MP Dr K Sudhakar: ಜಿಲ್ಲಾ ಉಸ್ತುವಾರಿ ಸಚಿವರು ಹೆಚ್.ಎನ್.ವ್ಯಾಲಿ ನೀರನ್ನು ಬಳಸಲಿ, ಸಂಪುಟ ಸಹೋದ್ಯೋಗಿಗಳಿಗೂ ಕುಡಿಸಿ ತೋರಿಸಲಿ : ಸಂಸದ ಡಾ.ಕೆ.ಸುಧಾಕರ್ ಸವಾಲು
ಪ್ರತಿಕಾ ಹೇಳಿಕೆ ನೀಡಿರುವ ಅವರು, ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳಡಿಯಲ್ಲಿ ೩ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ, ಕೇವಲ ೩ ಹಂತದ ಶುದ್ಧೀಕರಣದ ಬಳಿಕ ಕುಡಿಯುವ ನೀರಿಗಾಗಿ ಬಳಸಬಹುದು ಎಂಬ ರಾಜ್ಯ ಸರ್ಕಾರದ ನಿಲುವು ಕಳವಳಕಾರಿ ಹಾಗೂ ಖಂಡನೀಯ ಎಂದು ಕಿಡಿಕಾರಿದ್ದಾರೆ.


ಚಿಕ್ಕಬಳ್ಳಾಪುರ : ಕೆ.ಸಿ ಹಾಗೂ ಎಚ್‌ಎನ್ ವ್ಯಾಲಿ ಯೋಜನೆಗಳ ಸಂಸ್ಕರಿಸಿದ ನೀರನ್ನು ೩ನೇ ಹಂತದ ಶುದ್ಧೀಕರಣಗೊಳಿಸುವುದು ಅಗತ್ಯವಿಲ್ಲ ಎಂಬ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿರುವ ಸಂಸದ ಡಾ.ಕೆ.ಸುಧಾಕರ್(Chikkaballapur MP Dr K Sudhakar), ಸುರಕ್ಷಿತವಲ್ಲದ ನೀರನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಭಾಗದ ಸಾರ್ವಜನಿಕ ಆರೋಗ್ಯ ಬಗ್ಗೆ ಕಾಳಜಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರತಿಕಾ ಹೇಳಿಕೆ ನೀಡಿರುವ ಅವರು, ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳಡಿಯಲ್ಲಿ ೩ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ, ಕೇವಲ ೩ ಹಂತದ ಶುದ್ಧೀಕರಣದ ಬಳಿಕ ಕುಡಿಯುವ ನೀರಿಗಾಗಿ ಬಳಸಬಹುದು ಎಂಬ ರಾಜ್ಯ ಸರ್ಕಾರದ ನಿಲುವು ಕಳವಳಕಾರಿ ಹಾಗೂ ಖಂಡನೀಯ ಎಂದು ಕಿಡಿಕಾರಿದ್ದಾರೆ.
ಸಚಿವರು ಕುಡಿದು ತೋರಿಸಲಿ!
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರೇ 3ನೇ ಹಂತದ ಶುದ್ಧೀಕರಣ ಇಲ್ಲದೆ ಈ ನೀರನ್ನು ಕುಡಿಯಲು ಬಳಸಬಹುದು ಎಂದು ಹೇಳಿದ್ದಾರೆ. ಈ ನೀರನ್ನು ಮೊದಲು ಸಚಿವರೇ ಕುಡಿದು ಹಾಗೂ ತಮ್ಮ ಮನೆಗಳಲ್ಲಿ ಉಪಯೋಗಿಸಿ ತೋರಿಸಲಿ, ಹಾಗೆಯೇ ಕಾಂಗ್ರೆಸ್ ಶಾಸಕರಿಗೆ ಮತ್ತು ಸಂಪುಟ ಸಹೋದ್ಯೋಗಿಗಳಿಗೆ ಕುಡಿಯಲು ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿವಾಳಿ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ!
ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆ ಅಥವಾ ಮೂರನೇ ಹಂತದ ಶುದ್ಧೀಕರಣ ಮಾಡಲು ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇಲ್ಲ ಎಂದು ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳಲಿ, ಅದು ಬಿಟ್ಟು ಮೂರನೇ ಹಂತದ ಶುದ್ಧೀಕರಣವೇ ಅಗತ್ಯವಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡುವುದು ಯಾವ ಸೀಮೆ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್‌ನ ಸರ್ಕಾರದ ದಿವಾಳಿಯ ಪಾಪಕ್ಕೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜನತೆ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಕಾ, ಪಾಪರ್ ಸರ್ಕಾರದ ಅಯೋಗ್ಯತೆಗೆ ಅಮಾಯಕ ಜನರು ಬಲಿಯಾಗಬೇಕೇ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇದ್ದರೆ ೩ನೇ ಹಂತದ ಶುದ್ಧೀಕರಣ ಮಾಡಿಸಲಿ, ಇಲ್ಲವಾದರೆ ೨೦೨೮ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ೩ನೇ ಹಂತದ ಶುದ್ಧೀಕರಣ ಯೋಜನೆ ಜಾರಿ ಮಾಡಲಿದೆ ಎಂದು ಅವರು ಹೇಳಿದ್ದಾರೆ.