Green Oscar Award: ಕರ್ನಾಟಕದ ಸೆಲ್ಕೋ ಸೋಲಾರ್ ಸಂಸ್ಥೆಗೆ ಪ್ರತಿಷ್ಠಿತ ಗ್ರೀನ್ ಆಸ್ಕರ್ ಪುರಸ್ಕಾರ
ಈ ವರ್ಷ 25ನೇ ವರ್ಷದ ಗ್ರೀನ್ ಆಸ್ಕರ್ (Green Oscar) ಪುರಸ್ಕಾರಗಳನ್ನು ಆಶ್ಡೆನ್ ಸಂಸ್ಥೆ ನೀಡುತ್ತಿದೆ. ಈ ವರ್ಷದ ಔಟ್ಸ್ಟಾಂಡಿಂಗ್ ಅಚೀವ್ಮೆಂಟ್ ಅವಾರ್ಡ್- ಇಂಟರ್ನ್ಯಾಶನಲ್ʼ ಅನ್ನು ಸೆಲ್ಕೋ ತನ್ನದಾಗಿಸಿಕೊಂಡಿದೆ. ಕಳೆದ ಮೂರು ದಶಕಗಳಲ್ಲಿ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಸೆಲ್ಕೋ ತನ್ನದಾಗಿಸಿಕೊಳ್ಳುತ್ತಿದೆ.

ಹರೀಶ್ ಹಂದೆ, ಮೋಹನ ಭಾಸ್ಕರ ಹೆಗಡೆ

ಬೆಂಗಳೂರು: ದೇಶದ ಹಳ್ಳಿ ಹಳ್ಳಿಗಳಿಗೆ ಸೋಲಾರ್ ವಿದ್ಯುತ್ (Solar Electricity) ಒದಗಿಸಿ ಗ್ರಾಮೀಣ ಭಾರತದಲ್ಲಿ (Rural India) ಸುಸ್ಥಿರ ಇಂಧನ, ಬೆಳಕಿನ ಕ್ರಾಂತಿ ಮಾಡಿದ ಬೆಂಗಳೂರು ಮೂಲದ ಸೆಲ್ಕೋ ಸೋಲಾರ್ (SELCO Solar) ಸಂಸ್ಥೆಗೆ ಮೂರನೇ ಬಾರಿಗೆ ʼಅಂತಾರಾಷ್ಟ್ರೀಯ ಗ್ರೀನ್ ಆಸ್ಕರ್ʼ ಪ್ರಶಸ್ತಿ (Green Oscar Award) ದೊರೆತಿದೆ. ಲಂಡನ್ ಮೂಲದ ಆಶ್ಡೆನ್ ಸಂಸ್ಥೆ ಪರಿಸರಸ್ನೇಹಿ ಉಪಕ್ರಮಗಳಿಗಾಗಿ ನೀಡುವ ಈ ಪುರಸ್ಕಾರವನ್ನು ʼಗ್ರೀನ್ ಆಸ್ಕರ್ʼ ಎಂದೇ ಕರೆಯಲಾಗುತ್ತದೆ. ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ (Mohan Bhaskar Hegde) ಅವರು ಲಂಡನ್ನ ರಾಯಲ್ ಜಿಯಾಗ್ರಾಫಿಕಲ್ ಸೊಸೈಟಿಯಲ್ಲಿ ಜೂನ್ 11ರಂದು ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ವರ್ಷ 25ನೇ ವರ್ಷದ ಗ್ರೀನ್ ಆಸ್ಕರ್ ಪುರಸ್ಕಾರಗಳನ್ನು ಆಶ್ಡೆನ್ ಸಂಸ್ಥೆ ನೀಡುತ್ತಿದೆ. ಈ ವರ್ಷದ ಔಟ್ಸ್ಟಾಂಡಿಂಗ್ ಅಚೀವ್ಮೆಂಟ್ ಅವಾರ್ಡ್- ಇಂಟರ್ನ್ಯಾಶನಲ್ʼ ಅನ್ನು ಸೆಲ್ಕೋ ತನ್ನದಾಗಿಸಿಕೊಂಡಿದೆ. ಕಳೆದ ಮೂರು ದಶಕಗಳಲ್ಲಿ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಸೆಲ್ಕೋ ತನ್ನದಾಗಿಸಿಕೊಳ್ಳುತ್ತಿದೆ. ಬ್ರಿಟನ್ ಹಾಗೂ ದಕ್ಷಿಣ ಜಗತ್ತಿನ ಸಂಸ್ಥೆಗಳನ್ನು ಈ ಪುರಸ್ಕಾರಕ್ಕೆ ಪರಿಗಣಿಸಲಾಗುತ್ತಿದೆ. ಈ ಹಿಂದೆ ಸೆಲ್ಕೋ ಸಂಸ್ಥೆ 2005 ಹಾಗೂ 2007ರಲ್ಲಿ ಈ ಪುರಸ್ಕಾರವನ್ನು ಪಡೆದಿತ್ತು.
ಗ್ರಾಮೀಣ ಭಾರತದಲ್ಲಿ ಸೌರ ವಿದ್ಯುದೀಕರಣ ಮಾಡಿ, ವಿದ್ಯುತ್ ಸಮಸ್ಯೆಗೆ ಪರಿಹಾರಗಳನ್ನು ಒದಗಿಸಿ ಜನರ ಬದುಕನ್ನು ಸುಧಾರಿಸಿದ ಸೆಲ್ಕೋ ಸಂಸ್ಥೆ ಬೆಂಗಳೂರು ಮೂಲದ್ದು. ಕನ್ನಡಿಗ ಹರೀಶ್ ಹಂದೆ ಅವರು ಈ ಸಂಸ್ಥೆಯ ಮುಖ್ಯಸ್ಥರು. ಸೆಲ್ಕೋ ಸಂಸ್ಥೆ ನಿರಂತರವಾಗಿ ಕೃಷಿ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆಯಲ್ಲಿ ಮಹಿಳೆಯರು ನಡೆಸುವ ಸೂಕ್ಷ್ಮ ಉದ್ಯಮಗಳಿಗಾಗಿ 24,000 ಕ್ಕೂ ಹೆಚ್ಚು ವಿಕೇಂದ್ರೀಕೃತ ಸೌರ ವ್ಯವಸ್ಥೆಗಳನ್ನು ಸ್ಥಾಪಿಸಿದೆ. 5 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಡಿಜಿಟಲ್ ತರಗತಿ ಕೊಠಡಿಗಳ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. 60 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿದೆ. ಸ್ಥಳೀಯ ಸಮುದಾಯಗಳಿಗೆ ಶುದ್ಧ, ಕೈಗೆಟುಕುವ ಇಂಧನದ ಲಭ್ಯತೆಯನ್ನು ಒದಗಿಸಿದೆ. ನಿಸರ್ಗಪ್ರೇಮಿ ಇಂಧನ ಉತ್ಪಾದನೆಯ ಮೂಲಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳಿಗೆ ಇಂಧನ ಲಭ್ಯತೆ ಸುಲಭವಾಗುವಂತೆ ಮಾಡಿದೆ. ಸಂಸ್ಥೆಯ ಕಾರ್ಯವೈಖರಿಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಉದ್ಯಮಿಗಳು, ಹೂಡಿಕೆದಾರರು, ಶಿಕ್ಷಣ ತಜ್ಞರು, ನಾಗರಿಕ ಸಮಾಜ ಮುಖಂಡರು, ಪತ್ರಕರ್ತರು ಮತ್ತು ಪ್ರಚಾರಕರನ್ನು ಒಳಗೊಂಡ ಸ್ವತಂತ್ರ ಜ್ಯೂರಿಗಳ ಸಮಿತಿಯು ಈ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುತ್ತದೆ. ಜಾಗತಿಕವಾಗಿ ಇಂತಹ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ನೀಡಲಾಗುತ್ತದೆ. ಇದರಲ್ಲಿ ಎರಡು ಜಾಗತಿಕ ದಕ್ಷಿಣದ ಸಂಸ್ಥೆಗಳಿಗೆ ಮೀಸಲಾಗಿವೆ.
ಇದನ್ನೂ ಓದಿ: PES University: ಎಲೆಕ್ಟ್ರಿಕ್ ಸೋಲಾರ್ ವೆಹಿಕಲ್ ಚಾಂಪಿಯನ್ಶಿಪ್ 2025- ಪಿಇಎಸ್ ವಿವಿಯ ತಂಡಕ್ಕೆ ಬಹುಮಾನ