Greater Bengaluru Authority: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ; 5 ನಗರ ಪಾಲಿಕೆ ರಚನೆ, ಯಾವ ಕ್ಷೇತ್ರ ಯಾವ ವಲಯಕ್ಕೆ?
Greater Bengaluru Authority: ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ 5 ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ. ಜಿಬಿಎ ಹಾಗೂ ಐದು ನಗರ ಪಾಲಿಕೆ ಆಡಳಿತ ನಿರ್ವಹಣೆಗೆ ಆಯುಕ್ತರನ್ನು ನೇಮಕ ಮಾಡಲಾಗಿದೆ. ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಐದು ನಗರ ಪಾಲಿಕೆಯ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ.

-

ಬೆಂಗಳೂರು: ರಾಜಧಾನಿ ಬೆಂಗಳೂರಿನ ಆಡಳಿತ ಸುಧಾರಣೆ ದೃಷ್ಟಿಯಿಂದ ಬಿಬಿಎಂಪಿ ಬದಲಿಗೆ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (Greater Bengaluru Authority) ಇಂದಿನಿಂದ (ಸೆ.2)ರಿಂದ ಅಸ್ತಿತ್ವಕ್ಕೆ ಬಂದಿದೆ. ಈ ಪ್ರಾಧಿಕಾರದಡಿ (ಜಿಬಿಎ) ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಎಂದು 5 ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ 5 ನಗರ ಪಾಲಿಕೆಗಳ ವ್ಯಾಪ್ತಿಗೆ 27 ವಿಧಾನಸಭಾ ಕ್ಷೇತ್ರಗಳು ಹಾಗೂ 197 ವಾರ್ಡ್‌ಗಳು ಬರಲಿವೆ.
ಜನಸಂಖ್ಯೆ ಪ್ರಮಾಣ, ಉತ್ಪತ್ತಿಯಾಗುವ ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು, ಆರ್ಥಿಕ ಪ್ರಾಮುಖ್ಯತೆ, ಪ್ರದೇಶದಲ್ಲಿ ಲಭ್ಯವಿರುವ ಮೂಲಸೌಕರ್ಯ ಸೌಲಭ್ಯಗಳ ಅನ್ವಯ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ 5 ನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ. ಜಿಬಿಎ ಹಾಗೂ ಐದು ನಗರ ಪಾಲಿಕೆ ಆಡಳಿತ ನಿರ್ವಹಣೆಗೆ ಆಯುಕ್ತರನ್ನು ನೇಮಕ ಮಾಡಲಾಗಿದೆ. ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಐದು ನಗರ ಪಾಲಿಕೆಯ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ.
ಬೆಂಗಳೂರಿನ 5 ಹೊಸ ಪಾಲಿಕೆಗಳ ವಿಧಾನಸಭಾ ವ್ಯಾಪ್ತಿ
1.ಬೆಂಗಳೂರು ನಗರ ಕೇಂದ್ರ ಪಾಲಿಕೆ :
ವಿಧಾನಸಭಾ ಕ್ಷೇತ್ರ ವಲಯ 1: ಶಾಂತಿನಗರ, ಸಿ.ವಿ.ರಾಮನ್ ನಗರ
ವಿಧಾನಸಭಾ ಕ್ಷೇತ್ರ ವಲಯ 2: ಶಿವಾಜಿನಗರ, ಗಾಂಧಿನಗರ, ಚಿಕ್ಕಪೇಟೆ, ಚಾಮರಾಜಪೇಟೆ
2.ಬೆಂಗಳೂರು ಪೂರ್ವ ನಗರ ಪಾಲಿಕೆ :
ವಿಧಾನಸಭಾ ಕ್ಷೇತ್ರ ವಲಯ 1: ಮಹದೇವಪುರ
ವಿಧಾನಸಭಾ ಕ್ಷೇತ್ರ ವಲಯ 2: ಕೆ.ಆರ್.ಪುರಂ
3.ಬೆಂಗಳೂರು ಪಶ್ಚಿಮ ನಗರ ಪಾಲಿಕೆ :
ವಿಧಾನಸಭಾ ಕ್ಷೇತ್ರ ವಲಯ 1: ಯಶವಂತಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರದ ಕೆಲ ಭಾಗಗಳು ಮತ್ತು ಮಹಾಲಕ್ಷ್ಮಿಲೇಔಟ್
ವಿಧಾನಸಭಾ ಕ್ಷೇತ್ರ ವಲಯ 2: ಮಲ್ಲೇಶ್ವರಂ, ರಾಜಾಜಿನಗರ, ಗೋವಿಂದರಾಜ ನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರದ ಕೆಲ ಭಾಗಗಳು
4.ಬೆಂಗಳೂರು ಉತ್ತರ ನಗರ ಪಾಲಿಕೆ:
ವಿಧಾನಸಭಾ ಕ್ಷೇತ್ರ ವಲಯ 1: ಬ್ಯಾಟರಾಯನಪುರ, ಪುಲಿಕೇಶಿನಗರ, ಸರ್ವಜ್ಞ ನಗರ
ವಿಧಾನಸಭಾ ಕ್ಷೇತ್ರ ವಲಯ 2: ದಾಸರಹಳ್ಳಿ ಹಾಗೂ ರಾಜರಾಜೇಶ್ವರಿ ನಗರದ ಕೆಲ ಭಾಗಗಳು, ಹೆಬ್ಬಾಳ, ಯಲಹಂಕ
5. ಬೆಂಗಳೂರು ದಕ್ಷಿಣ ನಗರ ಪಾಲಿಕೆ :
ವಿಧಾನಸಭಾ ಕ್ಷೇತ್ರ ವಲಯ 1: ಪದ್ಮನಾಭನಗರ, ರಾಜರಾಜೇಶ್ವರಿ ನಗರ ಮತ್ತು ಯಶವಂತಪುರದ ಕೆಲ ಭಾಗಗಳು, ಜಯನಗರ, ಬೆಂಗಳೂರು ದಕ್ಷಿಣ
ವಿಧಾನಸಭಾ ಕ್ಷೇತ್ರ ವಲಯ 2: ಬಿಟಿಎಂ ಲೇಔಟ್, ಬೊಮ್ಮನಹಳ್ಳಿ ಹಾಗೂ ಮಹದೇವಪುರ ಮತ್ತು ಆನೇಕಲ್‌ನ ಕೆಲ ಭಾಗಗಳು
ಐದು ಪಾಲಿಕೆಗಳಿಗೆ ನೂತನ ಆಯುಕ್ತರು
- ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ: ರಾಜೇಂದ್ರ ಚೋಳನ್.
- ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ: ರಮೇಶ್ ಜಿ.ಎಸ್ , ಅಪರ ಆಯುಕ್ತೆ- ಸ್ನೇಹಲ್ ಸುಧಾಕರ್
- ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ: ಪೊಮ್ಮಳ ಸುನಿಲ್ ಕುಮಾರ್
- ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ: ರಮೇಶ್ ಕೆ.ಎನ್, ಅಪರ ಆಯುಕ್ತ: ಪಾಂಡುರಾಹುಲ್ ತುಕಾರಾಮ್
- ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತ: ರಾಜೇಂದ್ರ ಕೆ.ವಿ
ಪಾಲಿಕೆಗಳ ಕಚೇರಿ ಎಲ್ಲಿದೆ?
- ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ – 2
- ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ: ಹಾಲಿ ಪೂರ್ವ ವಲಯ ಕಚೇರಿ, ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ
- ಬೆಂಗಳೂರು ಪೂರ್ವ ನಗರ ಪಾಲಿಕೆ: ಮಹಾದೇವಪುರ ವಲಯ ಕಚೇರಿ, ಕೆ.ಆರ್ ಪುರಂ ಕಚೇರಿ
- ಪಶ್ಚಿಮ ವಲಯ: ಆರ್.ಆರ್ ನಗರ ವಲಯ ಕಚೇರಿ, ಹಾಲಿ ಪಾಲಿಕೆ ಸೌಧ ಚಂದ್ರಲೇಔಟ್
- ಬೆಂಗಳೂರು ಉತ್ತರ ನಗರ ಪಾಲಿಕೆ: ಹಾಲಿ ಯಲಹಂಕ ವಲಯ ಕಚೇರಿ, ಹಾಲಿ ದಾಸರಹಳ್ಳಿ ವಲಯ ಕಚೇರಿ
- ಬೆಂಗಳೂರು ದಕ್ಷಿಣ ನಗರ ಪಾಲಿಕೆ: ಹಾಲಿ ದಕ್ಷಿಣ ವಲಯ ಕಚೇರಿ, ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಕೇಂದ್ರ ಎಂದು 5 ನಗರ ಪಾಲಿಕೆಗಳನ್ನು ರಚಿಸಿದ್ದೇವೆ. ಉತ್ತಮ ಸೇವೆಗಳನ್ನು ನೀಡುವ ಹಾಗೂ ಅಭಿವೃದ್ಧಿಯನ್ನು ಮಾಡುವ ಉದ್ದೇಶದಿಂದಲೇ 5 ನಗರ ಪಾಲಿಕೆಗಳಾಗಿ ವಿಂಗಡಿಸಲಾಗಿದೆ. ಈ 5 ನಗರ ಪಾಲಿಕೆಗಳ… pic.twitter.com/gteHUQtx3B
— DK Shivakumar (@DKShivakumar) August 31, 2025
ಅಭಿವೃದ್ಧಿಯ ಸಮನ್ವಯ, ಮೇಲ್ವಿಚಾರಣೆಗಾಗಿ ಜಿಬಿಎ ರಚನೆ
ಬೆಂಗಳೂರಿನಲ್ಲಿ ಆಡಳಿತ ಅವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರವು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ಅನ್ನು ದಿನಾಂಕ: 15-05-2025 ರಂದು ಜಾರಿಗೊಳಿಸಿತ್ತು. ಈ ಅಧಿನಿಯಮವು ಗ್ರೇಟರ್ ಬೆಂಗಳೂರು ಪ್ರದೇಶದ ಅಭಿವೃದ್ಧಿಯ ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಸ್ಥಾಪಿಸಲು; ಪರಿಣಾಮಕಾರಿ, ಸಹಭಾಗಿತ್ವದ ಮತ್ತು ಸ್ಪಂದನಶೀಲ ಆಡಳಿತಕ್ಕಾಗಿ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ 7 ಕ್ಕಿಂತ ಹೆಚ್ಚಿಲ್ಲದಂತೆ ನಗರ ಪಾಲಿಕೆಗಳನ್ನು ಸ್ಥಾಪಿಸಲು; ಹಾಗೂ ಸಮುದಾಯ ಪಾಲ್ಗೊಳ್ಳುವಿಕೆಯನ್ನು ನಗರಾಡಳಿತದ ಮೂಲ ಘಟಕವಾದ ವಾರ್ಡ್ ಮಿತಿಗಳಲ್ಲಿ ಸುಗಮಗೊಳಿಸಿ ಸಶಕ್ತಗೊಳಿಸಲು ಅವಕಾಶ ಕಲ್ಪಿಸುತ್ತದೆ.
ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿಯವರಾದ ಬಿ.ಎಸ್. ಪಾಟೀಲ್, ಐ.ಎ.ಎಸ್., ಅವರ ಅಧ್ಯಕ್ಷತೆಯಲ್ಲಿ ಜುಲೈ 2023 ರಲ್ಲಿ ಬ್ರ್ಯಾಂಡ್ ಬೆಂಗಳೂರು ಸಮಿತಿಯನ್ನು ರಚಿಸಿದ್ದು, ಸಮಿತಿಯು ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದ ಕರಡನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಕರಡನ್ನು ಅಲ್ಪ ಮಟ್ಟಿನ ಪರಿಷ್ಕರಣದೊಂದಿಗೆ ಕರ್ನಾಟಕ ವಿಧಾನ ಸಭೆಯ ಮುಂದೆ 2024 ರ ಜುಲೈ ಅಧಿವೇಶನದ ಸಂದರ್ಭದಲ್ಲಿ ಮಂಡಿಸಿದಾಗ ಹಲವು ಸದಸ್ಯರ ಕೋರಿಕೆಯ ಮೇರೆಗೆ ಜಂಟಿ ಪರಿಶೀಲನಾ ಸಮಿತಿಗೆ ಸಲ್ಲಿಸಲಾಗಿತ್ತು. ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯ ಜಂಟಿ ಪರಿಶೀಲನಾ ಸಮಿತಿಯು ಆರು ತಿಂಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಿ, 05 ಸಾರ್ವಜನಿಕ ಅಭಿಪ್ರಾಯ ಸಂಗ್ರಹಣಾ ಸಭೆಗಳೊಂದಿಗೆ ತನ್ನ ವರದಿ ಮತ್ತು ಪರಿಷ್ಕೃತ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ, 2024 ಅನ್ನು ಸನ್ಮಾನ್ಯ ಸಭಾಧ್ಯಕ್ಷರಿಗೆ ಸಲ್ಲಿಸಿತ್ತು.
ಕರ್ನಾಟಕ ವಿಧಾನ ಮಂಡಲವು ದಿನಾಂಕ: 13-03-2025 ರಂದು ಕೆಲವು ತಿದ್ದುಪಡಿಗಳೊಂದಿಗೆ ಇದನ್ನು ಅಂಗೀಕರಿಸಿದ್ದು, ದಿನಾಂಕ: 23-04-2025 ರಂದು ರಾಜ್ಯಪಾಲರು ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ಕ್ಕೆ ಅನುಮತಿಯನ್ನು ನೀಡಿದ್ದರು. ದಿನಾಂಕ: 24-04-2025 ರಂದು ಈ ಅಧಿನಿಯಮವನ್ನು ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆಯಲ್ಲಿ ಪ್ರಕಟಿಸಲಾಗಿತ್ತು.
ದಿನಾಂಕ: 15-05-2025 ರಂದು ಈ ಅಧಿನಿಯಮವನ್ನು ಜಾರಿಗೊಳಿಸಲಾಗಿತ್ತು. ಅಧಿನಿಯಮದ ಕಲಂ 9 ರ ಅನುಸಾರ ಅಧಿನಿಯಮವು ಜಾರಿಗೊಂಡ 120 ದಿನಗಳ ಒಳಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಬೇಕಿರುತ್ತದೆ. ಅದರಂತೆ ದಿನಾಂಕ: 26-08-2025ರ ಅಧಿಸೂಚನೆಯಲ್ಲಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿತ್ತು. ಈ ಪ್ರಾಧಿಕಾರವು ಕನಿಷ್ಠ 3 ತಿಂಗಳಿಗೆ ಒಮ್ಮೆ ಸಭೆ ಸೇರುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪ್ರಮುಖ ಜವಾಬ್ದಾರಿಗಳೆಂದರೆ:
- ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿನ ಎಲ್ಲಾ ಸಾರ್ವಜನಿಕ ಪ್ರಾಧಿಕಾರಗಳ (Parastatals) ಸಮನ್ವಯ ಮತ್ತು ಮೇಲ್ವಿಚಾರಣೆ.
- ಎಲ್ಲಾ 05 ನಗರ ಪಾಲಿಕೆಗಳಿಗಾಗಿ ಕಾಮನ್ ಕೇಡರ್ ನಿರ್ವಹಿಸುವುದು.
- ಬೆಂಗಳೂರು ಕಾರ್ಯನಿರ್ವಹಿಸುವುದು. ಪ್ರದೇಶಕ್ಕೆ ಯೋಜನಾ ಪ್ರಾಧಿಕಾರವಾಗಿ
- ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಪ್ರಮುಖ ಯೋಜನೆಗಳನ್ನು ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು.
ದಿನಾಂಕ: 15-05-2025 ರಂದು ಬಿಬಿಎಂಪಿ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರದೇಶವೆಂದು ಗೊತ್ತುಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ. ಮುಂದುವರೆದು, ಗೌರವಾನ್ವಿತ ರಾಜ್ಯಪಾಲರ ಅನುಮೋದನೆ ಪಡೆದು ದಿನಾಂಕ: 19-07-2025 ರಂದು ಪ್ರಸ್ತಾವಿತ 05 ನಗರ ಪಾಲಿಕೆಗಳ ಗಡಿ ವಿವರಗಳೊಂದಿಗೆ ಅಧಿಸೂಚನೆಯನ್ನು ಪ್ರಕಟಿಸಿ ಸಾರ್ವಜನಿಕರಿಂದ 30 ದಿನಗಳ ಅವಧಿಯಲ್ಲಿ ಸಲಹೆ/ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಈ ಅವಧಿಯಲ್ಲಿ ಒಟ್ಟು 55 ಸಲಹೆ/ ಆಕ್ಷೇಪಣೆಗಳು ಸ್ವೀಕೃತಗೊಂಡಿದ್ದು, ಈ ಬಗ್ಗೆ ಸರ್ಕಾರದ ಹಂತದಲ್ಲಿ ಪರಿಶೀಲಿಸಲಾಗಿದೆ. 05 ನಗರ ಪಾಲಿಕೆಗಳ ಅಂತಿಮ ಗಡಿ ವಿವರಗಳೊಂದಿಗೆ ಅವುಗಳ ಸ್ಥಾಪನೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ಅದರಂತೆ ದಿನಾಂಕ: 02-09-2025 ರ ಈ ದಿನ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.
ಈ 05 ನಗರ ಪಾಲಿಕೆಗಳಿಗೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯವರ ಹಂಚಿಕೆ ಮಾಡಿ ಅಗತ್ಯ ಆದೇಶಗಳನ್ನು ಈಗಾಗಲೇ ಹೊರಡಿಸಲಾಗಿದೆ. ಅಲ್ಲದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರನ್ನು ನೇಮಕ ಮಾಡಿ ಮತ್ತು ನಗರ ಪಾಲಿಕೆಗಳಿಗೆ ಆಯುಕ್ತರು ಮತ್ತು ಅಪರ ಆಯುಕ್ತರು (ಅಭಿವೃದ್ಧಿ) ಅವರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ 05 ನಗರ ಪಾಲಿಕೆಗಳು ಸ್ವಾಯತ್ತ ಸಂಸ್ಥೆಗಳಾಗಿರುತ್ತವೆ. ಇವು ಸಂವಿಧಾನದ ಕಲಂ 243W ಮತ್ತು 12ನೇ ಷೆಡ್ಯೂಲ್‌ನಲ್ಲಿ ನೀಡಲಾದ ನಗರ ಪಾಲಿಕೆಗಳ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಯಾವ ವಿಧದಲ್ಲಿ ನೀಡಲಾಗಿದೆಯೋ ಅದೇ ರೀತಿಯಾಗಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ ಕಲಂ 111 ಮತ್ತು ಮೊದಲನೇ ಷೆಡ್ಯೂಲ್ ನಲ್ಲಿ ನೀಡಲಾಗಿದ್ದು, ಅದರಂತೆ 05 ನಗರ ಪಾಲಿಕೆಗಳು ಕರ್ತವ್ಯ ನಿರ್ವಹಿಸುತ್ತವೆ.
ಈ ಸುದ್ದಿಯನ್ನೂ ಓದಿ | Greater Bengaluru: ಇತಿಹಾಸದ ಪುಟ ಸೇರಿದ ಬಿಬಿಎಂಪಿ, ಇಂದಿನಿಂದ ‘ಗ್ರೇಟರ್ ಬೆಂಗಳೂರುʼ
ರಚಿಸಲಾದ 05 ನಗರ ಪಾಲಿಕೆಗಳಲ್ಲಿ ವಾರ್ಡ್‌ಗಳ ಪುನರ್ ವಿಂಗಡಣೆ ಮಾಡಬೇಕಿದ್ದು, ಇದಕ್ಕಾಗಿ ಮುಖ್ಯ ಆಯುಕ್ತರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇವರ ಅಧ್ಯಕ್ಷತೆಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗವನ್ನು ರಚಿಸಿ ಆದೇಶಿಸಲಾಗಿದೆ. ಈ ಆಯೋಗಕ್ಕೆ ಮಾರ್ಗಸೂಚಿಗಳನ್ನೂ ಸಹ ಸರ್ಕಾರದ ಆದೇಶದ ಮೂಲಕ ಹೊರಡಿಸಲಾಗಿದೆ.