Sigandur Bridge: ಸಿಗಂದೂರು ಸೇತುವೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆ; ಪ್ರಧಾನಿ ಮೋದಿಗೆ ಸಿಎಂ ಪತ್ರ
Sigandur Bridge: ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.


ಬೆಂಗಳೂರು: ಸಿಗಂದೂರು ಚೌಡೇಶ್ವರಿ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2,000 ಕೋಟಿ ರೂಪಾಯಿ ವೆಚ್ಚದ ಒಂಬತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ (88 ಕಿ.ಮೀ) ಚಾಲನೆ ನೀಡಲಾಗಿದೆ. ಆದರೆ, ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾರ್ಯಕ್ರಮದ ಮಾಹಿತಿ ತಮಗೆ ಬೇರೆ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ, ತಮ್ಮ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುಂಚಿತವಾಗಿ ತಿಳಿಸದೆ ಪ್ರಕಟಿಸಲಾಗಿದೆ. ಕಾರ್ಯಕ್ರಮ ನಡೆದ ದಿನವೇ ವಿಜಯನಗರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಮತ್ತೊಂದು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು. ಜುಲೈ 11ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಸಾಗರ ಕಾರ್ಯಕ್ರಮವನ್ನು ಮುಂದೂಡುವಂತೆ ಕೋರಿದ್ದರೂ ಪರಿಗಣಿಸಿಲ್ಲ ಎಂದು ಸಿಎಂ ಪತ್ರದಲ್ಲಿ ಬರೆದಿದ್ದಾರೆ.
ಕಾರ್ಯಕ್ರಮದ ಆಯೋಜಕರ ವಿರುದ್ಧ ಟೀಕೆ ಮಾಡಿರುವ ಸಿಎಂ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿಯ ಹೆಸರನ್ನು ಉಪಮುಖ್ಯಮಂತ್ರಿ ಮತ್ತು ಇತರ ರಾಜ್ಯದ ಗಣ್ಯರ ಹೆಸರಿಗಿಂತ ಮೊದಲು ಮುದ್ರಿಸಲಾಗಿದೆ. ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದಿದ್ದರೂ ಕಾರ್ಯಕ್ರಮ ಮುಂದುವರಿಸಿರುವುದು ಶಿಷ್ಟಾಚಾರ ಉಲ್ಲಂಘನೆಯಾಗಿದೆ.
ಶರಾವತಿ ಹಿನ್ನೀರಿನ ಮೇಲಿನ ಸೇತುವೆ, ರಾಷ್ಟ್ರೀಯ ಹೆದ್ದಾರಿ 369ಇ ಯೋಜನೆಯ ಭಾಗವಾಗಿದೆ. ಇದನ್ನು 2013ರಲ್ಲಿ ರಾಜ್ಯ ಸರ್ಕಾರವೇ ಮೊದಲು ರೂಪಿಸಿತ್ತು ಮತ್ತು ನಂತರ ಕೇಂದ್ರವು ಜಾರಿಗೊಳಿಸಿತ್ತು. ತಾಂತ್ರಿಕ ವರದಿಗಳ ಪ್ರಕಾರ, ಯೋಜನೆಯ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಮುಖ್ಯಮಂತ್ರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಸಿಗಂದೂರು ಸೇತುವೆಗೆ ಮಾತಾ ಶ್ರೀ ಚೌಡೇಶ್ವರಿ ದೇವಿ ಹೆಸರಿಡಿ: ನಿತಿನ್ ಗಡ್ಕರಿಗೆ ಜೋಶಿ ಮನವಿ
ಕೇಂದ್ರದ ಈ ಕ್ರಮಗಳನ್ನು ಸಂವಿಧಾನದ ಆಶಯವಾಗಿರುವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು ಎಲ್ಲ ಕೇಂದ್ರ ಸಚಿವಾಲಯಗಳಿಗೆ ಸಲಹೆ ನೀಡುವಂತೆ ಅವರು ಪ್ರಧಾನಮಂತ್ರಿಗಳನ್ನು ಸಿಎಂ ಸಿದ್ದರಾಮಯ್ಯ ಕೋರಿದ್ದಾರೆ.