ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೇಡ್ತಿ-ವರದಾ ನದಿ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡಿ; ಡಿಸಿಎಂ ಡಿಕೆಶಿಗೆ ಮನವಿ ಸಲ್ಲಿಕೆ

ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡುವಂತೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ್ ಹೆಗಡೆ ಅಶೀಸರ ನೇತೃತ್ವದ ನಿಯೋಗದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.

ಬೇಡ್ತಿ-ವರದಾ ನದಿ, ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆ ಕೈಬಿಡಿ

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಕೆ. -

Prabhakara R
Prabhakara R Mar 16, 2026 11:25 PM

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದಿಂದ ಕೈಗೆತ್ತಿಕೊಳ್ಳಲು ಪ್ರಸ್ತಾಪಿತವಾಗಿರುವ ಬೇಡ್ತಿ-ಹಿರೇವಡ್ಡಟ್ಟಿ (ಬೇಡ್ತಿ- ವರದಾ) ನದಿ ಜೋಡಣೆ ಯೋಜನೆ (Bedti - Varada link project) ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು (Aghanashini–Vedavathi project ) ಕೈಬಿಡುವಂತೆ ಕೋರಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಮನವಿ ಸಲ್ಲಿಸಲಾಗಿದೆ.

ಸಮಿತಿ ಅಧ್ಯಕ್ಷ ಅನಂತ್ ಹೆಗಡೆ ಅಶೀಸರ ನೇತೃತ್ವದ ನಿಯೋಗದಿಂದ ರಾಜ್ಯ ಸರ್ಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಗಿದ್ದು, ಈ ವೇಳೆ ಸಚಿವ ಮಂಕಾಳ್ ವೈದ್ಯ, ಶಾಸಕರಾದ ಶಿವರಾಮ್ ಹೆಬ್ಬಾರ್, ಭೀಮಣ್ಣ ನಾಯ್ಕ, ದಿನಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮನವಿ ಪತ್ರದಲ್ಲಿ ಏನಿದೆ?

ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲು ಪ್ರಸ್ತಾಪಿಸಿರುವ ಬೇಡ್ತಿ-ಹಿರೇವಡ್ಡಟ್ಟಿ (ಬೇಡ್ತಿ-ವರದಾ) ನದಿ ಜೋಡಣೆ ಯೋಜನೆ ಹಾಗೂ ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡುವಂತೆ ಕೋರಿ ತಮಗೆ ಈ ಮನವಿಯನ್ನು ಸಲ್ಲಿಸುತ್ತಿದ್ದೇವೆ.

ತಮಗೆ ಈಗಾಗಲೇ, ಮೇಲ್ಕಂಡ ಯೋಜನೆಗಳಿಗೆ ಸಂಬಂಧಿಸಿದ ಪ್ರಾಥಮಿಕ ಸಾಧ್ಯತಾ ವರದಿಗಳು (Pre-Feasibility Reports-PFRs) ಸಲ್ಲಿಕೆಯಾಗಿದೆ. ಈ ಯೋಜನೆಗಳನ್ನು ಹಮ್ಮಿಕೊಳ್ಳುವಾಗ ಅಣೆಕಟ್ಟುಗಳ ನಿರ್ಮಾಣ, ವ್ಯಾಪಕ ಕಾಲುವೆ ಜಾಲಗಳು, ಸುರಂಗ ಮಾರ್ಗಗಳು, ಪೈಪ್‌ಲೈನ್‌ಗಳು, ಪಂಪ್-ಹೌಸ್‌ಗಳು, ವಿದ್ಯುತ್ ಪ್ರಸರಣ ಮಾರ್ಗಗಳು ಮತ್ತು ಸೇವಾರಸ್ತೆಗಳನ್ನು ನಿರ್ಮಿಸಬೇಕಾಗುತ್ತದೆ. ಇಂತಹ ದೊಡ್ಡ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಇಲ್ಲಿನ ಗುಡ್ಡ-ಕಣಿವೆಗಳ ಪ್ರದೇಶದಲ್ಲಿ ವ್ಯಾಪಕವಾಗಿ ಗುಡ್ಡ ಕತ್ತರಿಸುವ ಮತ್ತು ಅರಣ್ಯ ನಾಶಮಾಡುವ ಕಾಮಗಾರಿ ಹಮ್ಮಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಇಲ್ಲಿನ ಸೂಕ್ಷ್ಮ ಪರಿಸರವು ಗಂಭೀರವಾಗಿ ಹಾನಿಗೊಳ್ಳುವುದು ಹಾಗೂ ದೀರ್ಘಕಾಲಿಕ ಅಪಾಯಗಳು ಸಂಭವಿಸಲಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಳೆದ ಎಂಟು ತಿಂಗಳುಗಳಿಂದ ಈ ಯೋಜನೆಗಳಿಗೆ ವ್ಯಾಪಕ ಮತ್ತು ನಿರಂತರ ಸಾರ್ವಜನಿಕ ವಿರೋಧ ವ್ಯಕ್ತವಾಗುತ್ತಿದೆ. ಜನಪ್ರತಿನಿಧಿಗಳು, ಪೂಜ್ಯ ಮಠಾಧೀಶರು, ವಿವಿಧ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯತಗಳು, ವಿವಿಧ ಸಮಾಜಗಳ ಮುಖಂಡರು, ಮಹಿಳೆಯರು ಸೇರಿದಂತೆ 25000ಜನರು ಸಮಾವೇಶ ನಡೆಸಿ ಈ ಮೇಲಿನ ಮಾರಕ ಯೋಜನೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಯೋಜನೆಗಳ ವಿವರವಾದ ಪರಿಶೀಲನೆ ಮಾಡಿದಾಗ ಅವು ಜಲಶಾಸ್ತ್ರೀಯ ದೃಷ್ಟಿಯಿಂದ ಸಮರ್ಥವಾಗಿಲ್ಲ ಹಾಗೂ ಪರಿಸರದ ದೃಷ್ಟಿಯಿಂದ ಸೂಕ್ತವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬೇಡ್ತಿನದಿ ಪ್ರವಾಹ ಪ್ರದೇಶದಲ್ಲಿ ವಾರ್ಷಿಕ ಮಳೆಯ ಸುಮಾರು 70-80 ಶೇಕಡಾ ಮಳೆ ಕೇವಲ ಮೂರು ತಿಂಗಳ (ಜುಲೈ- ಸೆಪ್ಟೆಂಬರ್) ಮಳೆಯ ಕಾಲದಲ್ಲೇ ಬೀಳುತ್ತದೆ. ಉಳಿದ ಒಂಬತ್ತು ತಿಂಗಳ ಅವಧಿಯಲ್ಲಿ ನದಿಯಲ್ಲಿ ನೀರಿನ ಅಪಾರ ಕೊರತೆ ಕಂಡುಬರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ "ಹೆಚ್ಚುವರಿ ನೀರು ಲಭ್ಯವಿದೆ" ಎಂಬ ಊಹೆ ವಾಸ್ತವಿಕತೆಗೆ ದೂರವಾದದ್ದು. ನದಿಯಲ್ಲಿರಬೇಕಾದ ಕನಿಷ್ಠ ಹರಿವು" (Ecological Flow) ಇನ್ನಷ್ಟು ಕಡಿಮೆಯಾದರೆ, ಸ್ಥಳೀಯ ಜನತೆಗೆ ನೀರಿನ ಕೊರತೆ ಹೆಚ್ಚುವುದರ ಜೊತೆಗೆ ನದಿ ಪರಿಸರದ ವ್ಯವಸ್ಥೆಗೆ ಸಂಪೂರ್ಣ ಹಾನಿ ಉಂಟಾಗಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ನೀಡಿದ್ದಾರೆ.

ಈ ಯೋಜನೆಗಳು ಜಾಗತಿಕ ಮಾನ್ಯತೆಯಿರುವ ಜೀವವೈವಿಧ್ಯತೆಯ ಹಾಟ್‌ಸ್ಪಾಟ್ ಪ್ರದೇಶವಾಗಿರುವ ಪಶ್ಚಿಮಘಟ್ಟದ ಅಮೂಲ್ಯ ಜೀವವೈವಿಧ್ಯತೆಯ ನಾಶಕ್ಕೂ ಎಡೆಮಾಡಿಕೊಡುತ್ತದೆ. ವ್ಯಾಪಕ ಅರಣ್ಯನಾಶ ಮತ್ತು ವಾಸಸ್ಥಾನಗಳ ತುಂಡಾಗುವಿಕೆ ಪ್ರಕ್ರಿಯೆಯಿಂದ (Habitat Fragmentation) ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ. ಇದರಿಂದ ಕಾಡುಪ್ರಾಣಿಗಳು ಕೃಷಿ ಭೂಮಿಗಳಲ್ಲಿ. ತೋಟಗಳಲ್ಲಿ ಮತ್ತು ವಾಸಸ್ಥಾನ ಪ್ರದೇಶಗಳಲ್ಲಿ ಪ್ರವೇಶಿಸುವ ಘಟನೆಗಳು ಇನ್ನಷ್ಟು ಹೆಚ್ಚಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಮಳೆಗಾಲದಲ್ಲಿ ಭೂಕುಸಿತಗಳು (Landslides) ಹೆಚ್ಚಾಗಿ ಸಂಭವಿಸುತ್ತಿದ್ದು, ಈ ಯೋಜನೆಗಳ ಅನುಷ್ಠಾನದಿಂದ ಈ ಬಗೆಯ ಭೂಕುಸಿತಗಳ ಪ್ರಮಾಣ ಮತ್ತು ತೀವ್ರತೆ ಮತ್ತಷ್ಟು ಹೆಚ್ಚಲಿದೆ.

ಬೇಡ್ತಿ ಮತ್ತು ಅಘನಾಶಿನಿ ನದಿಗಳ ಕಣಿವೆ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ರೈತರು. ಸಣ್ಣಕೃಷಿಕರು. ಪಶುಪಾಲಕರು, ಅರಣ್ಯಾಧಾರಿತ ಸಮುದಾಯಗಳು ಹಾಗೂ ಪರಂಪರೆಯ ಸಮುದಾಯಗಳಾದ ಗೌಳಿ, ಸಿದ್ದಿ, ಒಕ್ಕಲಿಗ, ಕುಣಬಿ ಮತ್ತು ಹಾಲಕ್ಕಿ ಸಮುದಾಯಗಳ ಜೀವನೋಪಾಯ ಗಂಭೀರವಾಗಿ ಹಾನಿಗೊಳಗಾಗುತ್ತದೆ. ನದಿಗಳಲ್ಲಿ ಸಿಹಿನೀರಿನ ಹರಿವು ಕಡಿಮೆಯಾದರೆ, ಕರವಾಳಿ ಪ್ರದೇಶದಲ್ಲಿ ಸಮುದ್ರದ ಉಪ್ಪುನೀರು ಒಳಪ್ರದೇಶದ ನದಿಗಳಳಲ್ಲಿ ನುಗ್ಗುವ ಅಪಾಯವಿದ್ದು, ಇದರಿಂದ ಕುಡಿಯುವ ನೀರು ಮತ್ತು ನೀರಾವರಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯನ್ನು ವಿಜ್ಞಾನಿಗಳು ಗುರುತಿಸಿದ್ದಾರೆ.

ಇದರಿಂದ. ಕರಾವಳಿ ಹಾಗೂ ನದಿಮುಖ ಪ್ರದೇಶಗಳ ಪರಿಸರ ವ್ಯವಸ್ಥೆಗಳು ಹಾನಿಗೊಳಗಾಗುತ್ತವೆ: ಮೀನು ಸಂಕುಲಗಳು ವಂಶಾಭಿವೃದ್ಧಿಯಾಗುವ ಅಳವೆಗಳಂಥ ಆವಸಸ್ಥಾನಗಳು ಹಾಳಾಗುತ್ತವೆ: ಮೀನು ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಪರಂಪರೆಯ ಮೀನುಗಾರರ ಸಮುದಾಯಗಳು ಗಂಭೀರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.

ಈ ಎಲ್ಲ ವಿಷಯಗಳ ಕುರಿತಂತೆ ವಿಷಯತಜ್ಞರು ತಯಾರಿಸಿದ ವೈಜ್ಞಾನಿಕ ಅಧ್ಯಯನಗಳು ಮತ್ತು ಪರಿಣಿತರ ಅಭಿಪ್ರಾಯಗಳನ್ನು ಒಳಗೊಂಡ ಸಮಗ್ರ ವರದಿಯನ್ನು ನಿಮ್ಮ ಗಮನಕ್ಕಾಗಿ ಈ ಪತ್ರದ ಜೊತೆ ಲಗತ್ತಿಸಿದ್ದೇವೆ. ಈ ಹಿನ್ನೆಲೆಯಲ್ಲಿ, ಈ ಯೋಜನೆಗಳನ್ನು ವಿರೋಧಿಸಿ ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರದ ಮಾನ್ಯ ಜಲಶಕ್ತಿ ಸಚಿವರಿಗೆ ನಾವು ಈಗಾಗಲೇ ಅಧಿಕೃತ ಮನವಿಗಳನ್ನು ಸಲ್ಲಿಸಿರುವದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ.

ಅಮನಿ ಕೆರೆ ತೋಟಿ ಏತ ನೀರಾವರಿ ಯೋಜನೆ; ರೈತರಿಗೆ ಶೀಘ್ರವೇ ಪರಿಹಾರ ನೀಡುತ್ತೇವೆ ಎಂದ ಡಿ.ಕೆ. ಶಿವಕುಮಾರ್

ಹೀಗಾಗಿ, ಮೇಲೆ ಸೂಚಿಸಿದ ಪರಿಸರ, ಜಲಶಾಸ್ತ್ರೀಯ, ಸಾಮಾಜಿಕ ಮತ್ತು ಜೀವನೋಪಾಯ ಸಂಬಂಧಿತ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿ. ಪಶ್ಚಿಮಘಟ್ಟದ ಸೂಕ್ಷ್ಮಪರಿಸರ ವ್ಯವಸ್ಥೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂರು ಲಕ್ಷ ಹಳ್ಳಿಗಾಡು ಕುಟುಂಬಗಳ ಜೀವನಭದ್ರತೆಗೆ ಗಂಭೀರ ಅಪಾಯ ಉಂಟುಮಾಡುವ ಈ ಪ್ರಸ್ತಾಪಿತ ಬೇಡ್ತಿ-ಹಿರೇವಡ್ಡಟ್ಟ (ಬೇಡ್ತಿ-ವರದಾ) ಮತ್ತು ಅಘನಾಶಿನಿ-ವೇದಾವತಿ ನದಿ ಸಂಪರ್ಕ ಯೋಜನೆಗಳನ್ನು ಸಂಪೂರ್ಣವಾಗಿ ಕೈಬಿಡುವಂತೆ ವಿನಂತಿಸುತ್ತೇವೆ. ಜೊತೆಗೆ. ಈ ಬೇಡ್ತಿ-ಹಿರೇವಡ್ಡಟ್ಟಿ (ಬೇಡ್ತಿ-ವರದಾ) ಯೋಜನೆಗೆ ಸಂಬಂಧಿಸಿ "ವಿವರವಾದ ಯೋಜನಾ ವರದಿ" (Detailed Project Report-DPR) ತಯಾರಿಸಲು ಕೈಗೊಂಡಿರುವ ನಿರ್ಣಯವನ್ನು ಸರ್ಕಾರ ಕೈಬಿಡಬೇಕು ಹಾಗೂ ಈ ನಿಟ್ಟಿನಲ್ಲಿ ಮುಂದೆ ಹಮ್ಮಿಕೊಳ್ಳಲು ಉದ್ದೇಶಿಸಿರುವ ಎಲ್ಲ ಸಮೀಕ್ಷೆ ಹಾಗೂ ಅಧ್ಯಯನ ಕಾರ್ಯಗಳನ್ನು ಸ್ಥಗಿತಗೊಳಿಸಲು ದಯವಿಟ್ಟು ಕ್ರಮ ಕೈಗೊಳ್ಳುವಂತೆ ಕೋರುತ್ತೇವೆ ಎಂದು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಮನವಿ ಪತ್ರದಲ್ಲಿ ತಿಳಿಸಿದೆ.