ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿ ಸೋರಿಕೆ: ಅಲಿಫ್ ಇಸ್ಲಾಂನನ್ನು ಇಡುಕ್ಕಿಯಲ್ಲಿ ಬಂಧಿಸಿದ ಉಡುಪಿ ಪೊಲೀಸರು

Indian Navy information leak case: ಉಡುಪಿ ಪೊಲೀಸರು ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯ ಸೋರಿಕೆ ಆರೋಪ ಸಂಬಂಧ ನಾಲ್ಕನೇ ಶಂಕಿತನನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಡಿಜಿಟಲ್ ಸಾಕ್ಷ್ಯಗಳು ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆ ಮುಂದುವರಿದಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ.

ನೌಕಾಪಡೆಯ ಸೂಕ್ಷ್ಮ ಮಾಹಿತಿ ಹಂಚಿಕೊಂಡ ವ್ಯಕ್ತಿಯ ಬಂಧನ

ಸಾಂದರ್ಭಿಕ ಚಿತ್ರ -

Priyanka P
Priyanka P Feb 18, 2026 6:02 PM

ಉಡುಪಿ, ಫೆ. 18: ಭಾರತೀಯ ನೌಕಾಪಡೆಯ (Indian Navy) ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಗೆ ವರ್ಗಾಯಿಸಿದ ಆರೋಪದಡಿ ಉಡುಪಿ (Udupi) ಜಿಲ್ಲೆಯ ಪೊಲೀಸರು ನಾಲ್ಕನೇ ಶಂಕಿತನನ್ನು ಬಂಧಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಮಲ್ಪೆ (Malpe) ಬಂದರಿನ ಹಡಗು ನಿರ್ಮಾಣ ಘಟಕಕ್ಕೆ ಸಂಬಂಧಿಸಿದ ಉದ್ಯೋಗಿಯನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳದ 21 ವರ್ಷದ ಅಲಿಫ್ ಇಸ್ಲಾಂ ಎಂದು ಗುರುತಿಸಲಾಗಿದ್ದು, ಆತನನ್ನು ಕೇರಳದ ಇಡುಕ್ಕಿ ಜಿಲ್ಲೆಯ ಮರಯೂರ್ ಗ್ರಾಮದಲ್ಲಿ ಬಂಧಿಸಲಾಗಿದೆ.

ವಿದೇಶಿ ಸಂಪರ್ಕದ ಅನುಮಾನಗಳ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಆತನ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಒಂದು ಘಟಕಕ್ಕೆ ಸಂಬಂಧಿಸಿದ ಕೆಲವರು ವಾಟ್ಸ್ಆ್ಯಪ್‌ ಮತ್ತು ಫೇಸ್‌ಬುಕ್ ಮೂಲಕ ಗೌಪ್ಯ ನೌಕಾಪಡೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬ ಆರೋಪಗಳು ಹೊರಬಂದ ನಂತರ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋರಿಕೆಯಾದ ಮಾಹಿತಿಯಲ್ಲಿ ಹಡಗು ಗುರುತಿನ ಸಂಖ್ಯೆ ಮತ್ತು ಸೂಕ್ಷ್ಮವೆಂದು ಪರಿಗಣಿಸಲಾದ ಇತರ ತಾಂತ್ರಿಕ ವಿವರಗಳು ಸೇರಿವೆ ಎಂದು ಹೇಳಲಾಗಿದೆ.

ಭಾರತ-ಪಾಕಿಸ್ತಾನ ಗಡಿ ಬೇಲಿ ಮೇಲೆ ಖಾಲಿ ಗಾಜಿನ ಬಾಟಲಿ ಯಾಕಿಟ್ಟಿದ್ದಾರೆ ಗೊತ್ತಾ?

ಅಲಿಫ್ ಇಸ್ಲಾಂನ ಬಂಧನದ ನಂತರ ತನಿಖೆ ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಉಡುಪಿ ಉಪ ಪೊಲೀಸ್ ವರಿಷ್ಠಾಧಿಕಾರಿ ಡಿ.ಟಿ. ಪ್ರಭು ಹೇಳಿದ್ದಾರೆ. ʼʼನಾಲ್ಕನೇ ಆರೋಪಿಯನ್ನು ಬಂಧಿಸಿದ ನಂತರ ಡಿಜಿಟಲ್ ಸುಳಿವುಗಳು ಹಾಗೂ ಹಣಕಾಸು ವ್ಯವಹಾರಗಳನ್ನು ನಾವು ಸಮಗ್ರವಾಗಿ ಪರಿಶೀಲಿಸುತ್ತಿದ್ದೇವೆ. ತನಿಖೆ ಈಗ ಅತ್ಯಂತ ನಿರ್ಣಾಯಕ ಹಂತದಲ್ಲಿದ್ದು, ಕೇಂದ್ರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆʼʼ ಎಂದು ಅವರು ತಿಳಿಸಿದ್ದಾರೆ.

ಸಮಗ್ರ ಪರಿಶೀಲನೆ

ಬಂಧಿತರ ಮೊಬೈಲ್ ಫೋನ್‌ಗಳು ಹಾಗೂ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. 2025ರ ಕೊನೆಯಲ್ಲಿ ಬಂಧಿಸಲಾದ ಇತರ ಮೂವರು ಶಂಕಿತರನ್ನು ಗುಜರಾತ್‌ನ ಹಿರೇಂದ್ರ ಕುಮಾರ್ ಮತ್ತು ಉತ್ತರ ಪ್ರದೇಶದ ರೋಹಿತ್ ಮತ್ತು ಸಾಂತ್ರಿ ಎಂದು ಗುರುತಿಸಲಾಗಿದೆ. ಬಂಧನದ ಸಮಯದಲ್ಲಿ ರೋಹಿತ್ ಮತ್ತು ಸಾಂತ್ರಿ ಖಾಸಗಿ ಗುತ್ತಿಗೆದಾರರ ಮೂಲಕ ಮಲ್ಪೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳು ಭಾರತದ ಹೊರಗಿನ ವ್ಯಕ್ತಿಗಳೊಂದಿಗೆ ನೇರ ಸಂಪರ್ಕದಲ್ಲಿ ಇದ್ದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆದರೆ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದರೆ? ಅಥವಾ ದೊಡ್ಡ ಜಾಲದ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದರೆ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತಕ್ಕೆ ಮಾದಕ ವಸ್ತು, ಶಸ್ತ್ರಾಸ್ತ್ರ ಸಾಗಿಸಲು ತಂತ್ರಜ್ಞಾನದ ಮೊರೆ ಹೋದ ಪಾಕಿಸ್ತಾನ; ಡ್ರೋನ್‌ ವ್ಯಾಪಕ ಬಳಕೆ

ಕೇರಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕೊಚ್ಚಿನ್ ಶಿಪ್‌ಯಾರ್ಡ್, ಭಾರತೀಯ ನೌಕಾಪಡೆಗೆ ಟಗ್‌ಬೋಟ್‌ಗಳು ಮತ್ತು ಖಾಸಗಿಯವರಿಗೂ ಹಡಗುಗಳನ್ನು ನಿರ್ಮಿಸುತ್ತದೆ. ಕಂಪನಿಯು ಕರ್ನಾಟಕದ ಮಲ್ಪೆಯಲ್ಲಿ ಒಂದು ಘಟಕವನ್ನು ನಿರ್ವಹಿಸುತ್ತದೆ.

ಆಗ್ರಾದಲ್ಲಿ ಪಾಕಿಸ್ತಾನ ಬಲೂನ್ ಪತ್ತೆ

ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೆಸರಿರುವ ಬಲೂನ್ ಆಗ್ರಾದ ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದೊಳಗೆ ಇತ್ತೀಚೆಗೆ ಪತ್ತೆಯಾಗಿತ್ತು. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದರಲ್ಲಿ ಯಾವುದೇ ಸಾಧನ ಅಥವಾ ವಿಷಕಾರಿ ವಸ್ತು ಪತ್ತೆಯಾಗಿಲ್ಲ. ಆದರೂ ಇದು ಇಲ್ಲಿಗೆ ಹೇಗೆ ಮತ್ತು ಯಾಕೆ ಬಂತು ಎನ್ನುವ ಕುರಿತು ತೀವ್ರ ತನಿಖೆಯನ್ನು ನಡೆಸಲಾಗುತ್ತಿದೆ. ಇದೇ ರೀತಿಯ ಹಲವು ಘಟನೆಗಳು ಗಡಿ ನಿಯಂತ್ರಣ ರೇಖೆಯ ಬಳಿ ಕಳೆದ ಕೆಲವು ತಿಂಗಳಿನಿಂದ ಹಲವು ಬಾರಿ ನಡೆದಿದ್ದು, ಇದನ್ನು ಭಾರತೀಯ ಸೇನೆಯು ಗಂಭೀರವಾಗಿ ಪರಿಗಣಿಸಿದೆ.