Monsoon Session: ಬಂಧಿತ ಪ್ರಧಾನಿ, ಮುಖ್ಯಮಂತ್ರಿಯನ್ನು ವಜಾಗೊಳಿಸುವ ಮಸೂದೆ; ಪ್ರತಿ ಹರಿದು ಅಮಿತ್ ಶಾ ಮೇಲೆ ಎಸೆದ ಪ್ರತಿಪಕ್ಷ ಸದಸ್ಯರು
Amit Shah: ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಸತತ 30 ದಿನ ಬಂಧನಕ್ಕೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಸೇರಿ ಜನಪ್ರತಿನಿಧಿಗಳನ್ನು ಅಧಿಕಾರದಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಜಂಟಿ ಸಮಿತಿಗೆ ಕಳುಹಿಸುವ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾವಕ್ಕೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮಸೂದೆ ಪ್ರತಿಯ ಚೂರುಗಳನ್ನು ಪ್ರತಿಪಕ್ಷ ನಾಯಕರು ಅಮಿತ್ ಶಾ ಅವರತ್ತ ತೂರಿದರು.


ದೆಹಲಿ: ಕನಿಷ್ಠ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ, ಸತತ 30 ದಿನ ಬಂಧನಕ್ಕೊಳಗಾಗುವ ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಸೇರಿ ಜನಪ್ರತಿನಿಧಿಗಳನ್ನು ಅಧಿಕಾರದಿಂದ ವಜಾಗೊಳಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಜಂಟಿ ಸಮಿತಿಗೆ ಕಳುಹಿಸುವ ಕೇಂದ್ರದ ಪ್ರಸ್ತಾವಕ್ಕೆ ಲೋಕಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು (Monsoon Session). ಗೃಹ ಸಚಿವ ಅಮಿತ್ ಶಾ (Amit Shah) ಬುಧವಾರ (ಆಗಸ್ಟ್ 20) ಲೋಕಸಭೆಯಲ್ಲಿ ಪ್ರಸ್ತಾವವನ್ನು ಮಂಡಿಸಿದ್ದು, ಪ್ರತಿಪಕ್ಷದ ಸದಸ್ಯರು ಮಸೂದೆಯ ಪ್ರತಿಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮಸೂದೆ ಪ್ರತಿಯ ಚೂರುಗಳನ್ನು ಅಮಿತ್ ಶಾ ಅವರತ್ತ ತೂರಿದರು. ಸದನ ಪ್ರಸ್ತಾವನೆಯನ್ನು ಅಂಗೀಕರಿಸಿದ್ದು, ಗದ್ದಲದ ನಡುವೆ ಕಪಾಪವನ್ನು ಮುಂದೂಡಲಾಯಿತು.
ಮಸೂದೆಗಳನ್ನು ತರಾತುರಿಯಲ್ಲಿ ತರಲಾಗಿದೆ ಎಂಬ ಟೀಕೆಗಳನ್ನು ಅಮಿತ್ ಶಾ ತಿರಸ್ಕರಿಸಿದರೂ, ಪ್ರತಿಪಕ್ಷಗಳು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದವು. ಮಸೂದೆಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗುವುದು ಎಂದು ಅವರು ಭರವಸೆ ನೀಡಿದರೂ ಗದ್ದಲ ಎಬ್ಬಿಸಿದರು. ಪ್ರಸ್ತಾವವನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಿದರೆ ಪ್ರತಿಪಕ್ಷಗಳು ಸೇರಿದಂತೆ ಎರಡೂ ಸದನಗಳ ಸದಸ್ಯರು ತಮ್ಮ ಸಲಹೆಗಳನ್ನು ನೀಡುವ ಅವಕಾಶ ಹೊಂದುತ್ತಾರೆ.
Opposition MPs tore up a copy of the bill and threw it in front of Amit Shah.
— Mr Sinha (@MrSinha_) August 20, 2025
They're opposing a bill which prohibits criminals from holding positions in the govt...??? Wow!!!
pic.twitter.com/ox3wfjvrWH
ಈ ಸುದ್ದಿಯನ್ನೂ ಓದಿ: CP Radhakrishnan: ಉಪರಾಷ್ಟ್ರಪತಿ ಹುದ್ದೆಗೆ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ, ಸಚಿವ ಪ್ರಲ್ಹಾದ ಜೋಶಿ ಸಾಥ್
ಪ್ರತಿಪಕ್ಷದ ಸಂಸದರಾದ ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ಕಾಂಗ್ರೆಸ್‌ನ ಮನೀಶ್ ತಿವಾರಿ ಮತ್ತು ಕೆ.ಸಿ. ವೇಣುಗೋಪಾಲ್ ಮತ್ತಿತರು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಸಂವಿಧಾನ ಮತ್ತು ಒಕ್ಕೂಟವಾದಕ್ಕೆ ವಿರುದ್ಧ ಎಂದು ಕರೆದ್ದಾರೆ. ಮಸೂದೆಗಳನ್ನು 31 ಸದಸ್ಯರ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಶಾ ಭರವಸೆ ನೀಡಿದರೂ ಪ್ರತಿಪಕ್ಷಗಳು ಸಮಾಧಾನಗೊಂಡಿಲ್ಲ.
ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ 2025, ಸಂವಿಧಾನ (130ನೇ ತಿದ್ದುಪಡಿ) ಮಸೂದೆ 2025 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2025 ಇದಾಗಿದ್ದು, ಯಾವುದೇ ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯಗಳ ಸಚಿವರನ್ನು ತನಿಖಾ ಸಂಸ್ಥೆಗಳು ವಶಕ್ಕೆ ಪಡೆದರೆ ಅಥವಾ ಬಂಧಿಸಿದರೆ, 30 ದಿನಗಳ ಒಳಗೆ ಅವರನ್ನು ಹುದ್ದೆಯಿಂದ ತೆಗೆದು ಹಾಕುವ ಅಧಿಕಾರವನ್ನು ಒಳಗೊಂಡಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ತಮಿಳುನಾಡು ಸಚಿವ ವಿ. ಸೆಂಥಿಲ್ ಬಾಲಾಜಿ ಅವರಂತಹ ನಾಯಕರು ಜೈಲಿನಲ್ಲಿದ್ದರೂ ಅಧಿಕಾರದಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಕಾನೂನು ಜಾರಿಗೊಳಿಸಲು ಮುಂದಾಗಿದೆ.
ಪ್ರತಿಪಕ್ಷಗಳ ಆತಂಕವೇನು?
ಪ್ರತಿಪಕ್ಷಗಳು ಈ ಮಸೂದೆಗಳನ್ನು ಕಠಿಣ ಎಂದು ಬಣ್ಣಿಸಿವೆ. ಕಾಂಗ್ರೆಸ್ ನಾಯಕಿ ಮತ್ತು ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಮಾತನಾಡಿ, "ಇದನ್ನು ಭ್ರಷ್ಟಾಚಾರ ವಿರೋಧಿ ಕ್ರಮ ಎಂದು ಹೇಳುವುದರಿಂದ ಜನರಿಗೆ ಮೋಸ ಎಸಗಿದಂತಾಗುತ್ತದೆ. ಇದು ಜಾರಿಗೆ ಬಂದರೆ ನೀವು ಮುಖ್ಯಮಂತ್ರಿಯ ಮೇಲೆ ಯಾವುದೇ ರೀತಿಯ ಪ್ರಕರಣವನ್ನು ದಾಖಲಿಸಬಹುದು. ಅವರನ್ನು 30 ದಿನಗಳವರೆಗೆ ಬಂಧಿಸಬಹುದು ಮತ್ತು ಇದರಿಂದ ಅವರು ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ. ಇದು ಸಂಪೂರ್ಣವಾಗಿ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ" ಎಂದು ಖಂಡಿಸಿದ್ದಾರೆ.