಲೋಡ್‌ ಕಸವನ್ನು ತೆಗೆದುಕೊಂದು ಹೋಗಿ ಹಾಕಬೇಕಾಗುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಎಚ್ಚರಿಕೆ ನೀಡಿದರು. ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳಿಗೆ ಬುಧವಾರ ಅವರು ಪ್ರತಿಕ್ರಿಯೆ ನೀಡಿದರು.

ಮಹದೇವಪುರದಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸಿರುವ ಬಗ್ಗೆ ಕೇಳಿದಾಗ, ʼಶಾಸಕರು ಕಸ ಹಾಕಬಾರದು ಹಾಗೂ ನಮಗೆ ಅನುದಾನ ಬೇಕು ಎಂದು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ. ಮಂಗಳವಾರದಂದು ಅರವಿಂದ ಲಿಂಬಾವಳಿ, ಇಂದು ದೊಡ್ಡಬಳ್ಳಾಪುರ ಶಾಸಕರು ಬ್ಲಾಕ್‌ಮೇಲ್‌ ಮಾಡಿದ್ದಾರೆ. ಹೀಗೆ ಮಾಡಿದರೆ ಕಸ ಎಲ್ಲಿಗೆ ಹೋಗಬೇಕು? ಕಸವು ಆರ್‌. ಅಶೋಕ್‌, ವಿಜಯೇಂದ್ರ ಅಥವಾ ಬಿಜೆಪಿ ಕಚೇರಿಗೆ ಹೋಗಬೇಕಾಗುತ್ತದೆ. ಇವರುಗಳು ಯಾರಿಗೆ ಎಂದು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆʼ ಎಂದು ಕಿಡಿಕಾರಿದರು.

ಮತದಾರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಬಿಎಒಗಳ ಅಮಾನತುಗೊಳಿಸಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಮನವಿ ಪತ್ರ

ಯಾವ ಉದ್ದೇಶಕ್ಕೆ ಶಾಸಕರುಗಳು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಕೇಳಿದಾಗ, ʼಕಸವನ್ನು ಎಲ್ಲಾದರೂ ಒಂದು ಕಡೆ ಹಾಕಬೇಕಲ್ಲವೇ? ಈ ಹಿಂದಿನಿಂದ ಏನು ಕೆಲಸ ಮಾಡಿಕೊಂಡು ಬರಲಾಗುತ್ತಿತ್ತೊ ಅದೇ ಕೆಲಸವನ್ನು ಈಗಲೂ ಮಾಡಿಕೊಂಡು ಬರಲಾಗುತ್ತಿದೆ. ಅವರ ಕ್ಷೇತ್ರಗಳಿಗೆ ಅನುದಾನ ಬೇಕು ಎಂದು ಹೀಗೆ ಮಾಡುತ್ತಿದ್ದಾರೆʼ ಎಂದು ಅವರು ಆರೋಪಿಸಿದರು.

ಕಸದ ಲಾರಿಯಿಂದ ಅಪಘಾತವಾಗಿದೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, ʼಅಪಘಾತ ಆಗಬಾರದಿತ್ತು ಆಗಿದೆ. ಇದಕ್ಕೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬಿಟ್ಟು ಕಸ ವಿಲೇವಾರಿ ನಿಲ್ಲಿಸಿರುವುದು ಸರಿಯಲ್ಲ. ಎಸ್‌.ಟಿ. ಸೋಮಶೇಖರ್‌, ಶಿವಣ್ಣ, ಕೃಷ್ಣಬೈರೇಗೌಡ ಅವರ ಕ್ಷೇತ್ರಗಳಲ್ಲೂ ಕಸ ವಿಲೇವಾರಿ ಮಾಡಲಾಗುತ್ತಿದೆʼ ಎಂದು ತಿಳಿಸಿದರು.

ಈಗ ಹೊಸದಾಗಿ ಎರಡು ಜಾಗಗಳನ್ನು ಖರೀದಿ ಮಾಡಲಾಗಿದೆ. ಅಲ್ಲಿ ಕಸ ವಿಲೇವಾರಿಗೆ ಕಾನೂನಿನ ಪ್ರಕಾರ ಟೆಂಡರ್‌ ಕರೆಯಲಾಗಿದೆ. ಒಂದಷ್ಟು ಕಾನೂನಾತ್ಮಕ ವಿಚಾರಗಳನ್ನು ಬಗೆಹರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಅನುದಾನ ಅಲಭ್ಯತೆಗೆ ಬಿಜೆಪಿ ಸರ್ಕಾರವೇ ಕಾರಣ

ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್‌ ಹೆಚ್ಚಿದೆ, ಕಾಮಗಾರಿ ನಿಲ್ಲಿಸುತ್ತೇವೆ ಎಂದು ಗುತ್ತಿಗೆದಾರರ ಸಂಘ ತಿಳಿಸಿರುವ ಬಗ್ಗೆ ಕೇಳಿದಾಗ, ʼಇದರ ಬಗ್ಗೆ ದೂರು ನೀಡಲು ಅವರಿಗೆ ತಿಳಿಸಿ. ಅವರುಗಳು ಮೊದಲು ಕಾಮಗಾರಿ ನಿಲ್ಲಿಸಲಿ. ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಅನುದಾನವಿಲ್ಲ ಕೆಲಸ ತೆಗೆದುಕೊಳ್ಳಬೇಡಿ ಎಂದು ಹೇಳಿಲ್ಲವೇ? ಆದರೂ ಏಕೆ ಕೆಲಸಗಳನ್ನು ತೆಗೆದುಕೊಂಡರು. ಆರ್ಥಿಕ ಲಭ್ಯತೆ ಇಲ್ಲದೇ ಇದ್ದರೂ ಸಹ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆ ಕೆಲಸಗಳನ್ನು ತೆಗೆದುಕೊಳ್ಳಲಾಯಿತು. ಬೆಂಗಳೂರು ನಗರದಲ್ಲಿ ಎಷ್ಟು ಹೊಂದಿಸಬೇಕೋ ಆ ಕೆಲಸವನ್ನು ನಾನು ಮಾಡಿದ್ದೇನೆ. ಉದಾಹರಣೆಗೆ 10 ಸಾವಿರ ಕೋಟಿ ಅನುದಾನವಿದ್ದರೆ 30- 40 ಸಾವಿರ ಕೋಟಿ ಟೆಂಡರ್‌ ಕರೆದಿದ್ದಾರೆ. ಇದೆಲ್ಲದ್ದಕ್ಕೂ ಬಿಜೆಪಿ ಸರ್ಕಾರವೇ ಕಾರಣ. ಈಗ ಬಿಲ್‌ ಬಿಲ್‌ ಎಂದರೆ ಏನು ಮಾಡುವುದು. ಅಂದು ಏಕೆ ಕೆಲಸಗಳನ್ನು ತೆಗೆದುಕೊಂಡರು. ನನ್ನ ಇಲಾಖೆಯ ದಾಖಲೆಗಳನ್ನು ನೀಡುತ್ತೇನೆ. ಹಣ ಇಲ್ಲ ಎಂದು ಗೊತ್ತಿದ್ದರೂ ಕೆಲಸಗಳನ್ನು ಏಕೆ ಪ್ರಾರಂಭ ಮಾಡಿದರುʼ ಎಂದು ಹೇಳಿದರು.

DK Shivakumar: ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರಲಿವೆ: ಡಿ.ಕೆ. ಶಿವಕುಮಾರ್ ವಿಶ್ವಾಸ

ನಿಮಗೂ ಕೆಲಸ ನಿಲ್ಲಿಸುತ್ತೇವೆ ಎಂದು ಬ್ಲಾಕ್‌ಮೇಲ್‌ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, ʼಕೆಲಸ ನಿಲ್ಲಿಸಿಕೊಳ್ಳುವವರು ನಿಲ್ಲಿಸಿಕೊಳ್ಳಲಿ. ಏನು ಬೇಕಾದರೂ ಮಾಡಿಕೊಳ್ಳಲಿ. ನಮ್ಮ ಸರ್ಕಾರ ಬಜೆಟ್‌ ಪ್ರಕಾರ ಹಣ ನೀಡುತ್ತಿದೆ. ಎಷ್ಟು ಆಗುತ್ತದೆಯೋ ಅಷ್ಟು ಹಣವನ್ನು ನಾವು ಕೊಡುತ್ತೇವೆ. ಬಜೆಟ್‌ ಆದ ನಂತರ ಏನಾದರೂ ಮಾಡೋಣ. ನಮಗೂ ಮಾನವೀಯತೆ ಇದೆ. ಬ್ಲಾಕ್‌ಮೇಲ್‌ ಮಾಡುತ್ತೇವೆ ಅನ್ನುವವರೆಲ್ಲಾ ಮಾಡಿಕೊಳ್ಳಲಿʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.