ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಬಿ-ಜಿ ರಾಮ್ ಜಿ ವಿರುದ್ಧ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ಸಿನವರ ಹೋರಾಟ: ಜೋಶಿ

Pralhad Joshi: ವಿಬಿ-ಜಿ ರಾಮ್ ಜಿ ವಿರುದ್ಧ ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಸವಾಲು ಹಾಕಿದ್ದಾರೆ.

ವಿಬಿ-ಜಿ ರಾಮ್ ಜಿ ವಿರುದ್ಧ ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ಸಿನವರ ಹೋರಾಟ

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಮಾತನಾಡಿದರು. -

Profile
Siddalinga Swamy Jan 8, 2026 7:40 PM

ಬೆಂಗಳೂರು, ಜ.8: ಕಾಂಗ್ರೆಸ್ಸಿಗರು ಯಾವ ಪುರುಷಾರ್ಥಕ್ಕೆ ಮತ್ತು ಅದ್ಯಾವ ನೈತಿಕತೆ ಇಟ್ಟುಕೊಂಡು ʼವಿಬಿ-ಜಿ ರಾಮ್ ಜಿʼ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಸವಾಲು ಹಾಕಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮಗಳ ಜತೆ ಅವರು ಮಾತನಾಡಿದ್ದಾರೆ.

ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್ (ವಿಬಿ-ಜಿ ರಾಮ್ ಜಿ) ಕುರಿತಂತೆ ಕಾಂಗ್ರೆಸ್ ಪಕ್ಷವು ಜ. 10 ರಿಂದ ಹೋರಾಟ ಮಾಡಲು ಕರೆ ನೀಡಿದ್ದು, ಜನರ ದಿಕ್ಕು ತಪ್ಪಿಸುವ ಮಗದೊಂದು ತಂತ್ರವಷ್ಟೇ ಎಂದು ಟೀಕಿಸಿದರು.

20 ವರ್ಷಗಳ ಹಿಂದೆ ಉದ್ಯೋಗ ಖಾತ್ರಿ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ, ದೇಶ- ಜನರ ಆರ್ಥಿಕ ಸ್ಥಿತಿ ಅತ್ಯಂತ ಕಠಿಣವಾಗಿತ್ತು. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಕಾಂಗ್ರೆಸ್ಸಿಗರೂ ಮಾಡಿದ್ದಾರೆ ಎಂದು ಹೇಳಿದರು.

ʼವಿಬಿ-ಜಿ ರಾಮ್‌ ಜಿʼ ಗ್ರಾಮೀಣ ಜನರ ಉದ್ಯೋಗದ ಹಕ್ಕು ಕಸಿಯಲಿದೆ ಎಂಬ ಕಾಂಗ್ರೆಸ್ಸಿಗರ ಆರೋಪ ಶುದ್ಧ ಸುಳ್ಳು. ʼವಿಬಿ-ಜಿ ರಾಮ್‌ ಜಿʼ ಎಂಬುದು ಸಂಸತ್ತಿನ ಕಾಯ್ದೆ. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ, ಬದಲಾಗಿ ಉದ್ಯೋಗ ಖಾತ್ರಿಯನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಹಸಿರು ಹೈಡ್ರೋಜನ್ ಚಾಲಿತ ಮಿರೈ ಕಾರಿನಲ್ಲಿ ಜೋಶಿ-ಗಡ್ಕರಿ ಜಂಟಿ ಪ್ರಯಾಣ

ಸರಿಯಾಗಿ ಕೆಲಸ ಕೊಟ್ಟು ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಪ್ರತಿ ರಾಜ್ಯಕ್ಕೆ 17 ಸಾವಿರ ಕೋಟಿ ರೂ. ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ ಅಂದಾಜಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಮನರೇಗಾ ಇದ್ದಾಗಲೂ ಬೇರೆ ಬೇರೆ ರಾಜ್ಯ ಸರ್ಕಾರಗಳ ಅಡಿಯಲ್ಲಿ ಸರಾಸರಿ 50 ದಿನ ಮಾತ್ರ ಉದ್ಯೋಗ ಕೊಟ್ಟಿದ್ದರು. ಅಲ್ಲದೇ ಜೆಸಿಬಿ ಮೂಲಕ ಕೆಲಸ ಮಾಡಿಸಿದ್ದ ಸಾಕಷ್ಟು ನಿದರ್ಶನಗಳಿವೆ ಎಂದು ಆರೋಪಿಸಿದರು.

ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ

ʼಖಾತ್ರಿʼಯಲ್ಲಿ ಈ ಹಿಂದೆ ಒಂದು ಪೈಸೆಯನ್ನೂ ರಾಜ್ಯ ಸರ್ಕಾರ ಕೊಡುತ್ತಿರಲಿಲ್ಲ. ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರ್ಕಾರದ ದುಡ್ಡು ತಿನ್ನುವ ವ್ಯವಸ್ಥೆ ಇತ್ತು ಎಂದು ಆರೋಪಿಸಿದ ಅವರು, ಇತ್ತೀಚೆಗೆ ಕೂಲಿ ಹಣ ನೇರ ಪಾವತಿ ಆಗುತ್ತಿದ್ದರೂ, ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ. ಆದರೆ ನಮ್ಮ ಸರ್ಕಾರ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಕೇಂದ್ರೀಕೃತ ಪಾವತಿ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.

ʼವಿಬಿ-ಜಿ ರಾಮ್‌ ಜಿʼ ಯೋಜನೆ ನಿರ್ಧಾರದ ಹಕ್ಕುಗಳನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ ಎಂಬುದು ದೊಡ್ಡ ಸುಳ್ಳು. ಕಾಂಗ್ರೆಸ್ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಟೀಕಿಸಿದ ಜೋಶಿ, ಯುಪಿಎ ಕಾಲದ 10 ವರ್ಷದಲ್ಲಿ 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಆಗಿದೆ ಎಂದು ಅಮಿತ್ ಶಾ ಅವರು ಸಂಸತ್ತಿನಲ್ಲೇ ಹೇಳಿದ್ದು, ಕಾಂಗ್ರೆಸ್ ಪಕ್ಷ ಅದನ್ನು ಅಲ್ಲಗಳೆದಿಲ್ಲ ಎಂದು ತಿಳಿಸಿದರು.‌ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯಡಿ ಈ ಕಾಯ್ದೆ ತರಲಾಗಿದೆ. ಗತಿ ಶಕ್ತಿ ಯೋಜನೆಯಡಿ ಬೇರೆ ಬೇರೆ ಉದ್ದೇಶದ 85 ಲಕ್ಷ ಕೋಟಿ ಹೂಡಿಕೆಯ ವಿಭಿನ್ನ ಯೋಜನೆಗಳು ಮಂಜೂರಾಗಿವೆ. ʼವಿಬಿ-ಜಿ ರಾಮ್‌ ಜಿʼ ಇಲ್ಲವಾದರೆ ಅವೆಲ್ಲಾ ಹಾಗೇ ಬಿದ್ದಿರುತ್ತಿದ್ದವು ಎಂದು ದೂರಿದರು.

ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ

ಮನರೇಗಾದಲ್ಲಿ 100 ದಿನ ಇದ್ದ ಕೂಲಿ ಕೆಲಸವನ್ನು 125 ದಿನಕ್ಕೆ ಹೆಚ್ಚಿಸಲಾಗಿದೆ. ಹೀಗಿರುವಾಗ ಗ್ರಾಮೀಣ ಭಾಗದ ಆರ್ಥಿಕತೆ ಮೇಲೆ ದುಷ್ಪರಿಣಾಮ ಹೇಗೆ ಆಗಲು ಸಾಧ್ಯ ಎಂದು ಪ್ರಶ್ನಿಸಿದರು. ಹಿಂದೆ ಕೂಲಿ ಪಾವತಿಗೆ ನಿಗದಿತ ಕಾಲಾವಧಿಯೇ ಇರಲಿಲ್ಲ. ಈಗ 14 ದಿನದಲ್ಲಿ ಕೊಡಬೇಕು, ಇಲ್ಲವೇ ದಂಡ ಹಾಕುತ್ತಾರೆ ಎಂದು ಹೇಳಿದರು.

ಅನುಷ್ಠಾನಕ್ಕೆ ತಂದ ಕಾಮಗಾರಿ ನಿರ್ವಹಣೆಗೆ ಇದರಡಿ ಅವಕಾಶವಿದೆ. ಇವತ್ತು ಮಾಡುವುದು, ನಾಳೆ ಮರೆತುಬಿಡುವ ಪದ್ಧತಿಯಲ್ಲ. ನೀರಾವರಿ, ರಸ್ತೆ, ಶಾಲಾ ಕಟ್ಟಡ ಮಾಡಿದ್ದರೆ ಇಂತಿಷ್ಟು ವರ್ಷ ನಿರ್ವಹಣೆ ಮಾಡಬೇಕೆಂಬ ಸೂಚನೆ ಇರುತ್ತದೆ. ವಿಕಸಿತ ಗ್ರಾ.ಪಂ. ಯೋಜನೆ ತಯಾರಿಸಿ ʼವಿಕಸಿತ್ ಭಾರತ್ ರೂರಲ್ ಇನ್‍ಫ್ರಾಸ್ಟ್ರಕ್ಚರ್ʼ ಅಡಿ ಸೇರಿಸುತ್ತಾರೆ. ಇದರಲ್ಲಿ ಕಾಮಗಾರಿ ಗುಣಮಟ್ಟ ಮತ್ತು ಎಷ್ಟು ಕೆಲಸ ಎಂಬುದಕ್ಕೆ ಆದ್ಯತೆ ಕೊಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದರು.

ಸಿಎಂ ಸುದೀರ್ಘ ಅವಧಿಯ ಅಧಿಕಾರದ ಕೊಡುಗೆಯಾಗಿ ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಲಿ: ಬೊಮ್ಮಾಯಿ

ಈ ವೇಳೆ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.