Dharmasthala Case: ಧರ್ಮಸ್ಥಳ ಪ್ರಕರಣ ಎನ್‌ಐಎಗೆ? ಗೃಹ ಸಚಿವ ಪರಮೇಶ್ವರ ರಿಯಾಕ್ಷನ್
G Parameshwar: ಗೃಹ ಸಚಿವ ಪರಮೇಶ್ವರ ಅವರನ್ನು SIT ಮುಖ್ಯಸ್ಥ ಪ್ರಣಬ್ ಮೋಹಂತಿ ಇಂದು ಭೇಟಿಯಾಗಿ ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸಿದರು. ಧರ್ಮಸ್ಥಳ ಪ್ರಕರಣದಲ್ಲಿ ಈವರೆಗಿನ ತನಿಖಾ ಬೆಳವಣಿಗೆ, ಎಸ್‌ಐಟಿ ಕೈಗೊಳ್ಳಲಿರುವ ಮುಂದಿನ ನಡೆ ವಿಚಾರವಾಗಿ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.

-

ಬೆಂಗಳೂರು: ಧರ್ಮಸ್ಥಳ (Dharmasthala Case) ತಲೆ ಬುರುಡೆ ಪ್ರಕರಣದ ತನಿಖೆಯನ್ನು ಎನ್‌ಐಗೆ (NIA) ನೀಡಬೇಕು ಎಂಬ ವಿಪಕ್ಷಗಳ ಆಗ್ರಹಕ್ಕೆ ಗೃಹ ಸಚಿವ ಜಿ ಪರಮೇಶ್ವರ್ (G Parameshwar) ಖಡಕ್ ಉತ್ತರ ನೀಡಿದ್ದಾರೆ. ಬೆಂಗಳೂರಲ್ಲಿ ಧರ್ಮಸ್ಥಳ ಕೇಸ್ ಬಗ್ಗೆ ಮಾತಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಪ್ರಕರಣ ಬಗ್ಗೆ ಎಸ್ಐಟಿ ತನಿಖೆ ನಡೆಯುತ್ತಿದೆ. ವರದಿ ಬಂದಿಲ್ಲ. ತನಿಖೆಯ ಹಂತದಲ್ಲಿರುವ ಪ್ರಕರಣವನ್ನು ಯಾವುದೇ ಕಾರಣಕ್ಕೂ ಎನ್ಐಎ ತನಿಖೆಗೆ ನೀಡೋದಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.
ಶವಗಳನ್ನು ಅಕ್ರಮವಾಗಿ ಹೂತಿಡಲಾಗಿದೆ ಎನ್ನುವ ಆರೋಪದ ಹಿಂದೆ ದೊಡ್ಡ ಗ್ಯಾಂಗ್‌ನ ಷಡ್ಯಂತ್ರವೇ ಅಡಗಿದೆ ಎಂದು ವಿಪಕ್ಷಗಳು ಆರೋಪ ಮಾಡ್ತಿದೆ. ಬುರುಡೆ ರಹಸ್ಯ ಬಯಲಾಗಬೇಕು ಅಂದರೆ ಈ ಪ್ರಕರಣವನ್ನು ಎನ್ಐಎ ತನಿಖೆಗೆ (NIA Investigation) ನೀಡಬೇಕು ಎನ್ನುವ ಆಗ್ರಹ ಕೂಡ ಹೆಚ್ಚಿದೆ. ಎನ್ಐಎ ತನಿಖೆ ವಿಚಾರವಾಗಿ ಮಾತಾಡಿದ ಗೃಹ ಸಚಿವರು, ವಿಪಕ್ಷಗಳ ಆಗ್ರಹವನ್ನು ನಿರಾಕರಿಸಿದ್ದಾರೆ.
ಎನ್ಐಎ ತನಿಖೆಗೆ ಪ್ರಕರಣ ಕೊಡೋದಿಲ್ಲ, ಅದರ ಅಗತ್ಯವೂ ಇಲ್ಲ. ಬಿಜೆಪಿಯವರು ಎಸ್ಐಟಿ ತನಿಖೆಗೆ ಅಡ್ಡಿ ಪಡಿಸುತ್ತಿದ್ದಾರೆ. ಅವರು ಮಾಡುತ್ತಿರುವುದನ್ನು ನೋಡಿದರೆ ಹಾಗೇ ಅನಿಸುತ್ತಿದೆ. ಪದೇ ಪದೆ ಎಸ್ಐಟಿಗೆ ವಿರೋಧ ಮಾಡುತ್ತಿದ್ದಾರೆ. ಎಸ್ಐಟಿ ತನಿಖೆ ನಡೆಯುತ್ತಿದ್ದು, ಇಲ್ಲಿ ಯಾವ ಲೋಪವಿದೆ? ಎಸ್ಐಟಿ ತನಿಖೆ ಮುಗಿದು ವರದಿ ಬರುವವರೆಗೂ ಬೇರೆ ಯಾವುದೇ ತನಿಖೆ ಇಲ್ಲ. ಅಲ್ಲದೇ ಎಸ್ಐಟಿ ತನಿಖೆಯಲ್ಲಿಯೂ ಏನೂ ಸಮಸ್ಯೆ ಇಲ್ಲ ಎಂದಿದ್ದಾರೆ.
ಎಸ್‌ಐಟಿ ಮುಖ್ಯಸ್ಥ ಭೇಟಿ
ಗೃಹ ಸಚಿವ ಪರಮೇಶ್ವರ ಅವರನ್ನು SIT ಮುಖ್ಯಸ್ಥ ಪ್ರಣಬ್ ಮೋಹಂತಿ ಇಂದು ಭೇಟಿಯಾದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಜಿ ಪರಮೇಶ್ವರ ನಿವಾಸದಲ್ಲಿ ಭೇಟಿಯಾಗಿ ಧರ್ಮಸ್ಥಳ ಪ್ರಕರಣದ ಕುರಿತು ಚರ್ಚಿಸಿದರು. ಧರ್ಮಸ್ಥಳ ಪ್ರಕರಣದಲ್ಲಿ ಈವರೆಗಿನ ತನಿಖಾ ಬೆಳವಣಿಗೆ, ಎಸ್‌ಐಟಿ ಕೈಗೊಳ್ಳಲಿರುವ ಮುಂದಿನ ನಡೆ ವಿಚಾರವಾಗಿ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.