ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಭಿವೃದ್ಧಿ ಕಾಮಗಾರಿಗಳ ಜೊತೆ ಶಾಲೆಗಳ ಭೇಟಿ ನಮ್ಮ ಜವಾಬ್ದಾರಿ: ಶಾಸಕ ಸಿ.ಬಿ. ಸುರೇಶ್‌ಬಾಬು

ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳೇ ಕಾರಣ. ಈ ವರ್ಷವೂ ರಾಜ್ಯ ಮಟ್ಟದಲ್ಲಿ ನಮ್ಮ ತಾಲ್ಲೂಕಿನ ಹೆಸರು ಫಲಿತಾಂಶದಲ್ಲಿ ಬರಬೇಕು ಎಂಬ ಉದ್ದೇಶದಿಂದ ಪ್ರತಿ ಭಾನುವಾರ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗಿದೆ.

ಅಭಿವೃದ್ಧಿ ಕಾಮಗಾರಿಗಳ ಜೊತೆ ಶಾಲೆಗಳ ಭೇಟಿ ನಮ್ಮ ಜವಾಬ್ದಾರಿ

Profile Ashok Nayak Jul 18, 2025 12:08 AM

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನಾದ್ಯಂತ 1.40 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಕಾಮಗಾರಿ ಗಳು ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ಸೊರಲಮಾವು ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಅಭಿವೃದ್ಧಿ ಕಾರ್ಯಗಳ ನಡುವೆಯೂ ಶಾಲೆಗಳಿಗೆ ಭೇಟಿ ನೀಡುವುದು ತಮ್ಮ ಜವಾಬ್ದಾರಿ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ಹೇಳಿದ್ದಾರೆ.

ತಾಲ್ಲೂಕಿನ ಬೆಳಗುಲಿ ಪ್ರೌಢಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳೇ ಕಾರಣ. ಈ ವರ್ಷವೂ ರಾಜ್ಯ ಮಟ್ಟದಲ್ಲಿ ನಮ್ಮ ತಾಲ್ಲೂಕಿನ ಹೆಸರು ಫಲಿತಾಂಶದಲ್ಲಿ ಬರಬೇಕು ಎಂಬ ಉದ್ದೇಶದಿಂದ ಪ್ರತಿ ಭಾನುವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ: KG Halli-DJ Halli Case: ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣದ ಪ್ರಮುಖ ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

ತಾಲ್ಲೂಕಿನಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಎಂಬ ಭೇದಭಾವವಿಲ್ಲದೆ, ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೂ ನಮ್ಮಲ್ಲಿರುವ ಶಿಕ್ಷಕರನ್ನೇ ಬಳಸಿಕೊಂಡು ನಿರಂತರವಾಗಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಪರೀಕ್ಷೆಯ ಭಯ ದೂರವಾಗಿ, ದೃಢತೆ ಮೂಡಿ ಕಲಿಕೆಯಲ್ಲಿ ತೊಡಗುವಂತೆ ಮಾಡಲಾಗುತ್ತಿದೆ. ಈ ವರ್ಷವೂ ನಮ್ಮ ತಾಲ್ಲೂಕು ಉತ್ತಮ ಫಲಿತಾಂಶ ಪಡೆಯುತ್ತದೆ ಎಂಬ ವಿಶ್ವಾಸವಿದೆ ಎಂದು ಶಾಸಕರು ನುಡಿದರು.

ವಿವಿಧ ತಾಂಡಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ:

ಶಾಸಕರು ಇಂದು ತಾಲ್ಲೂಕಿನ ಹಂದನಕೆರೆ ಹೋಬಳಿ ಹಾಗೂ ಹುಳಿಯಾರು ಹೋಬಳಿಯ ಹಲವು ತಾಂಡಗಳಲ್ಲಿ ಒಟ್ಟು 1.40 ಕೋಟಿ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಕಾಮಗಾರಿಗಳು ಮಲ್ಲೇನಹಳ್ಳಿ ತಾಂಡ್ಯ, ಟಿ.ತಾಂಡ್ಯ, ನಿರುವಗಲ್ ಕಾಲೋನಿ, ಬೆಳಗುಲಿ ಕಾಲೋನಿ, ಎಂ.ಹೆಚ್.ಕಾಲೋನಿ, ಬೈರಾಪುರ ಕೋಡಿತಾಂಡ್ಯ, ಚಿಕ್ಕಬಿದರೆ ರಾಮನಾಯ್ಕ ತಾಂಡ್ಯ, ಸೋಮನಹಳ್ಳಿ ತಾಂಡ್ಯ, ನಾನ್ಯಾನಾಯ್ಕನ ತಾಂಡ್ಯ, ಬಾದಿಹಟ್ಟಿ, ಉಮ್ಲಾನಾಯ್ಕನ ತಾಂಡ್ಯ, ಮರೆನಡು ಪಾಳ್ಯ, ದಬ್ಬಗುಂಟೆ ಬೋವಿಕಾಲೋನಿಗಳಲ್ಲಿ ನಡೆಯಲಿವೆ. ಜೊತೆಗೆ, 20 ಲಕ್ಷ ರೂ. ವೆಚ್ಚದಲ್ಲಿ ಸೊರಲಮಾವು ಗ್ರಾಮದ ಸ್ಮಶಾನ ಅಭಿವೃದ್ಧಿಗೂ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಈ ಅಭಿವೃದ್ಧಿ ಕಾರ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಬಿಇಒ ಕಾಂತರಾಜು, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ದಬ್ಬಗುಂಟೆ ರವಿಕುಮಾರ್, ನಿರ್ದೇಶಕ ರಾಮಚಂದ್ರಯ್ಯ, ಮಾಜಿ ಜಿ.ಪಂ. ಸದಸ್ಯೆ ಲೋಹಿತಾಬಾಯಿ, ಮಾಜಿ ತಾ.ಪಂ. ಅಧ್ಯಕ್ಷೆ ಚೇತನಾ ಗಂಗಾಧರ್ ಸೇರಿದಂತೆ ಮುಖಂಡರಾದ ಮರಿಯಪ್ಪ ಹಾಗೂ ಸ್ಥಳೀಯ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.