PM Narendra Modi: ಗಲ್ಫ್‌ನಲ್ಲಿ ಕನ್ನಡ ಕಲಿಸಿ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಪಡೆದ ಪಾಠಶಾಲೆ, ಅಲ್ಲೀಗ 1200 ಮಕ್ಕಳು!
ʼದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡ್ರು. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ, ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ ಅನ್ನೋ ಆತಂಕ ದುಬೈ ಕನ್ನಡಿಗರಿಗೆ ಬಂತು. ಆಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ ಮಾಡಿದರುʼ ಎಂದು ಪ್ರಧಾನಿ ಮೋದಿ (PM Narendra Modi) ಹೇಳಿದ್ದರು.
ದುಬೈನ ಕನ್ನಡ ಪಾಠಶಾಲೆ -
ಬೆಂಗಳೂರು, ಡಿ.29: ಗಲ್ಫ್ ದೇಶ ದುಬೈನಲ್ಲಿ (Dubai) ಕನ್ನಡ ಕಲಿಸುತ್ತಿರುವ ‘ಕನ್ನಡ ಪಾಠಶಾಲೆ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮನ್ ಕಿ ಬಾತ್‌ನಲ್ಲಿ ಪ್ರಶಂಸೆಯ ಹೊಳೆ ಹರಿಸಿದ್ದಾರೆ. ತಮ್ಮ 129ನೇ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ (Mann Ki Baat) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕನ್ನಡ ಪಾಠಶಾಲೆ 2014ರಲ್ಲಿ ಆರಂಭವಾಗಿದ್ದು, ಅಂದಿನಿಂದ ಇದು ಅಲ್ಲಿ ಕನ್ನಡ ಕಾಯಕ ಮಾಡುತ್ತಿದೆ.
ʼದುಬೈನಲ್ಲಿ ಬಹಳ ವರ್ಷಗಳಿಂದ ಕನ್ನಡಿಗರು ವಾಸವಿದ್ದಾರೆ. ದುಬೈ ಕನ್ನಡಿಗರು ತಮ್ಮಲ್ಲಿ ತಾವೇ ಒಂದು ಪ್ರಶ್ನೆ ಕೇಳಿಕೊಂಡ್ರು. ನಮ್ಮ ಮಕ್ಕಳು ಟೆಕ್‌ವರ್ಲ್ಡ್‌ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ, ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆಯೇ ಅನ್ನೋ ಆತಂಕ ದುಬೈ ಕನ್ನಡಿಗರಿಗೆ ಬಂತು. ಆಗಿನಿಂದಲೇ ಅವರು ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭ ಮಾಡಿದರುʼ ಎಂದು ಮೋದಿ ಹೇಳಿದ್ದರು.
‘ಕನ್ನಡ ಪಾಠ ಶಾಲೆ’ ಆರಂಭ ಆಗಿದ್ಯಾಕೆ?
2014ರಲ್ಲಿ ದುಬೈನಲ್ಲಿದ್ದ ಪರ್ವ ಗ್ರೂಪ್ ಉದ್ಯಮಿ, ಕನ್ನಡಿಗ ಉದ್ಯಮಿ ಶಶಿಧರ ನಾಗರಾಜಪ್ಪ ಹಾಗೂ ಸ್ನೇಹಿತರು, ‘ಅಲ್ಲಿನ ಕರ್ನಾಟಕ ಮೂಲದ ಮಕ್ಕಳಿಗೆ ಮಾತೃಭಾಷೆ ಕನ್ನಡದ ಜ್ಞಾನದ ಕೊರತೆ ಇದೆ. ಇದು ದುಃಖಕರ ವಿಚಾರ. ಕನ್ನಡ ನಮ್ಮ ಭಾಷೆಯಷ್ಟೇ ಅಲ್ಲ, ಸಂಸ್ಕೃತಿ ಕೂಡ. ಅದನ್ನು ಉಳಿಸಬೇಕು’ ಎಂದು ಚರ್ಚಿಸುತ್ತಿದ್ದರು. ಈ ವೇಳೆ ಹೊಳೆದಿದ್ದೇ ಕನ್ನಡ ಪಾಠಶಾಲೆಯ ಕಲ್ಪನೆ.
ಕೆಲಸಕ್ಕಾಗಿ ದುಬೈಗೆ ಸಾವಿರಾರು ಕನ್ನಡಿಗರು ವಲಸೆ ಬರುತ್ತಾರೆ. ಹೀಗಾಗಿ ಅವರ ಮಕ್ಕಳು ತಮ್ಮ ಮೂಲ ನೆಲದ ಭಾಷೆಯನ್ನು ಕಲಿಯಲು ಸಾಧ್ಯವಾಗುತ್ತಿಲ್ಲ. ಪೋಷಕರು ಕೂಡ ಕೆಲಸಕ್ಕೆ ಹೋಗುವ ಕಾರಣ ಅವರಿಗೂ ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಹೇಳಿಕೊಡಲು ಸಮಯ ಇರುವುದಿಲ್ಲ. ಹೀಗಾಗಿ ಅಂತಹ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂಬ ಉದ್ದೇಶದೊಂದಿಗೆ 50 ಜನರ ತಂಡ ಈ ಶಾಲೆಯನ್ನು ಆರಂಭಿಸಿತು.
1258 ಮಕ್ಕಳಿಂದ ಕನ್ನಡ ಕಲಿಕೆ
ಶಶಿಧರ್ ಹಾಗೂ ಅವರ 50 ಸ್ನೇಹಿತರ ದುಬೈ ಕನ್ನಡಿಗ ಮಕ್ಕಳನ್ನು ಕೂರಿಸಿಕೊಂಡು ಶಾಲೆ ಆರಂಭಿಸಲಾಯಿತು. ಮಕ್ಕಳಿಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಸಾಧ್ಯವಾಗುವಂತೆ ತರಬೇತಿ ಆರಂಭಿಸಲಾಯಿತು. 12 ವರ್ಷಗಳ ಹಿಂದೆ 45 ಮಕ್ಕಳೊಂದಿಗೆ ಶುರುವಾದ ದುಬೈ ಕನ್ನಡ ಪಾಠಶಾಲೆಯಲ್ಲೀಗ 1258 ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. ಆಫ್ ಲೈನ್ ತರಗತಿಗಳೊಂದಿಗೆ ಶುರುವಾದ ಈ ಶಾಲೆಯು ಕೋವಿಡ್ ಅವಧಿಯಲ್ಲಿ ಆನ್‌ಲೈನ್ ರೂಪ ಪಡೆದುಕೊಂಡಿತು. ಪ್ರಸ್ತುತ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೂಪದಲ್ಲಿ ಕನ್ನಡ ಪಾಠಶಾಲೆಯು ಅರಬ್ ರಾಷ್ಟ್ರಗಳಾದ್ಯಂತ ವಿದ್ಯಾರ್ಥಿಗಳನ್ನು ಹೊಂದಿದೆ.
ಇಲ್ಲಿ ಕನ್ನಡ ಕಲಿಸಲು ಅಗತ್ಯ ಪಠ್ಯಕ್ರಮವನ್ನೂ ಕೂಡ ವಿನ್ಯಾಸಗೊಳಿಸಿದೆ. ಸಂಖ್ಯೆ, ಪದಗಳು, ವಾಕ್ಯ ರಚನೆ, ವ್ಯಾಕರಣ, ಪ್ರಬಂಧ, ಪತ್ರ ಬರೆಯುವಿಕೆ ಮೊದಲಾದವನ್ನು ಕಲಿಸಲಾಗುತ್ತದೆ. ನಂತರ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.
ಶಶಿಧರ್ ನಾಗರಾಜಪ್ಪ ಅಧ್ಯಕ್ಷತೆಯ ದುಬೈ ಕನ್ನಡಶಾಲೆಯ ಶ್ರೇಯಸ್ಸಿಗೆ ಒಂದು ಸಮಾನ ಮನಸ್ಕ ತಂಡ ಜೊತೆಯಾಗಿದೆ. ಉಪಾಧ್ಯಕ್ಷ ಸಿದ್ದಲಿಂಗೇಶ್, ಮುಖ್ಯ ಶಿಕ್ಷಕಿ ರೂಪಾ ಶಶಿಧರ್, ಕಾರ್ಯದರ್ಶಿ ಸುನಿಲ್ ಗವಾಸ್ಕರ್, ಖಜಾಂಚಿ ನಾಗರಾಜ ರಾವ್, ಜಂಟಿ ಕಾರ್ಯದರ್ಶಿ ಶಶಿಧರ್ ಮುಂಡರಗಿ ತಂಡದ ಮುಂಚೂಣಿಯಲ್ಲಿದ್ದಾರೆ. ದುಬೈ ಕನ್ನಡಿಗರಾದ ಪ್ರವೀಣ್ ಶೆಟ್ಟಿ, ಮೋಹನ್ ನರಸಿಂಹಮೂರ್ತಿ, ಮೊಹ್ಮದ್ ಮೂಳೂರು, ಡಾ. ಫ್ರಾಂಕ್ ಫರ್ನಾಂಡೀಸ್ ಅವರು ಸರ್ವ ರೀತಿಯಲ್ಲೂ ಬೆಂಬಲಿಸಿದ್ದಾರೆ.