ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಐತಿಹಾಸಿಕ ತೀರ್ಮಾನ: ನದಿ ಜೋಡಣೆ ಯೋಜನೆಗೆ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳ ಒಪ್ಪಿಗೆ

CM DK Shivakumar: ನವದೆಹಲಿಯಲ್ಲಿ ಸೋಮವಾರ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ಸಂಸದರ ಸಹಕಾರ ಬಹುಮುಖ್ಯ ಎಂದು ತಿಳಿಸಿದ್ದಾರೆ.

ಪಕ್ಷ ರಾಜಕಾರಣ ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡೋಣ: ಡಿಕೆಶಿ

ನವದೆಹಲಿಯಲ್ಲಿ ಸಂಸದರ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿದರು. -

Profile
Siddalinga Swamy Jul 27, 2026 10:31 PM

ನವದೆಹಲಿ, ಜು. 27: ರಾಜ್ಯದ ಹಿತಕ್ಕಾಗಿ ಹಾಗೂ ಜನರ ಕಲ್ಯಾಣಕ್ಕೆ ಪಕ್ಷ ರಾಜಕಾರಣವನ್ನು ಬದಿಗಿಟ್ಟು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ರಾಜ್ಯದ ಸಂಸದರಿಗೆ ಕರೆ ನೀಡಿದ್ದಾರೆ. ನವದೆಹಲಿಯಲ್ಲಿ ಸೋಮವಾರ ನಡೆದ ರಾಜ್ಯದ ಸಂಸದರ ಸಭೆಯಲ್ಲಿ ಅವರು ಪ್ರಾಸ್ತವಿಕ ಭಾಷಣ ಮಾಡಿ, ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ಸಂಸದರ ಸಹಕಾರ ಬಹುಮುಖ್ಯ ಎಂದು ತಿಳಿಸಿದರು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾಗ ಅವರು ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಕರ್ನಾಟಕದಲ್ಲಿ ಆಲಮಟ್ಟಿ, ಹಾರಂಗಿ ಜಲಾಶಯ ಬಿಟ್ಟು ಉಳಿದ ಅಣೆಕಟ್ಟೆಗಳು ಬಹುತೇಕ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ, ಜಾನುವಾರಿಗೆ ಕುಡಿಯುವ ನೀರಿಗೂ ಸಮಸ್ಯೆ ಆಗುವ ಲಕ್ಷಣಗಳು ಇವೆ. ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ಅಗತ್ಯ ನೆರವು ಕೋರಿದ್ದೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ನೋಡಿ ಬೆಳೆ ಬೆಳೆಯುವಂತೆ ರೈತರಿಗೆ ಮನವಿ ಮಾಡಿದ್ದೇನೆ ಹಾಗೂ ಈ ಕುರಿತು ರೈತರಿಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡಿರುವುದಾಗಿ ಹೇಳಿದರು.

ಕೇಂದ್ರ ಜಲಶಕ್ತಿ ಸಚಿವ ಸಿ.ಎಸ್. ಪಾಟೀಲ್ ಅವರ ಸಮ್ಮುಖದಲ್ಲಿ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಸಭೆ ನಡೆಸಲಾಗಿದ್ದು, 30 ಟಿಎಂಸಿ ನೀರು ಉಳಿಸಲು ತುಂಗಭದ್ರಾಕ್ಕೆ ನವಿಲೆ ಸಮತೋಲನ ಜಲಾಶಯ ನಿರ್ಮಾಣಕ್ಕೆ ಕೇಂದ್ರ ಸಚಿವರ ಸಮ್ಮುಖದಲ್ಲಿ ಮೂವರು ಸಿಎಂಗಳು ಒಪ್ಪಿದ್ದೇವೆ ಹಾಗೂ ಗೋದಾವರಿ, ಕೃಷ್ಣ, ಪೆನ್ನಾರ್, ಕಾವೇರಿ ನದಿಗಳ ಜೋಡಣೆ ಯೋಜನೆಗೂ ನಾವು ಒಪ್ಪಿದ್ದೇವೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ತಿಳಿಸಿದರು.

ಮೇಕೆದಾಟು ಯೋಜನೆ ಕುರಿತು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಅನುಕೂಲ ಆಗುವ ತೀರ್ಪು ನೀಡಿದೆ. ಕರ್ನಾಟಕದ ಜಾಗದಲ್ಲಿ ಸಮತೋಲನ ಅಣೆಕಟ್ಟೆ ಕಟ್ಟಲು ಬೇರೆ ರಾಜ್ಯಗಳ ಅನುಮತಿ ಅನಗತ್ಯ, ಆಕ್ಷೇಪ ವ್ಯಕ್ತಪಡಿಸಲು ಹಕ್ಕು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇಂದು ಇದನ್ನೇ ರಾಜ್ಯಸಭೆಯಲ್ಲಿ ಕೂಡ ಜಲಶಕ್ತಿ ಸಚಿವರು ಪುನರುಚ್ಚರಿಸಿದ್ದಾರೆ. ಇದಕ್ಕೆ ಕರ್ನಾಟಕದ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

ಕೃಷ್ಣ ನ್ಯಾಯಮಂಡಳಿಯ ನೀರು ಹಂಚಿಕೆ ಪ್ರಕರಣ ಇತ್ಯರ್ಥ ಪಡಿಸಲು ವಿಶೇಷ ಪೀಠ ಸ್ಥಾಪನೆ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನ ಆಗಿದೆ. ಮಹದಾಯಿ ಯೋಜನೆ ಅಡೆತಡೆ ನಿವಾರಣೆಗೆ ನ್ಯಾಯವಾದಿಗಳ ಜತೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.‌

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?

ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಯೋಜನೆಗಳ ಫಾಲೋ ಅಪ್ ಮಾಡಲು ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ಸೇರಿದಂತೆ ಹೊಸ ತಂಡ ರಚಿಸಲಾಗುವುದು. ಸಂಸದರಿಗೆ ಪೂರಕ ಮಾಹಿತಿ ಒದಗಿಸಲು ಈ ತಂಡ ಕೆಲಸ ಮಾಡಲಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.