ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ ಬ್ರೇಕ್; ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ
ಹೆಸರು ಉಲ್ಲೇಖಿಸದೇ ಆರ್‌ಎಸ್ಎಸ್ ಚಟುವಟಿಕೆಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಗುರುವಾರ (ಅ. 16) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ಹಿಂದೆ ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಆಗ್ರಹಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸಾಂದರ್ಭಿಕ ಚಿತ್ರ -

ಬೆಂಗಳೂರು, ಅ. 16: ಹೆಸರು ಉಲ್ಲೇಖಿಸದೇ ಆರ್‌ಎಸ್ಎಸ್ (RSS) ಚಟುವಟಿಕೆಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಗುರುವಾರ (ಅ. 16) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದೆ. ಇನ್ನುಮುಂದೆ ಸರ್ಕಾರಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಸರ್ಕಾರಿ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸುವಂತೆ ಆಗ್ರಹಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
2013ರ ಆದೇಶವನ್ನೇ ಆಧಾರವಾಗಿಟ್ಟುಕೊಂಡು ಸರ್ಕಾರ ಈ ನಿಯಮ ಜಾರಿಗೆ ತರಲು ಮುಂದಾಗಿದೆ. ಅದರಂತೆ ಇನ್ನುಮುಂದೆ ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯವಾಗಲಿದೆ. ಅನುಮತಿ ಪಡೆಯದೆ ಕಾರ್ಯಕ್ರಮ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
ಈ ಸುದ್ದಿಯನ್ನೂ ಓದಿ: CM Siddaramaiah: ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ; ರಕ್ಷಣೆ ಒದಗಿಸಲಾಗುವುದು ಎಂದ ಸಿಎಂ
ಹೊಸ ವಿಧೇಯಕದಲ್ಲಿ ಏನಿದೆ?
ಯಾವುದೇ ಧಾರ್ಮಿಕ, ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯುವುದು ಕಡ್ಡಾಯ. ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗೆ ಅನುಮತಿ ನೀಡುವ ಅಧಿಕಾರ ನೀಡಲಾಗುತ್ತದೆ. ನಿಯಮ ಮೀರಿ ಚಟುವಟಿಕೆ ನಡೆಸಿದರೆ 2 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. 2 ನೇ ಬಾರಿ ನಿಯಮ ಮೀರಿದರೆ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.ಇದಕ್ಕೂ ಮೀರಿ ಮುಂದುವರಿದರೆ ಪ್ರತೀ ದಿನ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ವಿಧೇಯಕದಲ್ಲಿ ಸೂಚಿಸಲಾಗಿದೆ. ಈ ನಿರ್ಧಾರವು ಆರ್‌ಎಸ್‌ಎಸ್‌ಗೆ ಪರೋಕ್ಷವಾಗಿ ನಿರ್ಬಂಧ ಹೇರಿದಂತಾಗಿದೆ.
ಎಲ್ಲ ಧರ್ಮ ಸಂಘಟನೆಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಬಿಜೆಪಿಯನ್ನಾಗಲೀ, ಆರ್‌ಎಸ್‌ಎಸ್‌ನನ್ನಾಗಲೀ ನಿರ್ಬಂಧಿಸುತ್ತಿಲ್ಲ ಎಂದು ಹೇಳಿದೆ.
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ʼʼಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನ ಮಾಡಲು ಅನುಮತಿ ಪಡೆಯಬೇಕು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಯಾವುದೇ ಸಂಘಟನೆಗಳು, ಧರ್ಮದವರು ಅನುಮತಿ ಪಡೆಯಲೇಬೇಕು. ಈ ಸಂಬಂಧ ಸಂಬಂಧ ಹೊಸ ನಿಯಮಗಳನ್ನು ಕಾನೂನಾತ್ಮಕವಾಗಿ ಜಾರಿ ತರಲಾಗುವುದು. ಕಾನೂನು ಎಲ್ಲರಿಗೂ ಒಂದೇ. ಕಾರ್ಯಕ್ರಮಕ್ಕೆ ಅನುಮತಿ ಪಡೆದರೆ ಯಾವುದೇ ತೊಂದರೆಯಾಗುವುದಿಲ್ಲʼʼ ಎಂದರು.
2013ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ ಆದೇಶವನ್ನೇ ಈಗಿನ ಸರ್ಕಾರ ಬಳಸಿಕೊಂಡಿದೆ. ಅಂದಿನ ಸರ್ಕಾರವು ಸರ್ಕಾರಿ ಆಸ್ತಿಗಳ ಬಳಕೆಗೆ ಕೆಲವು ಮಾರ್ಗಸೂಚಿಗಳನ್ನು ರೂಪಿಸಿತ್ತು. ಈಗ ಕಾಂಗ್ರೆಸ್ ಸರ್ಕಾರ ಆ ಆದೇಶವನ್ನು ಆಧರಿಸಿ, ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈ ಕ್ರಮವು ಸರ್ಕಾರಿ ಆವರಣದಲ್ಲಿ ರಾಜಕೀಯ ಅಥವಾ ಸಂಘಟನೆಯ ಚಟುವಟಿಕೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.