PM Narendra modi: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಉದ್ಘಾಟನೆ
ಸುಮಾರು 80 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಿಸಲಾದ ಈ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಇದ್ದರು.
ಮೋದಿಯವರಿಂದ ಭೈರವೈಕ್ಯ ಮಂದಿರ ಉದ್ಘಾಟನೆ -
ಮಂಡ್ಯ, ಏ.15: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra modi) ಅವರು ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪವಿತ್ರ ಕ್ಷೇತ್ರವಾದ ಆದಿಚುಂಚನಗಿರಿ (Adichunchanagiri) ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿದರು.
ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಗದ್ದುಗೆ ಇರುವ ಸ್ಥಳದಲ್ಲಿಯೇ ಈ ಮಂದಿರವನ್ನು ಭವ್ಯವಾಗಿ ನಿರ್ಮಿಸಲಾಗಿದೆ. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಪ್ರಧಾನಿಯವರನ್ನು ಗೌರವಿಸಿ ಮಾರ್ಗದರ್ಶನ ನೀಡಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ವಿವಿಧ ಮಠಗಳ ಮಠಾಧೀಶರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.
ಸುಮಾರು 80 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಿಸಲಾದ ಈ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಈ ಮಂದಿರ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಇದರಲ್ಲಿ ಚಾಲುಕ್ಯ, ಹೊಯ್ಸಳ, ಚೋಳ ಹಾಗೂ ಗಂಗರ ಕಾಲದ ಅದ್ಭುತ ಶಿಲ್ಪಕಲೆಗಳ ಸಮಾಗಮವನ್ನು ಕಾಣಬಹುದಾಗಿದೆ. ಈ ಮಂದಿರದ ನಿರ್ಮಾಣ ಕಾರ್ಯಕ್ಕೆ ಹತ್ತು ವರ್ಷಗಳ ಹಿಂದೆಯೇ ಅಡಿಗಲ್ಲು ಹಾಕಲಾಗಿತ್ತು. ಖ್ಯಾತ ಶಿಲ್ಪಿ ಶಂಕರ್ ಸ್ತಪತಿ ಅವರ ನೇತೃತ್ವದಲ್ಲಿ ಮಂದಿರದ ಕೆತ್ತನೆ ಕಾರ್ಯ ನೆರವೇರಿದೆ.
ಇದಕ್ಕೂ ಮುನ್ನ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನದಲ್ಲಿ ಬಂದಿಳಿದ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು. ಇದೇ ವೇಳೆ 18 ಬೇಡಿಕೆಗಳನ್ನು ಹೊಂದಿರುವ ಮನವಿ ಪತ್ರವನ್ನು ಸಿಎಂ ಅವರು ಪ್ರಧಾನಿಗೆ ನೀಡಿದರು. ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ಮೋದಿ ಸೇನಾ ಹೆಲಿಕ್ಯಾಪ್ಟರ್ ಮೂಲಕ ಆದಿಚುಂಚನಗಿರಿಗೆ ತೆರಳಿದರು. ಇದಕ್ಕಾಗಿ ಭದ್ರತಾ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣದಿಂದ ಹೆಲಿಪ್ಯಾಡ್‌ವರೆಗೆ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೆಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.
PM Narendra Modi: ಇಂದು ಆದಿಚುಂಚನಗಿರಿಗೆ ಪ್ರಧಾನಿ ಮೋದಿ, ಭೈರವೈಕ್ಯ ಮಂದಿರ ಉದ್ಘಾಟನೆಗೆ ಸಜ್ಜು