ನಾಳೆ ಹೊಸನಗರದ ರಾಮಚಂದ್ರಾಪುರಮಠ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ
Ramachandrapura Mutt: ಹೊಸನಗರದ ರಾಮಚಂದ್ರಾಪುರ ಮಠದ ಪ್ರಧಾನಮಠ ಪುನರ್ನಿರ್ಮಾಣಕ್ಕೆ ಫೆ.26ರಂದು ಶಿಲಾನ್ಯಾಸ ನೆರವೇರಲಿದೆ. ಶರಾವತಿ ತೀರದ ಪ್ರಧಾನ ಮಠದ ಆವರಣದಲ್ಲಿ ಶ್ರೀರಾಮ ಸಾನ್ನಿಧ್ಯದ ಮಹಾ ನಿರ್ಮಾಣಕ್ಕೆ ಸಕಲ ಸಿದ್ಧತೆಯಾಗಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ. -
ಶಿವಮೊಗ್ಗ: ಹೊಸನಗರ ಕ್ಷೇತ್ರವು ಹರಿದು ಹಂಚಿ ಹೋಗಿರುವುದು ನಮಗೂ ಬೇಸರವಿದೆ. ಹೊಸನಗರ ವಿಧಾನಸಭಾ ಕ್ಷೇತ್ರವು ಪುನಃ ಅಸ್ತಿತ್ವಕ್ಕೆ ಬರುವುದು ಅಗತ್ಯವಾಗಿದ್ದು, ಅದಕ್ಕಾಗಿಯೇ ಗೋವರ್ಧನ ಗಿರಿಧಾರಿ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ದೇವರ ಪ್ರಸಾದದೊಂದಿಗೆ ನಿಮ್ಮ ಹೋರಾಟಕ್ಕೆ ಸಂಪೂರ್ಣ ಆಶೀರ್ವಾದದ ಬೆಂಬಲ ನೀಡುತ್ತಿದ್ದೇವೆ ಎಂದು ಶ್ರೀ ರಾಮಚಂದ್ರಾಪುರಮಠದ (Ramachandrapura Mutt) ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಹೊಸನಗರ ಶ್ರೀ ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ಸನ್ನಿಧಿಯಲ್ಲಿ ನಡೆದ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀದೇವರಿಗೆ ಕಲಶಾಭಿಷೇಕ ಪೂಜೆ ನೆರವೇರಿಸಿ ನಂತರ ದೇವಸ್ಥಾನದ ಸನ್ನಿಧಿಯಲ್ಲಿಯೇ ಭೇಟಿಯಾದ ಹೊಸನಗರ ಕ್ಷೇತ್ರ ಪುನ: ಸ್ಥಾಪನೆ ಹೋರಾಟ ಸಮಿತಿಯ ಮನವಿ ಆಲಿಸಿ ನಂತರ ಆಶೀರ್ವದಿಸಿದರು.
ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಆಗ ಅದಕ್ಕೆ ಬಲ ಹೆಚ್ಚು ಅಂತಹ ಒಗ್ಗಟ್ಟಿನ ನಿಮ್ಮ ಪ್ರಯತ್ನ ನಮಗೆ ತುಂಬಾ ಸಂತಸವಾಗಿದೆ. ಎಲ್ಲರೂ ಒಂದಾಗಿ ಕ್ಷೇತ್ರದ ಉಳಿವಿಗಾಗಿ ಒಂದೇ ಮನಸ್ಸಿನಿಂದ ಮುಂದಿನ ಹೆಜ್ಜೆ ಇಡಿ, ಇಂದೇ ನಮ್ಮ ಬೆಂಬಲದ ಆಶೀರ್ವದ ನೀಡುತ್ತಿದ್ದೇವೆ ಎಂದ ಶ್ರೀಗಳು, 95 ವರ್ಷ ವಯಸ್ಸಿನ ಸ್ವಾಮಿರಾಯರಂತವರು ತಾಲೂಕಿನ ಹಿತದಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ನಿಜಕ್ಕೂ ಮಾದರಿಯಾದದ್ದು ಎಂದರು.
ಮಠದ ಶಾಸನತಂತ್ರದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ ಮಾತನಾಡಿ, ಮಹಾನಂದಿ ಎಂಬ ಗೋವಿನ ಕಾರಣದಿಂದ ಇಲ್ಲಿನ ಗೋಲೋಕ ವಿಶ್ವದಲ್ಲಿ ಮಾನ್ಯತೆ ಪಡೆಯುವಷ್ಟು ಬೆಳೆದು ನಿಂತಿದೆ. ಇದೇ ಸ್ಥಳದಲ್ಲಿ ವಿಶ್ವವನ್ನೇ ಇತ್ತ ತಿರುಗಿಸಿದ್ದ 'ವಿಶ್ವ ಗೋ ಸಮ್ಮೇಳನ' ನಡೆದಿತ್ತು. ಜಗತ್ತಿನ ವಿವಿಧ ಭಾಗಗಳ ಲಕ್ಷಾಂತರ ಜನರನ್ನು ಇತ್ತ ತಿರುಗಿಸಿದ ಹಾಗೂ ಲಕ್ಷಾಂತರ ಜನರಿಗೆ ಗೋಜಾಗೃತಿಯು ಮಹಾನಂದಿಯ ಕಾರಣದಿಂದ ಆಗಿದೆ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು ಸೋಪಾನಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿಯ ಧಾರ್ಮಿಕ ಕಾರ್ಯಕ್ರಮಗಳು, ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ ಸಮರ್ಪಣೆ ಪಾಂಚಜನ್ಯ ಸೇವೆ, ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಂಡಿತು. ಸಂಜೆ ಗೋದತ್ತು ಪಡೆದ 108 ದಾನಿಗಳೊಂದಿಗೆ ಸಂವಾದ, ಗೌರವ ಸಮ್ಮಾನ, ಗೋಪೂಜೆ, 1008 ಮಾತೆಯರಿಂದ ಗೋನೀರಾಜನ ಕಾರ್ಯಕ್ರಮ ನಡೆಯಿತು. ಗೋಲೋಕದ ಗೌರವಾಧ್ಯಕ್ಷ ಜಿ.ವಿ.ಹೆಗಡೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಡಾ. ಸೀತಾರಾಮ್ ಪ್ರಸಾದ್, ಡಾ.ಎಸ್.ಆರ್. ಹೆಗಡೆ, ಕೃಷ್ಣಪ್ರಸಾದ್ ಎಡಪ್ಪಾಡಿ ಮತ್ತಿತರರು ಇದ್ದರು.
ಹೊಸನಗರ ಕ್ಷೇತ್ರ ಹೋರಾಟ ಸಮಿತಿಯ ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮುಖಂಡ ಎನ್.ಆರ್.ದೇವಾನಂದ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ ಇದ್ದರು.

ನಾಳೆ ಹೊಸನಗರ ಪ್ರಧಾನಮಠದ ಪುನರ್ನಿರ್ಮಾಣಕ್ಕೆ ಶಿಲಾನ್ಯಾಸ:
ಹೊಸನಗರದ ಪ್ರಧಾನಮಠದ ಪುನರ್ನಿರ್ಮಾಣಕ್ಕೆ ನಾಳೆ ಶಿಲಾನ್ಯಾಸ ನೆರವೇರಲಿದ್ದು, ಸಹಸ್ರಮಾನದ ಐತಿಹಾಸಿಕ ಕ್ಷಣ ಇದಾಗಲಿದೆ. ಆದಿಗುರು ಶಂಕರಾಚಾರ್ಯರಿಂದ ಗೋಕರ್ಣದಲ್ಲಿ ಸಂಸ್ಥಾಪಿತವಾದ ಶ್ರೀರಾಮಚಂದ್ರಾಪುರಮಠವು, 12 ನೇ ಪೀಠಾಧಿಪತಿಗಳ ಕಾಲದಲ್ಲಿ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಸ್ಥಳಾಂತರವಾಯಿತು. ಅಲ್ಲಿಂದ ಇಲ್ಲಿಯವರೆಗೆ ಹಲವಾರು ಶತಮಾನಗಳ ಕಾಲದ ಇತಿಹಾಸವನ್ನು ಶ್ರೀಮಠವು ಹೊಂದಿದ್ದು, ಇದೀಗ ಪ್ರಧಾನಮಠದ ಪುನನಿರ್ಮಾಣದ ಮಹಾ ಮೂಹೂರ್ತ ಕೂಡಿ ಬಂದಿದೆ.
ಶರಾವತಿ ತೀರದ ಪ್ರಧಾನ ಮಠದ ಆವರಣದಲ್ಲಿ ಸಹಸ್ರಮಾನಗಳ ಕಾಲ ಉಳಿಯುವ ಶಾಶ್ವತ ಸಾಮಗ್ರಿಗಳಿಂದ ನಿರ್ಮಿಸಲ್ಪಡುವ ಶ್ರೀರಾಮ ಸಾನ್ನಿಧ್ಯದ ಮಹಾ ನಿರ್ಮಾಣಕ್ಕೆ ಸಕಲ ಸಿದ್ಧತೆಯಾಗಿದೆ. ಅಂತಹ ಶುಭಾರಂಭ ಫೆಬ್ರವರಿ 26 ರಂದು ನಡೆಯಲಿದೆ. ಈಗಾಗಲೆ ಈ ಪುಣ್ಯ ಸ್ಥಳದಲ್ಲಿ ಪೌರಾಣಿಕ ಪ್ರಸಿದ್ಧವಾಗಿರುವ ಚಂದ್ರಮೌಳೀಶ್ವರನ ಅತೀ ವಿಶಿಷ್ಟವಾದ ದೇಗುಲ ನಿರ್ಮಾಣವಾಗಿದೆ. ಅದರ ಸಮೀಪವೇ ಶ್ರೀರಾಮನ, ಶಾರದೆಯ, ಶ್ರೀ ನಿವಾಸದ ಸಮುಚ್ಚಯ ನಿರ್ಮಾಣಗೊಳ್ಳಲಿದೆ.
ಶಿರಸಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಶ್ರೀ ಮಾರಿಕಾಂಬಾ ದೇವಿ ರಥೋತ್ಸವ
ಫೆ 26 ರ ಬೆಳಗ್ಗೆ 9 ಗಂಟೆಗೆ ನ್ಯಾಸದ ಶಿಲಾ ಮೆರವಣಿಗೆ, 10 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮ, ಶ್ರೀಗುರುಪಾದಕಾ ಸ್ತೋತ್ರ ಸಮರ್ಪಣೆ, ಶ್ರೀರಾಮತಾರಕ ಜಪ, ಸಹಸ್ರಾಧಿಕ ಕುಂಕುಮಾರ್ಚನೆ, ಶತಾಧಿಕ ರುದ್ರಪಠಣಪೂರ್ವಕ ಅಭಿಷೇಕ, ಶತಾಧಿಕ ಶಾರದಾಷ್ಟಕ ಪಠಣ ನಡೆಯಲಿದೆ. 12 ಗಂಟೆಗೆ ಶಿಲಾನ್ಯಾಸ ನಂತರ ಧರ್ಮಸಭೆ, ಮುಷ್ಟಿ ದ್ರವ್ಯ ಸಮರ್ಪಣೆ, ಸಂಜೆ ಭಕ್ತಿಭಾವದ ದಿವ್ಯಾರತಿ ನಡೆಯಲಿದ್ದು ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದು ಮಠದ ಆಡಳಿತ ಮಂಡಳಿ ತಿಳಿಸಿದೆ.