ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eshwar Khandre: ಅರಣ್ಯಗಳಲ್ಲಿ ಹೊರ ರಾಜ್ಯದವರ ಜಾನುವಾರು ಮೇಯಿಸಲು ಮಾತ್ರ ನಿಷೇಧ: ಈಶ್ವರ ಖಂಡ್ರೆ ಸ್ಪಷ್ಟನೆ

Eshwar Khandre: ಅರಣ್ಯ ಹಕ್ಕು ಕಾಯ್ದೆ-2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ. ಆದರೆ ನೆರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರು ತಂದು ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ನೆರೆ ರಾಜ್ಯದವರಿಗೆ ಮಾತ್ರ ಅರಣ್ಯಗಳಲ್ಲಿ ಜಾನುವಾರು ಮೇಯಿಸಲು ಕಡಿವಾಣ

Prabhakara R Prabhakara R Jul 24, 2025 5:07 PM

ಬೆಂಗಳೂರು: ಅರಣ್ಯಗಳಲ್ಲಿ ಜಾನುವಾರು ಮೇಯಿಸಲು ನಿಷೇಧ ಹೇರಿದ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಸ್ಪಷ್ಟನೆ ನೀಡಿದ್ದು, ನೆರೆ ರಾಜ್ಯದವರ ಜಾನುವಾರು ಮೇಯಿಸಲು ಕಡಿವಾಣ ಹಾಕಲಾಗುವುದು. ಇದರಿಂದ ಸ್ಥಳೀಯರಿಗೆ ಆತಂಕ ಬೇಡ ಎಂದು ತಿಳಿಸಿದ್ದಾರೆ.

ಅರಣ್ಯ ಹಕ್ಕು ಕಾಯ್ದೆ-2006 ಅಡಿಯಲ್ಲಿ ಅರಣ್ಯವಾಸಿಗಳು ಮತ್ತು ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲು ಅವಕಾಶವಿದೆ. ಆದರೆ ನೆರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ದನಕರು ತಂದು ಮೇಯಿಸುವುದಕ್ಕೆ ಮಾತ್ರ ಕಡಿವಾಣ ಹಾಕಲಾಗುವುದು.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಮೀಸಲು ಅರಣ್ಯ, ವನ್ಯಜೀವಿಧಾಮ, ಹುಲಿ ಸಂರಕ್ಷಿತ ಅರಣ್ಯಗಳಲ್ಲಿ ಜನರ ಅತಿಕ್ರಮ ಪ್ರವೇಶಕ್ಕೆ ಮತ್ತು ಸಾಕುಪ್ರಾಣಿಗಳನ್ನು ಮೇಯಿಸಲು ಅವಕಾಶ ಇರುವುದಿಲ್ಲ. ಆದರೆ ರಾಜ್ಯದ ಕೆಲವು ಅರಣ್ಯ ಭಾಗದಲ್ಲಿ ಹಲವು ವರ್ಷದಿಂದ ಇಂತಹ ರೂಢಿ ಇದ್ದು, ಕಾಡಿನಂಚಿನ ಜನರಿಗೆ ಜಾಗೃತಿ ಮೂಡಿಸಿ, ಅವರಿಗೆ ಹೆಚ್ಚು ಹಾಲು ನೀಡುವ ಹಸುಗಳನ್ನು ಹೊಂದಲು ಅವಕಾಶ ಕಲ್ಪಿಸುವ ಮೂಲಕ ಮತ್ತು ತಮ್ಮ ಪಟ್ಟಾ ಜಮೀನಿನಲ್ಲಿ ಹಸಿ ಮೇವು ಬೆಳೆಸಲು ಪ್ರೋತ್ಸಾಹಿಸುವ ಮೂಲಕ ಹಂತ ಹಂತವಾಗಿ ಅರಣ್ಯದಲ್ಲಿ ಜಾನುವಾರುಗಳನ್ನು ಬಿಡದಂತೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಸುಮಾರು 33 ಸಾವಿರ ದನಕರುಗಳಿವೆ ಎಂದು ಪಶುಸಂಗೋಪನಾ ಇಲಾಖೆ ಅಂಕಿ ಅಂಶ ತಿಳಿಸುತ್ತದೆ. ಇಷ್ಟೊಂದು ದನಕರುಗಳನ್ನು ಒಟ್ಟಿಗೆ ಕಾಡಿಗೆ ತೆಗೆದುಕೊಂಡು ಹೋಗುವುದರಿಂದ ವನ್ಯಜೀವಿಗಳಾದ ಆನೆ, ಕಾಡೆಮ್ಮೆ, ಕಾಡುಕೋಣ, ಜಿಂಕೆ, ಕಡವೆ ಇತ್ಯಾದಿಗಳಿಗೆ ಮೇವಿನ ಕೊರತೆ, ನೀರಿನ ಕೊರತೆ ಎದುರಾಗುತ್ತಿದೆ. ಕಾಲುಬಾಯಿ ರೋಗ, ಚರ್ಮಗಂಟು ಅಥವಾ ಬಾವು (ಲಿಂಪಿ ಸ್ಕಿನ್), ನೆರಡಿ (ಆಂಥರಾಕ್ಸ್) ಮೊದಲಾದ ಸಾಂಕ್ರಾಮಿಕ ಕಾಯಿಲೆಗಳು ವನ್ಯಜೀವಿಗಳಿಗೂ ಹಬ್ಬುವ ಅಪಾಯ ಇರುತ್ತದೆ. ಈ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಜಾನುವಾರುಗಳನ್ನು ಕಾಡಿನಲ್ಲಿ ಮೇಯಿಸುವುದನ್ನು ನಿಷೇಧಿಸಲು ಸೂಚಿಸಲಾಗಿದೆ. ಆದರೆ ಸ್ಥಳೀಯರ ದನಕರುಗಳಿಗೆ ಮತ್ತು ಅರಣ್ಯಹಕ್ಕು ಕಾಯ್ದೆಯಡಿ ಹಕ್ಕು ಪಡೆದವರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಈಗಾಗಲೇ ಅರಣ್ಯ ಇಲಾಖೆ, ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿಯನ್ನು ಬಳಸಿಕೊಂಡು 10-15 ರೈತರಿಗೆ ಹೆಚ್ಚು ಹಾಲು ನೀಡುವ ಹೈಬ್ರೀಡ್ ಹಸುಗಳನ್ನು ಕೊಡಿಸಿದ್ದಾರೆ. ಪ್ರಸ್ತುತ ಕಾಡಿನಲ್ಲಿ ದನ ಮೇಯಿಸುವ ಕಾಯಕವನ್ನೇ ಜೀವನೋಪಾಯ ಮಾಡಿಕೊಂಡಿರುವವರಿಗೆ ಇಂತಹ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಹಂತ ಹಂತವಾಗಿ ಕಾಡಿನಲ್ಲಿ ದನ, ಕರು, ಎಮ್ಮೆ, ಮೇಕೆ, ಕುರಿಗಳನ್ನು ಮೇಯಿಸದಂತೆ ಮನವೊಲಿಸಲಾಗುವುದು ಎಂದೂ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Forest Department: ಇನ್ನುಮುಂದೆ ರಾಜ್ಯದ ಅರಣ್ಯಗಳಲ್ಲಿ ಜಾನುವಾರು ಮೇಯಿಸುವುದಕ್ಕೆ ನಿಷೇಧ!

ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಸಂಬಂಧ ಸುದೀರ್ಘ ವಾದ ಪ್ರತಿವಾದ ನಡೆದು, ಅಂತಿಮವಾಗಿ ತಮಿಳುನಾಡಿನ ಅರಣ್ಯಗಳಲ್ಲಿ ಜಾನುವಾರು ಮೇಯಿಸಲು ಅವಕಾಶ ಇರುವುದಿಲ್ಲ ಎಂಬ ತೀರ್ಪು ಬಂದಿದೆ. ಆ ತೀರ್ಪಿನ ಬಳಿಕ ರಾಜ್ಯಕ್ಕೆ ನೆರೆ ರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಜಾನುವಾರು ತಂದು ರಾಜ್ಯದ ಕಾಡಿನಲ್ಲಿ ಮೇಯಿಸಲಾಗುತ್ತಿದೆ. ತಿಂಗಳುಗಟ್ಟಲೆ ಹೀಗೆ ಕಾಡಿನಲ್ಲಿ ದನಕರು ಮೇಯಿಸುವುದರಿಂದ ಕಾಡಿನ ಹುಲ್ಲುಗಾವಲು ಬರಿದಾಗುತ್ತಿದೆ, ಸಸ್ಯಸಂವರ್ಧನೆಗೂ ಅಡ್ಡಿಯಾಗುತ್ತದೆ. ಜತೆಗೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ಇದು ವನ್ಯಜೀವಿಗಳಿಗೆ ವಿಷ ಹಾಕುವ ಹಂತ ತಲುಪಿದ್ದ ಹಿನ್ನೆಲೆಯಲ್ಲಿ ಕಾನೂನು ರೀತ್ಯ ಮತ್ತು ನಿಯಮಾನುಸಾರ ಕ್ರಮ ವಹಿಸಲು ಸೂಚಿಸಲಾಗಿತ್ತು ಎಂದೂ ತಿಳಿಸಿದ್ದಾರೆ.