ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫ್ರಾನ್ಸ್‌ನಲ್ಲಿ ಸಚಿವ ಎಂ.ಬಿ. ಪಾಟೀಲ್‌; ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ವದ ಮಾತುಕತೆ

MB Patil: ಫ್ರಾನ್ಸ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ್ ‌ಅವರು ಮೂರನೇ ದಿನವಾದ ಬುಧವಾರ ಲಿಸಿ ಏರೋಸ್ಪೇಸ್, ಆಬರ್ಟ್ ಅಂಡ್ ಡುವಲ್‌ ಮತ್ತು ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದಾರೆ.

ಫ್ರಾನ್ಸ್‌ನಲ್ಲಿ ಪ್ರಮುಖ ಕಂಪನಿಗಳ ಜತೆ ಸಚಿವ ಎಂ.ಬಿ. ಪಾಟೀಲ್‌ ಮಾತುಕತೆ

'ಫ್ರಾನ್ಸ್ ಕನ್ನಡ ಬಳಗ'ದ ಪದಾಧಿಕಾರಿಗಳು ಸಚಿವ ಎಂ.ಬಿ. ಪಾಟೀಲ್‌ರನ್ನು ಬುಧವಾರ ಭೇಟಿಯಾದರು. -

Profile
Siddalinga Swamy Sep 9, 2026 10:50 PM

ಬೆಂಗಳೂರು, ಸೆ.09: ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಬಂಡಾವಳ ಹೂಡಿಕೆ (Invest Karnataka) ಸೆಳೆಯುವ ಉದ್ದೇಶದೊಂದಿಗೆ ಫ್ರಾನ್ಸ್ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರು (MB Patil) ಮೂರನೇ ದಿನವಾದ ಬುಧವಾರ ಲಿಸಿ ಏರೋಸ್ಪೇಸ್, ಆಬರ್ಟ್ ಆ್ಯಂಡ್ ಡುವಲ್‌ ಮತ್ತು ಆರ್ಕೆಮಾ ಕಂಪನಿಗಳ ಜತೆ ಮಹತ್ತ್ವದ ಮಾತುಕತೆ ನಡೆಸಿದ್ದಾರೆ.

ಈ ಬಗ್ಗೆ ಪ್ಯಾರಿಸ್‌ನಿಂದ ಮಾಹಿತಿ ನೀಡಿರುವ ಅವರು, ಸಂಕೀರ್ಣ ಮೆಟಾಲಿಕ್ ಮೆಟೀರಿಯಲ್ ಕ್ಷೇತ್ರದಲ್ಲಿ ಅಗ್ರ ಕಂಪನಿಯಾಗಿರುವ ಆಬರ್ಟ್ ಆ್ಯಂಡ್ ಡುವಲ್ ಕಂಪನಿಗೆ ಬೆಳಗಾವಿಯಲ್ಲಿ ಈಗಾಗಲೇ ಇರುವ ತನ್ನ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸುವಂತೆ ಕೋರಲಾಗಿದೆ ಎಂದಿದ್ದಾರೆ.

Invest Karnataka

ಕಂಪನಿಯು ಬೆಳಗಾವಿಯಲ್ಲಿನ ಏಕಸ್ ಏರೋಸ್ಪೇಸ್ ವಿಶೇಷ ಆರ್ಥಿಕ ವಲಯದಲ್ಲಿ ನೆಲೆಯೂರಿದೆ. ಕಂಪನಿಯು ಮತ್ತಷ್ಟು ಹೂಡಿಕೆ ಮಾಡುವ ಕುರಿತು ಏಕಸ್ ಜತೆ ಚರ್ಚಿಸಬೇಕಾದ ಅಗತ್ಯವನ್ನು ರಾಜ್ಯ ಸರಕಾರ ಮತ್ತು ಕಂಪನಿಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ. ಕಂಪನಿಯು ರಾಜ್ಯದಲ್ಲಿ ಸ್ಕ್ವಾಡ್ ಫೋರ್ಜಿಂಗ್ ಇಂಡಿಯಾ ಜತೆಯಲ್ಲೂ ಸಹಭಾಗಿತ್ವ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಲಿಸಿ ಏರೋಸ್ಪೇಸ್ ಕಂಪನಿಯು ಬಿಡಿಭಾಗಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದು, ಬೆಂಗಳೂರಿನಲ್ಲಿ ತಯಾರಿಕಾ ಘಟಕವನ್ನು ಹೊಂದಿದೆ. ಕಂಪನಿಯು ತನ್ನ ಭವಿಷ್ಯದ ಹೂಡಿಕೆ ಯೋಜನೆಗಳನ್ನು ಹಂಚಿಕೊಂಡಿದೆ. ನಾವು ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಹೇಳಿದ್ದೇವೆ ಎಂದು ಹೇಳಿದ್ದಾರೆ.

Minister MB Patil

ಬೆಂಗಳೂರಿನಲ್ಲಿ ತನ್ನ ತಯಾರಿಕಾ ಸ್ಥಾವರ ಹೊಂದಿರುವ ಮೆಟೀರಿಯಲ್ಸ್ ಕ್ಷೇತ್ರದ ಆರ್ಕೆಮಾ ಕಂಪನಿಯೊಂದಿಗಿನ ಮಾತುಕತೆಯೂ ಸಕಾರಾತ್ಮಕವಾಗಿ ನಡೆಯಿತು. ಮುಖ್ಯವಾಗಿ ಬ್ಯಾಟರಿ ಉತ್ಪಾದನೆಗೆ ಇರುವ ಸದವಕಾಶಗಳ ಬಗ್ಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಮಾಹಿತಿ ನೀಡಿದ್ದಾರೆ.

ಮಾತುಕತೆಯಲ್ಲಿ ಲಿಸಿ ಏರೋಸ್ಪೇಸ್ ಕಂಪನಿಯ ಉನ್ನತ ಪ್ರತಿನಿಧಿಗಳಾದ ಫ್ರಾಂಕೋಯಿಸ್ ಕ್ಸೇವಿಯರ್, ಭಾರತದ ವಿಭಾಗದ ಮುಖ್ಯಸ್ಥ ಅನಿಲ್ ಚೌಧರಿ, ಆರ್ಕೆಮಾ ಕಂಪನಿಯ ಉಪಾಧ್ಯಕ್ಷ ಅಬ್ದುಲ್ ಖಾದರ್ ಕದ್ರಿ, ಮಾಥ್ಯೂ ಲಾರೆಂಟ್, ವರ್ಜಿನ್ ಗುರಿನ್, ಆಬರ್ಟ್ ಆ್ಯಂಡ್ ಡುವನ್ ಸಿಎಫ್‌ಒ ಪ್ಯಾಟ್ರಿಕ್ ಭಾಗವಹಿಸಿದ್ದರು.

ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ನಿಯೋಗ ಫ್ರಾನ್ಸ್‌ಗೆ ಭೇಟಿ; ರಾಕೆಟ್, ಹಚಿನ್ಸನ್, ಬಯೋಮೆರಿಕ್ಸ್ ಜತೆ ಹೂಡಿಕೆ ಮಾತುಕತೆ

ಫ್ರಾನ್ಸ್ ಕನ್ನಡ ಬಳಗದ ಭೇಟಿ

ಪ್ಯಾರಿಸ್‌ನಲ್ಲಿ ಸಕ್ರಿಯವಾಗಿರುವ 'ಫ್ರಾನ್ಸ್ ಕನ್ನಡ ಬಳಗ'ದ ಪದಾಧಿಕಾರಿಗಳು ಸಚಿವ ಎಂ.ಬಿ. ಪಾಟೀಲ ಅವರನ್ನು ಬುಧವಾರ ಭೇಟಿಯಾಗಿದ್ದರು.‌ ಈ ಸಂದರ್ಭದಲ್ಲಿ ಬಳಗದ ಸದಸ್ಯರು ಫ್ರಾನ್ಸ್ ಮತ್ತು ಕರ್ನಾಟಕದ ಬಲವರ್ಧನೆಗೆ ಅನೇಕ ಚಿಂತನೆಗಳನ್ನು ಹಂಚಿಕೊಂಡರು. ಜತೆಗೆ ಫ್ರಾನ್ಸ್‌ನಲ್ಲಿ ಕನ್ನಡ ಸಂಸ್ಕೃತಿ, ಭಾಷೆ, ಸಾಂಸ್ಕೃತಿಕ ವಿನಿಮಯ, ವಿದ್ಯಾರ್ಥಿಗಳಿಗೆ ಒದಗಿಸಬೇಕಾದ ಅವಕಾಶ ಇತ್ಯಾದಿಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ತಿಳಿಸಿದ್ದಾರೆ.