Bhatkal Tragedy: ಭಟ್ಕಳದ ತಟ್ಟಿಹಕ್ಕಲ ನದಿ ದುರಂತ; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪವಿರುವ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಲು ತೆರಳಿದ್ದ ವೇಳೆ, ನೀರಿನಲ್ಲಿ ಮುಳುಗಿ 11 ಮಂದಿ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಭಟ್ಕಳದ ತಾಲೂಕಿನ ಶಿರಾಲಿ ಸಮೀಪದ ತಟ್ಟಿಹಕ್ಕಲ ಕಳಿನಟ್ಟಿ ನದಿ. -
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಮೀಪದ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ನಡೆದ ದುರಂತದಲ್ಲಿ (Bhatkal Tragedy) ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಕಪ್ಪೆಚಿಪ್ಪು (ಚಪ್ಪೆಕಲ್ಲು) ಆರಿಸಲು ಒಟ್ಟು 14 ಮಂದಿ ನದಿಗೆ ಇಳಿದಿದ್ದ ವೇಳೆ ನೀರಿನ ರಭಸಕ್ಕೆ ಸಿಲುಕಿ ಮುಳುಗಿದ್ದರು. ಈ ಪೈಕಿ ಮೊದಲಿಗೆ 8 ಮಂದಿ ಶವ ಪತ್ತೆಯಾಗಿತ್ತು, ಇದೀಗ ನಾಪತ್ತೆಯಾಗಿದ್ದ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬರು ಕಣ್ಮರೆಯಾಗಿದ್ದಾರೆ.
ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪವಿರುವ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಈ ದುರಂತ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ನದಿಯಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಲು ತೆರಳಿದ್ದರು. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿತ್ತು. ಇದರೊಂದಿಗೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದರಿಂದ ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ನೀರಿನ ರಭಸಕ್ಕೆ ಸಿಲುಕಿ ಇವರೆಲ್ಲರೂ ಮುಳುಗಿ ದುರಂತ ಸಂಭವಿಸಿದೆ.
ಭಟ್ಕಳ ನದಿ ದುರಂತ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ನದಿಯಲ್ಲಿ ಮುಳುಗಿ ಮೃತಪಟ್ಟವರೆಲ್ಲರ ಮೃತದೇಹಗಳನ್ನು ಅಳ್ವೆಕೋಡಿ ಬಳಿ ಪತ್ತೆಹಚ್ಚಿ ಹೊರತೆಗೆಯಲಾಗಿದೆ. ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49) , ಜ್ಯೋತಿ ನಾಗಪ್ಪ ನಾಯ್ಕ (34) , ಮಾಲತಿ ನಾಯ್ಕ (38), ಮಾಸ್ತಮ್ಮ ನಾಯ್ಕ ಸೇರಿ 11 ಮಂದಿ ಮೃತರು. ಘಟನೆಯಲ್ಲಿ ಮೂವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.