Covid-19 Test: ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲು ಆರೋಗ್ಯ ಇಲಾಖೆ ಸೂಚನೆ
Covid-19 Test: ಕೋವಿಡ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಈಗಾಗಲೇ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿನಲ್ಲಿ ನೆನ್ನೆ ಸೋಂಕಿನಿಂದ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಮತ್ತೆ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.


ಬೆಂಗಳೂರು: ರಾಜ್ಯದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಕೋವಿಡ್ -19 ತಪಾಸಣಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಪರೀಕ್ಷಾ ಮಾದರಿಗಳನ್ನು ನಿಗದಿಪಡಿಸಿದ ಪ್ರಯೋಗಶಾಲೆಗಳಿಗೆ ಪರೀಕ್ಷೆಗಾಗಿ ಸಲ್ಲಿಸುವ ಕುರಿತು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.
RT-PCR ಮತ್ತು RAT ಕೋವಿಡ್-19 ರ ಪರೀಕ್ಷೆ ನಡೆಸಲು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ದಿನ ನಿತ್ಯ 150 ರಿಂದ 200 ಪರೀಕ್ಷೆಗೆ ನಿಗದಿಪಡಿಸಲಾಗಿದ್ದು, ಎಲ್ಲಾ SARI ಪ್ರಕರಣಗಳಿಗೆ ಕೋವಿಡ್ ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸುವುದು. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸುವುದು ಹಾಗೂ ಲಭ್ಯವಿರುವ ಕೋವಿಡ್-19ರ ಪರೀಕ್ಷಾ ಕಿಟ್‌ಗಳನ್ನು FIFO (First In First Out) ಮಾದರಿಯಲ್ಲಿ ಉಪಯೋಗಿಸಿ ಕೋವಿಡ್-19 ರ ಕಿಟ್ / ಪರಿಕರಗಳು ಅನುಪಯುಕ್ತವಾಗದಂತೆ ಕೋವಿಡ್-19ರ ಪರೀಕ್ಷೆಯನ್ನು ಈ ಕೆಳಕಂಡಂತೆ ಕ್ರಮವಹಿಸುವುದು.
- ಎಲ್ಲಾ SARI ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.
- ವಯೋವೃದ್ಧರಲ್ಲಿ ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.
- ಅನುಬಂಧ-1ರಂತೆ ಕೋವಿಡ್-19ರ ಪರೀಕ್ಷಾ ಮಾದರಿಯನ್ನು ಪ್ರಯೋಗಶಾಲೆಗಳಿಗೆ ಅದೇ ದಿನ ತಲುಪುವಂತೆ ಕ್ರಮವಹಿಸುವುದು.
ಮತ್ತೆ ಇಬ್ಬರಿಗೆ ಸೋಂಕು ದೃಢ, 40 ಕ್ಕೇರಿದ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕರೋನಾ ಆತಂಕ (Corona Virus) ಹೆಚ್ಚುತ್ತಿದ್ದು, ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಕೊಂಚ ಏರಿಕೆಯಾಗಿದೆ. ಭಾನುವಾರದಿಂದಲೇ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೊರೋನ ಟೆಸ್ಟ್ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಕಟ್ಟು ನಿಟ್ಟಿನ ಕ್ರಮವನ್ನು ಜಾರಿಗೊಳಿಸಿದೆ. ಬೆಂಗಳೂರಿನಲ್ಲಿ ನಿನ್ನೆ ಸೋಂಕಿಗೆ ವೃದ್ಧರೊಬ್ಬರು ಸಾವನ್ನಪ್ಪಿದ್ದರು. ಇದೀಗ ಬೆಂಗಳೂರಿನಲ್ಲಿ ಮತ್ತೆ ಎರಡು ಕರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮಲ್ಲೇಶ್ವರಂನಲ್ಲಿ 45 ವರ್ಷದ ಮತ್ತು ರಾಜಾಜಿನಗರದಲ್ಲಿ 38 ವರ್ಷದ ವ್ಯಕ್ತಿಗೆ ಕೊವಿಡ್ ಪಾಸಿಟಿವ್ ಬಂದಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಕೊವಿಡ್ ಪಾಸಿಟಿವ್ ಬಂದಿದ್ದು, ಸದ್ಯ ಕೊವಿಡ್ ಸೋಂಕಿತರು ಹೋಮ್ ಐಸೋಲೇಷನ್ನಲ್ಲಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಬಂದಿದ್ದು, ಇದೀಗ ಸೋಂಕಿತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪಕ್ಕದ ಕೇರಳ ಹಾಗೂ ಆಂಧ್ರಪ್ರದೇಶದಲ್ಲಿ ಗಣನೀಯವಾಗಿ ಕೊರೋನಾ ಕೇಸ್ ಏರಿಕೆ ಕಂಡಿದೆ. ಆಂಧ್ರದಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ರಾಜ್ಯದಲ್ಲಿ ಯಾವುದೇ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ. ಯಾವುದೇ ಆತಂಕ ಬೇಡ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಸರ್ಕಾರ ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಜನನಿಬಿಡ ಪ್ರದೇಶದಲ್ಲಿ ಓಡಾಡುವಾಗ ಮಾಸ್ಕ್ ಧರಿಸಿ ಎಂದು ಸೂಚನೆ ನೀಡಿದೆ.
ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಕರೋನಾದ ರೂಪಾಂತರಿ ಒಮಿಕ್ರಾನ್ ಜೆಎನ್1 ಉಪ ತಳಿಗಳಾದ ಎನ್‌ಬಿ.1.8 ಮತ್ತು ಎಲ್‌ಎಫ್.7 ಕೇಸ್‌ಗಳು ಹೆಚ್ಚುತ್ತಿರುವ ಬಗ್ಗೆ ವರದಿಯಾಗಿದೆ. ಮತ್ತೊಂದೆಡೆ ನೆರೆ ರಾಜ್ಯ ಕೇರಳದಲ್ಲಿ ಮೇ ತಿಂಗಳಲ್ಲಿ 182 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಕೇರಳ ಸರಕಾರವು ಕೊಟ್ಟಾಯಂ, ಎರ್ನಾಕುಲಂ ಮತ್ತು ತಿರುವನಂತಪುರ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಈ ಸುದ್ದಿಯನ್ನೂ ಓದಿ: Corona Virus: ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ; ಬೆಡ್, ಆಕ್ಸಿಜನ್ ರೆಡಿ ಇಡಲು ಸರ್ಕಾರ ಸೂಚನೆ
ಕರೋನಾ ಸೋಂಕಿನ ಜತೆಗೆ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದೆ. ಪೂರ್ವ ಮುಂಗಾರು ಮಳೆಯ ಆರ್ಭಟದ ನಡುವೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದೆ. ಜತೆಗೆ ಸಾಮಾನ್ಯ ಜ್ವರ, ವೈರಲ್ ಸೋಂಕು, ನೆಗಡಿ, ಸುಸ್ತು, ತಲೆನೋವು ಪ್ರಕರಣಗಳೂ ಹೆಚ್ಚಳವಾಗುತ್ತಿದೆ.