Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ- ಶ್ರೀ ಸಿದ್ದಲಿಂಗ ಸ್ವಾಮೀಜಿ
Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ. ಎಲ್ಲರೂ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುಬೇಕೆಂಬ ಕನಸು ಹೊತ್ತಿರುವ ಈ ಗುಣ ಇತರರಿಗೆ ಮಾದರಿ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.


ತುಮಕೂರು: ಯಮನ್ ದೇಶದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ಓರ್ವರನ್ನು ಅಲ್ಲಿನ ಸರ್ಕಾರ ಹಾಗೂ ಸಂತ್ರಸ್ಥ ಕುಟುಂಬದೊಂದಿಗೆ ಮಾತನಾಡಿ, ಗಲ್ಲು ಶಿಕ್ಷೆಯನ್ನು ಮುಂದೂಡುವ ಮೂಲಕ ಹೊಸ ಆಸೆ ಚಿಗುರುಡೆಯುವಂತೆ ಮಾಡಿದ ಡಾ.ಮೌಲಾ ಷರೀಫ್ ಅವರ ಕಾರ್ಯ ಶ್ಲಾಘನೀಯವಾದದ್ದು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಬಣ್ಣಿಸಿದ್ದಾರೆ. ತುಮಕೂರಿನ (Tumkur News) ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ. ಮೌಲಾ ಷರೀಫ್ ಅವರನ್ನು ಅಭಿನಂದಿಸಿ ಮಾತನಾಡಿದ ಶ್ರೀಗಳು, ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ. ಎಲ್ಲರೂ ಸಮಾಜದಲ್ಲಿ ಶಾಂತಿ, ನೆಮ್ಮದಿಯಿಂದ ಬದುಕುಬೇಕೆಂಬ ಕನಸು ಹೊತ್ತಿರುವ ಈ ಗುಣ ಇತರರಿಗೆ ಮಾದರಿ ಎಂದು ತಿಳಿಸಿದರು.
ಡಾ.ಮೌಲಾ ಷರೀಫ್ ಅವರು ಹಿಂದೂಸ್ತಾನ್ ಗೋಲ್ಡ್ ಕಂಪನಿಯ ಮಾಲೀಕರಾಗಿ ಸಮಾಜದಲ್ಲಿರುವ ಬಡವರು, ಅಶಕ್ತರು, ನಿರ್ಗತಿಕರಿಗೆ ಸಾಕಷ್ಟು ಸೇವೆಯನ್ನು ಒದಗಿಸುತ್ತಾ ಬಂದಿರುವುದು ಪ್ರಶಂಸನೀಯ. ಕಳೆದ ನಾಲ್ಕು ವರ್ಷಗಳ ಹಿಂದೆ ಶ್ರೀಮಠದ ಹಿರಿಯ ಶ್ರೀಗಳಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಅವರ ಪುಣ್ಯ ಸ್ಮರಣೆಯ ದಿನದಂದು ಹೆಲಿಕ್ಯಾಪ್ಟರ್ ಮೂಲಕ ಹೂವಿನ ಮಳೆ ಸುರಿಸುವ ಮೂಲಕ ಶ್ರೀಮಠದ ಭಕ್ತರ ಮೆಚ್ಚುಗೆ ಪಾತ್ರರಾದರು ಎಂದು ಹೇಳಿದರು.
ಯಮನ್ ದೇಶದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ನಿಮಿಷ ಎಂಬ ನರ್ಸ್ ಅವರ ಗಲ್ಲು ಶಿಕ್ಷೆ ರದ್ದು ಪಡಿಸಲು ಕೇಂದ್ರ ಸರ್ಕಾರ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಮನವಿ ಮಾಡಿದ್ದವು. ಆದರೆ ಡಾ.ಮೌಲಾ ಷರೀಫ್ ಅವರು ಖುದ್ದು ಯಮನ್ ದೇಶದಲ್ಲಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ, ಅವರು ಪ್ರಕರಣವನ್ನು ಕ್ಷಮಿಸುವಂತೆ ಮನವೊಲಿಸಿದ್ದಾರೆ. ಇದರಿಂದಾಗಿ ಅವರ ಮರಣದಂಡನೆ ಮುಂದೂಡಲಾಗಿದೆ. ಇದು ಎರಡು ದೇಶಗಳ ನಡುವಿನ ಬಾಂಧವ್ಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ನುಡಿದರು.
ಈ ಸುದ್ದಿಯನ್ನೂ ಓದಿ | IBPS Recruitment: ಬ್ಯಾಂಕ್ ಉದ್ಯೋಗಾರ್ಥಿಗಳಿಗೆ ಗುಡ್‌ನ್ಯೂಸ್; 6,215 ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ IBPS
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಮೌಲಾ ಷರೀಫ್, ಸಿದ್ಧಗಂಗಾ ಮಠದಲ್ಲಿ ಒಂದು ದಿವ್ಯ ಶಕ್ತಿ ಇದೆ. ಇಲ್ಲಿಗೆ ಬರುವ ವ್ಯಕ್ತಿ ಆರಂಭದಲ್ಲಿ ಹಾವಾಗಿದ್ದರೂ, ಹೊರಗೆ ಹೋಗುವ ಹೊತ್ತಿಗೆ ಹೂವಾಗಿ ಮರುಳುವುದನ್ನು ಕಾಣಬಹುದು. ಭಾರತೀಯ ಸಂಸ್ಕೃತಿಯಲ್ಲಿ ಸ್ವರ್ಗ, ನರಕಗಳ ಪರಿಕಲ್ಪನೆಯಿದೆ. ಕಲಿಯುಗದ ನಿಜವಾದ ಸ್ವರ್ಗ ಎಂದರೆ ಅದು ಸಿದ್ದಗಂಗಾ ಮಠ. ನನ್ನೆಲ್ಲಾ ಸಮಾಜ ಸೇವೆಗೆ ಸಿದ್ಧಗಂಗಾ ಮಠವೂ ಕಾರಣ ಎಂದು ತಿಳಿಸಿದರು.