Congress Protest: ಮೋದಿ ಕಳ್ಳಮತಗಳಿಂದ ಪ್ರಧಾನಿಯಾಗಿದ್ದಾರೆ ಎಂದು ಸಾಬೀತು ಪಡಿಸುತ್ತೇವೆ: ರಾಹುಲ್ ಗಾಂಧಿ
Congress Protest: ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಗಾಗಿ ಕೆಲಸ ಮಾಡಲು ಇರುವ ಸಂಸ್ಥೆಯಲ್ಲ. ಪವಿತ್ರ ಸಂವಿಧಾನದ ಪರವಾಗಿ ಕೆಲಸ ಮಾಡಲು ಇರುವ ಸಂಸ್ಥೆ ಎಂದು ಆರೋಪಿಸಿದ್ದಾರೆ.


ಬೆಂಗಳೂರು: ನರೇಂದ್ರ ಮೋದಿ ಅವರು ಕೇವಲ 25 ಸ್ಥಾನಗಳಿಂದ ಪ್ರಧಾನಿಯಾಗಿದ್ದಾರೆ. ಈ ಎಲ್ಲಾ ಸ್ಥಾನಗಳಲ್ಲೂ ಕೇವಲ 34 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ನಮಗೆ ಡಿಜಿಟಲ್ ರೂಪದಲ್ಲಿ ಮತದಾರರ ಪಟ್ಟಿ ಸಿಕ್ಕರೆ, ಈ ದೇಶದ ಪ್ರಧಾನಿ ಕಳ್ಳಮತಗಳಿಂದ ಪ್ರಧಾನಿಯಾಗಿದ್ದಾರೆ ಎಂದು ಸಾಬೀತು ಪಡಿಸುತ್ತೇವೆ ಎಂದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ತಿಳಿಸಿದರು. ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಸಮಾವೇಶದಲ್ಲಿ(Congress Protest)ಅವರು ಮಾತನಾಡಿದರು.
ನೀವು ಈ ಪವಿತ್ರವಾದ ಸಂವಿಧಾನದ ಮೇಲೆ ಹಲ್ಲೆ ಮಾಡಿದರೆ ನಾವು ನಿಮ್ಮನ್ನು ಗುರಿ ಮಾಡುತ್ತೇವೆ. ನಾನು ಚುನಾವಣಾ ಆಯೋಗಕ್ಕೆ ಸ್ಪಷ್ಟವಾದ ಸಂದೇಶ ನೀಡುತ್ತಿದ್ದೇನೆ. ನೀವೆಲ್ಲರೂ ಸಂವಿಧಾನದ ಮೇಲೆ ಪ್ರಹಾರ ನಡೆಸಿ ಯಶಸ್ವಿಯಾಗುತ್ತೀರಾ ಎಂದಾದರೆ ಮತ್ತೊಮ್ಮೆ ಆಲೋಚನೆ ಮಾಡಿ ಎಂದು ಎಚ್ಚರಿಕೆ ನೀಡುತ್ತಿದ್ದೇನೆ. ನಿಮ್ಮನ್ನೆಲ್ಲಾ ಹಿಡಿದು ಹಾಕುವ ಸಮಯ ಬಂದೇ ಬರುತ್ತದೆ. ಆಗ ಒಬ್ಬೊಬ್ಬರನ್ನು ಹುಡುಕಿ ನಾವು ಪಾಠ ಕಲಿಸುತ್ತೇವೆ ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದರು.

ಚುನಾವಣಾ ಆಯೋಗ ಬಿಜೆಪಿಗಾಗಿ ಕೆಲಸ ಮಾಡಲು ಇರುವ ಸಂಸ್ಥೆಯಲ್ಲ. ಪವಿತ್ರ ಸಂವಿಧಾನದ ಪರವಾಗಿ ಕೆಲಸ ಮಾಡಲು ಇರುವ ಸಂಸ್ಥೆ. ಚುನಾವಣಾ ಆಯೋಗವು ನನ್ನ ಬಳಿಯಿಂದ ಮತಗಳ್ಳತನದ ಆರೋಪಗಳಿಗೆ ಸಾಕ್ಷಿ ಕೇಳುತ್ತಿದೆ, ಪ್ರಮಾಣ ಮಾಡಿ ಎಂದು ಹೇಳುತ್ತಿದೆ. ನಾನು ದೇಶದ ಪವಿತ್ರ ಸಂವಿಧಾನ ಮೇಲೆ ನಮ್ಮ ಸಂಸತ್ತಿನಲ್ಲಿ ಪ್ರಮಾಣ ಮಾಡಿದ್ದೇನೆ, ನಾನು ನುಡಿಯುವುದೆಲ್ಲವೂ ಸತ್ಯ ಎಂದು ಹೇಳಿದರು.
ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಿತು. ಲೋಕಸಭೆಯಲ್ಲಿ ನಮ್ಮ ಮೈತ್ರಿ ಕೂಟ ಜಯ ಸಾಧಿಸಿತು. ನಾಲ್ಕು ತಿಂಗಳ ನಂತರ ನಡೆದ ವಿಧಾನಸಭಾ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತು. ಮಹಾರಾಷ್ಟ್ರದಲ್ಲಿ 1 ಕೋಟಿ ಹೊಸದಾದ ಮತದಾರರು ಮತ ಹಾಕಿದ್ದಾರೆ. ಈ 1 ಕೋಟಿ ಜನ ಲೋಕಸಭೆಯಲ್ಲಿ ಮತ ಹಾಕಿರಲಿಲ್ಲ. ಆದರೆ, ಇವರು ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿದ್ದು ಅಚ್ಚರಿ ತಂದಿದೆ. ಈ ಮೂಲಕ ಬಿಜೆಪಿ ಮಹಾರಾಷ್ಟ್ರದಲ್ಲಿ ಗೆಲ್ಲುತ್ತದೆ. ನಮಗೆ ಲೋಕಸಭೆಯಲ್ಲಿ ಎಷ್ಟು ಮತ ಸಿಕ್ಕಿತೋ, ಅಷ್ಟು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಸಿಕ್ತು. ಇಲ್ಲಿ ಏನೋ ಷಡ್ಯಂತ್ರ ಇದೆ ಅಂತ ಆವತ್ತೇ ಅನಿಸಿತು ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ನಮ್ಮ ಆಂತರಿಕ ಸರ್ವೆ ನಮಗೆ 16 ಕ್ಷೇತ್ರದಲ್ಲಿ ಗೆಲ್ಲುವ ವರದಿ ಕೊಟ್ಟಿತ್ತು. ಆದರೆ, ನಾವು ಗೆದ್ದಿದ್ದು 9 ರಲ್ಲಿ ಮಾತ್ರ. ಹಾಗಾಗಿ ನಾವು ಪ್ರಶ್ನೆ ಕೇಳಲು ಮುಂದಾಗಿದ್ದೇವೆ. ನಾವು ನಿಜಕ್ಕೂ ಈ ಕ್ಷೇತ್ರಗಳಲ್ಲಿ ಸೋತೆವಾ? ಅಥವಾ ಬಿಜೆಪಿ ಕೈವಾಡ ಇದೆಯಾ ಅಂತ ಕೇಳಿದೆವು. ಹಾಗಾಗಿ, ನಾವು ಒಂದು ಲೋಕಸಭಾ ಕ್ಷೇತ್ರ ಮುಂದಿಟ್ಟು ಪ್ರಶ್ನೆ ಕೇಳಲು ಮುಂದಾಗಿದ್ದೇವೆ. ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಅಕ್ರಮ ಬಗ್ಗೆ ಪ್ರಶ್ನೆ ಮಾಡಿದ್ದೆವು. ಮಹದೇವಪುರದಲ್ಲಿ 6.5 ಲಕ್ಷ ಮತಗಳಿವೆ, ಈ ಪೈಕಿ 1,00,250 ಮತಗಳ ಕಳವು ಆಗಿವೆ. ಪ್ರತಿ ಆರು ಮತಗಳಲ್ಲಿ ಒಂದು ಮತದ ಕಳವು ಮಾಡಲಾಗಿದೆ. ಐದು ಹಂತದಲ್ಲಿ ಮತ ಕಳವು ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಒಬ್ಬನೇ ನಾಲ್ಕೈದು ಮತಗಟ್ಟೆಗಳಲ್ಲಿ ಮತ ಹಾಕಿದ್ದಾನೆ. ಇಂಥ 12 ಸಾವಿರ ಮತಗಳು ಚಲಾವಣೆ ಆಗಿವೆ. ನಕಲಿ ವಿಳಾಸ ಇರುವ 40 ಸಾವಿರ ಮತಗಳಿವೆ. ಒಂದೇ ವಿಳಾಸದಲ್ಲಿ 40-50 ಜನ ಇದ್ದಾರೆ. ಅಲ್ಲಿ ಹೋಗಿ ನೋಡಿದರೆ ಯಾರೂ ಸಿಗಲಿಲ್ಲ. ಆ ಮನೆಯ ಮಾಲೀಕ ಬಿಜೆಪಿಯ ಮುಖಂಡ. ನಕಲಿ ಫೋಟೊ ಇರುವ 4 ಸಾವಿರ ಮತಗಳಿವೆ. 34 ಸಾವಿರ ಮತಗಳು ಹೊಸ ಮತದಾರರಾಗಿ ಚಲಾವಣೆ, ಆದ್ರೆ ಇವರೆಲ್ಲ ವೃದ್ಧರು. ಈ ಥರ 1,00,250 ಮತಗಳವು ಆಗಿದ್ದು, ಆ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಳೆದ ಚುನಾವಣೆ ಜನರಿಗೆ ದ್ರೋಹ ಬಗೆದ ಚುನಾವಣೆ: ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನರೇಂದ್ರ ಮೋದಿ ಅವರು 2024ರ ಚುನಾವಣೆಯಲ್ಲಿ ಮತಗಳ್ಳತನ ಮಾಡಿ ಈ ದೇಶದ ಪ್ರಧಾನಮಂತ್ರಿಯಾಗಿದ್ದಾರೆ. ಸತತ ಆರು ತಿಂಗಳ ಕಾಲ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದ 6.60 ಲಕ್ಷ ಮತದಾರರ ಮಾಹಿತಿಯನ್ನು ರಾಹುಲ್ ಗಾಂಧಿ ಅವರು ಪರಿಶೀಲನೆ ಮಾಡಿ ಮತದಾನದ ಅಕ್ರಮವನ್ನು ಬಯಲಿಗೆಳೆದಿದ್ದಾರೆ ಎಂದು ತಿಳಿಸಿದರು.
ಕಳೆದ ಚುನಾವಣೆ ಜನರಿಗೆ ದ್ರೋಹ ಬಗೆದ ಚುನಾವಣೆ. ದೇಶದಲ್ಲಿ ಸಂವಿಧಾನ ಉಳಿಸಿ, ಮತದಾನದ ಹಕ್ಕು ಹಾಗೂ ಪ್ರಜಾಪ್ರಭುತ್ವ ರಕ್ಷಣೆ ಮಾಡುವುದು ನಮ್ಮ ಪ್ರಯತ್ನ. ಆದರೆ ಜನ ಮತ ನೀಡದಿದ್ದರೂ ಮತಗಳ್ಳತನದ ಮೂಲಕ ಚುನಾವಣೆ ಗೆಲ್ಲುವುದು ಮೋದಿ ಹಾಗೂ ಅಮಿತ್ ಶಾ ಅವರ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | Congress Protest: ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿ ಆಗಿದೆ: ಸಿಎಂ ಸಿದ್ದರಾಮಯ್ಯ
ಮೋದಿ ಅಂಡ್ ಕಂಪನಿ ಜನಾದೇಶದ ಮೂಲಕ 2024ರ ಚುನಾವಣೆಯನ್ನು ಗೆದ್ದಿಲ್ಲ. ಕಳ್ಳತನದಿಂದ ಗೆದ್ದಿದ್ದಾರೆ. ಈ ಸರ್ಕಾರ ಬಹುಕಾಲ ಉಳಿಯುವುದಿಲ್ಲ. ಅವರ ಅಕ್ರಮ ಹೊರಗೆ ತಂದು ಜನರಿಂದ ಛೀಮಾರಿ ಹಾಕಿಸುತ್ತೇವೆ. ನಮ್ಮಮತ ಕಸಿದುಕೊಂಡ ನಂತರ ನಮ್ಮ ಅಸ್ತಿತ್ವವೇ ಇರುವುದಿಲ್ಲ. ಆಗಸ್ಟ್ 9, 1942ರಂದು ಮಹಾತ್ಮಾಗಾಂಧಿ ಅವರು ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸಿದರು. ಅದೇ ರೀತಿ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ನಾವು 'ಮಾಡು ಇಲ್ಲವೇ ಮಡಿ' ಎಂಬ ಧೈಯದೊಂದಿಗೆ ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.