Karnataka Assembly Session: 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ, ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ
DK Shivakumar: 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ಹಿಂದೆ ಕಂಠೀರವ ಸ್ಟೇಡಿಯಂ, ಕೆಂಪೇಗೌಡ ಬಸ್ ನಿಲ್ದಾಣವನ್ನು ಕೆರೆಗಳ ಮೇಲೆ ನಿರ್ಮಾಣ ಮಾಡಲಾಯಿತು. ಅದು ಆಗಿನ ಕಾಲ, ಈಗ ಯಾವುದೇ ಕಾರಣಕ್ಕೆ ಕೆರೆಗಳನ್ನು ಒತ್ತುವರಿ ಮಾಡುವುದಿಲ್ಲ. ನಾವು ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಈ ತಿದ್ದುಪಡಿಗೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.


ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ (Karnataka Assembly Session) ಅಂಗೀಕರಿಸಲಾಯಿತು. ವಿಧಾನಸಭೆ ಕಲಾಪದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರು ಈ ವಿಧೇಯಕವನ್ನು ಮಂಡಿಸಿದರು. ಈ ತಿದ್ದುಪಡಿ ವಿಧೇಯಕ ಕುರಿತು ಆಡಳಿತ ಹಾಗೂ ವಿರೋಧ ಪಕ್ಷದ ಶಾಸಕರು ವಿಸ್ಕೃತ ಚರ್ಚೆ ನಡೆಸಿದರು.
ಈ ತಿದ್ದುಪಡಿ ಬೆಂಗಳೂರಿಗೆ ಮಾರಕವಾಗಿದೆ ಎಂದ ವಿರೋಧ ಪಕ್ಷದ ಶಾಸಕ ಎಸ್.ಸುರೇಶ್ ಕುಮಾರ್ ಅವರು, ‘ಈ ತಿದ್ದುಪಡಿಯನ್ನು ಸದನ ಸಮಿತಿ ರಚನೆ ಮಾಡಿ ಅದರ ಅವಗಾಹನೆಗೆ ನೀಡಬೇಕು. ಸರ್ಕಾರ ಈ ಮನವಿಯನ್ನು ಪುರಸ್ಕರಿಸುತ್ತಿಲ್ಲ’ ಎಂದು ಸಭಾತ್ಯಾಗ ಮಾಡುವುದಾಗಿ ತಿಳಿಸಿದರು. ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ಈ ವಿಧೇಯಕಕ್ಕೆ ಮಂಗಳವಾರ ಅನುಮೋದನೆ ನೀಡಲಾಯಿತು.
ವಿಧೇಯಕದ ಮೇಲೆ ನಡೆದ ಚರ್ಚೆ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
‘ಕೆರೆಗಳ ಬಫರ್ ಜೋನ್ ವಿಚಾರವಾಗಿ ತಿದ್ದುಪಡಿ ತನ್ನಿ ಎಂದು ಯಾವುದೇ ಬಿಲ್ಡರ್‌ಗಳು ಬಂದು ಸರ್ಕಾರದ ಬಳಿ ಮನವಿ ಮಾಡಿಲ್ಲ. ಈ ಹಿಂದೆ ಕಂಠೀರವ ಸ್ಟೇಡಿಯಂ, ಕೆಂಪೇಗೌಡ ಬಸ್ ನಿಲ್ದಾಣವನ್ನು ಕೆರೆಗಳ ಮೇಲೆ ನಿರ್ಮಾಣ ಮಾಡಲಾಯಿತು. ಅದು ಆಗಿನ ಕಾಲ ಈಗ ಯಾವುದೇ ಕಾರಣಕ್ಕೆ ಕೆರೆಗಳನ್ನು ಒತ್ತುವರಿ ಮಾಡುವುದಿಲ್ಲ. ನಾವು ಕೆರೆಗಳ ಸಂರಕ್ಷಣೆ ಮಾಡಬೇಕು ಎಂದು ಈ ತಿದ್ದುಪಡಿಗೆ ಮುಂದಾಗಿದ್ದೇವೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
‘ನಮಗೆ ಎನ್‌ಜಿಟಿಯ ತೀರ್ಪುಗಳ ಬಗ್ಗೆಯೂ ಅರಿವಿದೆ. ನಾವು ಸುಪ್ರೀಂ ಕೋರ್ಟಿನ ತೀರ್ಪುಗಳ ವಿರುದ್ಧ ಹೋಗುತ್ತಿಲ್ಲ. ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕೆರೆ ವಿಸ್ತೀರ್ಣ 10 ಎಕರೆಗಿಂತ ಹೆಚ್ಚಿದ್ದರೆ 30 ಮೀ. 10 ಎಕರೆಗಿಂತ ಕಡಿಮೆಯಿದ್ದರೆ 9 ಮೀ. ಬಫರ್ ಜೋನ್ ಎಂದು ಕಾನೂನು ಮಾಡಿಕೊಂಡಿದ್ದಾರೆ. ಅದೇ ರೀತಿ ಅಸ್ಸಾಂನಲ್ಲಿ 15 ಮೀ., ಮಧ್ಯಪ್ರದೇಶದಲ್ಲಿ 30 ಮೀ., ಇದೆ, ಛತ್ತೀಸ್‌ಗಡದಲ್ಲಿ 100 ಮೀ, ಬಿಹಾರದಲ್ಲಿ 100 ಹಾಗೂ 200 ಮೀ., ಇದ್ದರೆ ತಮಿಳುನಾಡಿನಲ್ಲಿ ಕೇವಲ 3 ಮೀ. ಅಂದರೆ 10 ಅಡಿ ಬಫರ್ ಜೋನ್ ಬಿಡಬೇಕು ಎಂದು ಕಾನೂನು ಮಾಡಿಕೊಂಡಿವೆ’ ಎಂದರು.
‘ಬೆಂಗಳೂರಿನ ರಾಜಕಾಲುವೆಗಳ ಬಫರ್ ಜೋನ್‌ಗಳಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕೆಲಸಗಳು ಆಗುತ್ತವೆ ಎನ್ನುವ ಮುನ್ನೆಚರಿಕೆ ವಹಿಸಿಕೊಂಡು ಸುಮಾರು 300 ಕಿಮೀ ಉದ್ದಕ್ಕೆ ರಾಜಕಾಲುವೆ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಡಿಯಿಟ್ಟಿದ್ದೇವೆ. ಒಂದೊಂದು ಬದಿಯಲ್ಲೂ 50 ಮೀ. ನಂತೆ ಎರಡು ಬದಿ ಕಡ್ಡಾಯವಾಗಿ ರಸ್ತೆ ನಿರ್ಮಾಣ ಮಾಡಲೇಬೇಕು ಎಂದು ಹೊರಟಿದ್ದೇವೆ. ಇದಕ್ಕಾಗಿ 3 ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಿದ್ದೇವೆ. ರಾಜಕಾಲುವೆಗಳಿಗೆ ಕಸ ಸುರಿಯುವುದು ಸಹ ಹೆಚ್ಚಾಗಿದೆ. ಬೈರತಿ ಬಸವರಾಜು, ಕೃಷ್ಣ ಬೈರೇಗೌಡರು, ಯಲಹಂಕ ಕ್ಷೇತ್ರಗಳಲ್ಲಿ ಇದೇ ದೊಡ್ಡಸಮಸ್ಯೆಯಾಗಿ ಪರಿಣಮಿಸಿದೆ’ ಎಂದು ಹೇಳಿದರು.
ಅಕ್ರಮ ನಿರ್ಮಾಣ ಮಾಡಿ ತೆರಿಗೆ ಕಟ್ಟುತ್ತಿಲ್ಲ
‘ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಇರುವ ಜಲಾನಯನ ಪ್ರದೇಶ ವ್ಯಾಪ್ತಿಯ 100 ಮೀ, ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನೇಕರು ಶೆಡ್‌ಗಳನ್ನು ನಿರ್ಮಾಣ ಮಾಡಿದ್ದಾರೆ. ಯಾರೂ ಸಹ ತೆರಿಗೆ ಕಟ್ಟುತ್ತಿಲ್ಲ. ನೆಲಮಂಗಲದಲ್ಲಿಯೂ ಇದೇ ಪರಿಸ್ಥಿತಿಯಿದೆ’ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Karnataka Assembly Session: 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ
ಸಿಆರ್‌ಜೆಡ್‌ನಿಂದಲೂ ಕರಾವಳಿಯಲ್ಲಿ ತೊಂದರೆ
ನಾವೆಲ್ಲರೂ ಕಳಕಳಿಯಿಂದ ಕೆಲಸ ಮಾಡುತ್ತಿದ್ದೇವೆ. ಕರಾವಳಿಯ ಜನರ ಬಗ್ಗೆ ನಮಗೆ ಕಾಳಜಿಯಿದೆ ಏಕೆಂದರೆ ಕೆರೆ ಬಫರ್ ವಲಯದ ಕಾರಣಕ್ಕೆ ಅವರ ಬದುಕಿಗೆ ಕಷ್ಟವಾಗುತ್ತದೆ, ಮನೆಗಳನ್ನು ಕಟ್ಟಿಕೊಳ್ಳಲು ಆಗುವುದೇ ಇಲ್ಲ. ಕೇರಳ, ಗೋವಾದವರು ಎನ್‌ಜಿಟಿ, ಕೇಂದ್ರ ಸರ್ಕಾರ ಹೀಗೆ ಎಲ್ಲರಿಂದಲೂ ಅನುಮತಿ ಪಡೆದಿದ್ದಾರೆ. ಆದರೆ ನಾವು ಒದ್ದಾಡುತ್ತಿದ್ದೇವೆ. ಸಿಆರ್‌ಜೆಡ್ ನಿಂದಲೂ ಕರಾವಳಿಯವರು ತೊಂದರೆಗೆ ಒಳಗಾಗುತ್ತಿದ್ದಾರೆ. ಇದನ್ನು ಮೀರಿ ಕೆಲಸ ಮಾಡುವುದು ಹೇಗೆ ಎನ್ನುವುದರ ಬಗ್ಗೆ ನಾನು ಆಲೋಚಿಸಿದ್ದೇನೆ. ಮೊದಲು ಇದರ ಬಗ್ಗೆ ಪ್ರಾಥಮಿಕ ಸಭೆ ನಡೆಸಿದ ಮೇಲೆ ಮಂಗಳೂರಿಗೆ ತೆರಳಿ ಉಡುಪಿ ಸೇರಿದಂತೆ ಕರಾವಳಿ ಭಾಗದ ಎಲ್ಲರನ್ನು ಕರೆಸಿ ಚರ್ಚೆ ನಡೆಸೋಣ. ಏಕೆಂದರೆ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಜನರು ಮುಂಬೈ, ಗೋವಾಗಳಿಗೆ ತೆರಳುವುದು ತಪ್ಪಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.