Guarantee schemes: ಗ್ಯಾರಂಟಿ ಯೋಜನೆಗಳ ಲಕ್ಷಾಂತರ ಫಲಾನುಭವಿಗಳ ಕಡಿತ ಸರಿಯಲ್ಲ: ಬಿ.ವೈ. ವಿಜಯೇಂದ್ರ ಕಿಡಿ
BY Vijayendra: ರಾಜ್ಯದ ಕಾಂಗ್ರೆಸ್ ಸರ್ಕಾರವು ತಾನೇ ಘೋಷಿಸಿದ್ದ ಗ್ಯಾರಂಟಿಗಳ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುವುದಲ್ಲದೇ, ಮಾನದಂಡದ ಬದಲಾವಣೆಗಳನ್ನು ಸರ್ಕಾರವೇ ಕೈಗೆತ್ತಿಕೊಂಡಿದೆ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (ಸಂಗ್ರಹ ಚಿತ್ರ). -
ಶಿವಮೊಗ್ಗ, ಜೂ.15: ಈಗ ಗ್ಯಾರಂಟಿಗೆ ಹಣ ಹೊಂದಿಸಲು ಸಾಧ್ಯವಾಗದೇ ಫಲಾನುಭವಿಗಳ ಮೇಲೆ ಆರೋಪ ಮಾಡಿಕೊಂಡು ಲಕ್ಷಾಂತರ ಫಲಾನುಭವಿಗಳನ್ನು ಕಡಿತ ಮಾಡಲು ಹೊರಟದ್ದು ಖಂಡಿತ ಸರಿಯಲ್ಲ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದ್ದಾರೆ. ಮಾಧ್ಯಮಗಳ ಜತೆ ಸೋಮವಾರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ತಾನೇ ಘೋಷಿಸಿದ್ದ ಗ್ಯಾರಂಟಿಗಳ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ಕೊಡುವುದಲ್ಲದೇ, ಮಾನದಂಡದ ಬದಲಾವಣೆಗಳನ್ನು ಸರ್ಕಾರವೇ ಕೈಗೆತ್ತಿಕೊಂಡಿದೆ ಎಂದು ಟೀಕಿಸಿದರು.
ಗ್ಯಾರಂಟಿ ವಿಚಾರವಾಗಿ ಕೊಟ್ಟ ಮಾತಿನಂತೆ ನಡೆಯುವುದು ಈ ಸರ್ಕಾರದ ಆದ್ಯ ಕರ್ತವ್ಯ. ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲು ನಾವು ಹಿಂದಿನ ಮುಖ್ಯಮಂತ್ರಿಗಳ ಮುಂದೆ ಬೇಡಿಕೆ ಇಟ್ಟಿದ್ದೆವು. ಅದು ಆಗಲಿಲ್ಲ, ಈಗಲಾದರೂ ಆರ್ಥಿಕ ಪರಿಸ್ಥಿತಿ ಕುರಿತು ವಾಸ್ತವಿಕ ಸತ್ಯವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಮಾಡಬೇಕೆಂದು ಅವರು ಒತ್ತಾಯಿಸಿದರು.
ಒಂದೊಂದೇ ನೆಪ ಒಡ್ಡಿ ಕತ್ತರಿ ಹಾಕುವ ಕೆಲಸ
ಕಾಂಗ್ರೆಸ್ ಸರ್ಕಾರವು ಕುಂಟು ನೆಪ ಹುಡುಕುತ್ತಿದೆ. ಅದರ ಬದಲಾಗಿ ಅವರು ಬಹಿರಂಗ ಸತ್ಯವನ್ನು ಅವರು ಒಪ್ಪಿಕೊಳ್ಳಲಿ ಎಂದು ಆಗ್ರಹಿಸಿದರು. ಗ್ಯಾರಂಟಿಗಳ ಅನುಷ್ಠಾನ ಮಾಡಿ ಹಿಮಾಚಲ ಪ್ರದೇಶ ಸರ್ಕಾರ ಯಾವ ರೀತಿ ತೊಂದರೆಗೆ ಈಡಾಗಿದೆಯೋ, ತೆಲಂಗಾಣದಲ್ಲೂ ಕಾಂಗ್ರೆಸ್ ಸರ್ಕಾರ ಇದ್ದು, ಅಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲಾಗದ ಪರಿಸ್ಥಿತಿ ಹಿಮಾಚಲ ಪ್ರದೇಶ, ತೆಲಂಗಾಣದಲ್ಲಿದೆ. ನಮ್ಮ ರಾಜ್ಯದಲ್ಲೂ ಇದೇ ಪರಿಸ್ಥಿತಿಗೆ ಬಂದು ನಿಂತಿದೆ. ಈಗ ಒಂದೊಂದೇ ನೆಪ ಒಡ್ಡಿ ಕತ್ತರಿ ಹಾಕುವ ಕೆಲಸಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ ಎಂದು ಆರೋಪಿಸಿದರು.
ಗ್ಯಾರಂಟಿಗಳನ್ನು ಕೊಡಿ ಅಂತ ಚುನಾವಣೆ ವೇಳೆ ರಾಜ್ಯದ ಜನ ಕೇಳಿರಲಿಲ್ಲ. ಗ್ಯಾರಂಟಿಗಳಿಗೆ ಅವರು ಕೈ ಚಾಚಿರಲಿಲ್ಲ. ಇವರೇ ಘೋಷಣೆ ಮಾಡಿದರು. ಈಗ ಗ್ಯಾರಂಟಿ ಫಲಾನುಭವಿಗಳಿಗೆ ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಕೇಂದ್ರದಿಂದ ಅಗತ್ಯಕ್ಕಿಂತ ಹೆಚ್ಚೇ ರಸಗೊಬ್ಬರ ಪೂರೈಕೆ; ರಾಜ್ಯ ಸರ್ಕಾರವೇ ಸರಿ ವಿತರಿಸಿಲ್ಲ ಎಂದ ಜೋಶಿ
ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಾರೋ ಇಲ್ಲವೋ ಎಂಬುದೇ ದೊಡ್ಡ ಪ್ರಶ್ನೆ ಆಗಿತ್ತು. ಆದರೆ ಎಲ್ಲವನ್ನೂ ಸಮಾಧಾನಚಿತ್ತರಾಗಿ ಎದುರಿಸಿ ಡಿಕೆಶಿ ಅವರು ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಈ ಮೂರು ವರ್ಷವಂತೂ ಒಳ್ಳೆಯ ಆಡಳಿತ ಕೊಡಲಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡಲಿಲ್ಲ. ಇನ್ನು ಮುಂದಾದರೂ ಉತ್ತಮ ಆಡಳಿತ ನೀಡಲಿ ಎಂದು ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.