Sadhana Samavesha: ನಾಳೆ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ; 2 ಲಕ್ಷ ಜನ ಸೇರುವ ನಿರೀಕ್ಷೆ
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸುವ 'ಸಮರ್ಪಣೆ ಸಂಕಲ್ಪ ಸಮಾವೇಶʼಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣ ಪೂರ್ಣಗೊಂಡಿದ್ದು ಐತಿಹಾಸಿ ಸಮಾವೇಶದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕುರಿತ ವಿವರ ಇಲ್ಲಿದೆ.


ಹೊಸಪೇಟೆ: ಮೇ 20ರಂದು ನಡೆಯುವ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸುವ 'ಸಮರ್ಪಣೆ ಸಂಕಲ್ಪ ಸಮಾವೇಶʼಕ್ಕೆ ಹೊಸಪೇಟೆ ಸಜ್ಜಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಭವ್ಯ ವೇದಿಕೆ ನಿರ್ಮಾಣ ಪೂರ್ಣಗೊಂಡಿದ್ದು, ಐತಿಹಾಸಿಕ ಸಮಾವೇಶದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಹೌದು, ವಿಜಯನಗರ ನೆಲದಿಂದ ಕೈಗೊಳ್ಳುವ ಕಾರ್ಯ ಸದಾ ವಿಜಯವಾಗಲಿದೆ ಎಂಬ ದೃಢವಾದ ವಿಶ್ವಾಸದೊಂದಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣಗೊಳ್ಳುವ ನಿಮಿತ್ತ ಸಮರ್ಪಣೆ ಸಂಕಲ್ಪ ಶೀರ್ಷಿಕೆ ಅಡಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದ್ದಕ್ಕಾಗಿ ಕಳೆದ ಹಲವು ದಿನಗಳಿಂದ ಸಿಎಂ, ಡಿಸಿಎಂ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ಗವಿಯಪ್ಪ, ಸಚಿವ ಕೃಷ್ಣ ಭೈರೆಗೌಡ ಅವರು ಸಮಾವೇಶ ಸಿದ್ಧತೆ, ಯಶಸ್ಸಿಗಾಗಿ ಟೊಂಕ ಕಟ್ಟಿ ನಿಂತಿದ್ದು, ಎಐಸಿಸಿ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಷ್ಟ್ರೀಯ ನಾಯಕರ ಸ್ವಾಗತಕ್ಕೆ ಭವ್ಯ ವೇದಿಕೆ ಸೇರಿ ಸಕಲ ರೀತಿಯಿಂದಲೂ ಹೊಸಪೇಟೆ ಸಿದ್ಧಗೊಂಡಿದೆ.

ಮೇ 20ರಂದು ರಾಜ್ಯದ ಬಹುತೇಕ ಜಿಲ್ಲೆಗಳಿಂದ ಕಾರ್ಯಕರ್ತರು, ಜನರು ಹೊಸಪೇಟೆಯತ್ತ ಸಾಗಲಿದ್ದು, ಸಮಾವೇಶ ಮಹತ್ವ ಪಡೆದಿದೆ. ಈ ಭಾಗದಲ್ಲಿ ಹೆಚ್ಚು ಬಿಸಿಲು ಇರುವುದರಿಂದ ನೆರಳಿನ ವ್ಯವಸ್ಥೆ ಕಲ್ಪಿಸಲು ಸುಸಜ್ಜಿತ ಜರ್ಮನ್ ಟೆಂಟ್ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಉಡುಪಾಸ್ ಸಂಸ್ಥೆಯವರು ವೇದಿಕೆ ನಿರ್ಮಿಸುತ್ತಿದ್ದಾರೆ. ಪ್ರಧಾನ ವೇದಿಕೆ ಜತೆಗೆ ಇನ್ನೂ ಎರಡು ಕಿರು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. 200 ಅಡಿ ಅಗಲ, 70 ಅಡಿ ಉದ್ದದ ಪ್ರಧಾನ ವೇದಿಕೆಯಲ್ಲಿ 300 ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಮೊದಲ ಕಿರು ವೇದಿಕೆಯಲ್ಲಿ 50 ಮಾಜಿ ಸಚಿವರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಇನ್ನೊಂದರಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಪಕ್ಷದ ಪ್ರಮುಖ 50 ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಜನರಿಗೆ 1ಲಕ್ಷದ 50 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. 50 ಸಾವಿರ ಕುರ್ಚಿಗಳನ್ನು ಹೆಚ್ಚುವರಿಯಾಗಿ ತರಿಸಲಾಗಿದೆ. ಕ್ರೀಡಾಂಗಣದ ಅಕ್ಕಪಕ್ಕದ ರಸ್ತೆಯಲ್ಲೂ ಎಲ್‌ಇಡಿ ಪರದೆ ವ್ಯವಸ್ಥೆ ಮಾಡಲಾಗುತ್ತಿದೆ. ಭೋಜನದ ವ್ಯವಸ್ಥೆಗಾಗಿ ಟೆಂಟ್‌ಗಳನ್ನು ನಿರ್ಮಿಸಿ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಈ ಭವ್ಯ ವೇದಿಕೆಯ ಅಕ್ಕಪಕ್ಕ ಹಾಗೂ ಹೊರಗೆ ಹಂಪಿ ಸ್ಮಾರಕಗಳನ್ನು ಹೋಲುವ ಕಂಬಗಳ ಮಾದರಿ ಬಳಸಲಾಗುತ್ತಿದೆ.
'ಪ್ರಗತಿಯತ್ತ ಕರ್ನಾಟಕ' ಸರ್ಕಾರದ ಸಾಧನೆಗಳ ಸಮರ್ಪಣಾ ಸಂಕಲ್ಪ ಸಮಾವೇಶ - 2025
— Karnataka Congress (@INCKarnataka) May 19, 2025
ಸರ್ಕಾರದ ಎರಡು ವರ್ಷಗಳ ಸಾಧನೆಯ ಸಮರ್ಪಣೆ ಮತ್ತಷ್ಟು ಜನಪರ ಸೇವೆಯ ಸಂಕಲ್ಪ. ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ.
ದಿನಾಂಕ : 20-05-2025
ಸಮಯ : ಬೆಳಗ್ಗೆ 11:00 ಗಂಟೆ
ಸ್ಥಳ : ಜಿಲ್ಲಾ ಕ್ರೀಡಾಂಗಣ, ಹೊಸಪೇಟೆ, ವಿಜಯನಗರ ಜಿಲ್ಲೆ… pic.twitter.com/lLIcDjCNlE
ಸಮಾವೇಶಕ್ಕೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಭಾಗಗಳಿಂದ ಹೆಚ್ಚಿನ ಜನರು ಬರಲಿದ್ದಾರೆ. ಜನರನ್ನು ಕರೆತರಲು 3,700 ಸಾರಿಗೆ ಬಸ್, ಸ್ವಂತ ಖರ್ಚಿನಲ್ಲಿ 2000 ಬಸ್ ಸೇರಿ 10 ಸಾವಿರಕ್ಕೂ ಅಧಿಕ ವಾಹನಗಳನ್ನು ಮೀಸಲಿಡಲಾಗಿದೆ. ಜನರಿಗೆ ಐದು ಲಕ್ಷ ಪ್ಯಾಕೆಟ್ ನೀರು, ಮೂರು ಲಕ್ಷ ಪ್ಯಾಕೆಟ್ ಮಜ್ಜಿಗೆ, ಎರಡು ಲಕ್ಷ ಜನರಿಗೆ ಊಟ ಹಾಗೂ ಹೆಚ್ಚುವರಿ 50 ಸಾವಿರ ಜನರಿಗೆ ಊಟದ ವ್ಯವಸ್ಥೆ ಕೈಗೊಳ್ಳಲಾಗಿದೆ.
ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ಸರ್ಕಾರ ರಚನೆ ನಂತರದ ಮೊದಲ ಸಚಿವ ಸಂಪುಟದಲ್ಲಿಯೇ ಐದು ಗ್ಯಾರಂಟಿ ಯೋಜನೆಗಳನು ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಹಂತ ಹಂತವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿತ್ತು. ಇನ್ನು ಕಳೆದ ಎರಡು ವರ್ಷಗಳಲ್ಲಿ ಮಾಡಿರುವ ಸಾಧನೆಗಳು, ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಸರ್ಕಾರ ಈ ಐತಿಹಾಸಿಕ ಸಾಧನೆಯನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಮೇ 20ರಂದು ಕಂದಾಯ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತದ ವತಿಯಿಂದ ಪ್ರಗತಿಯತ್ತ ಕರ್ನಾಟಕ ಸಮರ್ಪಣೆ ಸಂಕಲ್ಪ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕು ಪತ್ರ ಸಮರ್ಪಣೆ ಮಾಡುವುದರೊಂದಿಗೆ ನೆಮ್ಮದಿ ಕಲ್ಪಿಸಲಾಗುತ್ತಿದೆ. ಎರಡು ವರ್ಷಗಳ ಸಾಧನೆಯನ್ನು ನಾಡಿನ ಜನರಿಗೆ ಸಮರ್ಪಣೆ ಮಾಡುವುದರೊಂದಿಗೆ ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಗುವುದು.
ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಜರುಗುವ ಕಾರ್ಯಕ್ರಮದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡುವರು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾವೇಶದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಂಸದರು, ಸಚಿವರು, ಶಾಸಕರು ಭಾಗವಹಿಸುವರು.
ಬೈಕ್ ರ‍್ಯಾಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ
ʼಪ್ರಗತಿಯತ್ತ ಕರ್ನಾಟಕ - ಸಮರ್ಪಣೆ ಸಂಕಲ್ಪʼ ಎರಡು ವರ್ಷಗಳ ಜನಪರ ಸಾಧನೆಯ ಸಮರ್ಪಣೆ ಮತ್ತಷ್ಟು ಜನಪರ ಸೇವೆಯ ಪ್ರತಿಜ್ಞೆ ಎಂಬ ಧ್ಯೇಯವಾಕ್ಯದಡಿ ಒಂದು ಲಕ್ಷ ಕುಟುಂಬಗಳಿಗೆ ನೆಮ್ಮದಿ ಕಂದಾಯ ಗ್ರಾಮ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಿಮಿತ್ತವಾಗಿ ಬೈಕ್ ರ‍್ಯಾಲಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಚಾಲನೆ ನೀಡುವ ಮೂಲಕ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್; ಎಸ್‌ಬಿಐಯಲ್ಲಿದೆ ಬರೋಬ್ಬರಿ 2,964 ಹುದ್ದೆ
ನಗರದ ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ ಬೈಕ್ ರ‍್ಯಾಲಿ, ಬಾಬು ಜಗಜೀವನರಾಂ ವೃತ್ತ, ಡಾ.ಪುನೀತ್ ರಾಜಕುಮಾರ ವೃತ್ತ ಸೇರಿದಂತೆ ವಿವಿಧ ಪ್ರಮುಖ ಬೀದಿಗಳ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾರ್ಗವಾಗಿ ಗಾಂಧಿ ಚೌಕ್‌ವರೆಗೆ ನಡೆಸಲಾಯಿತು. ರ‍್ಯಾಲಿಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಲೋಕಸಭಾ ಸದಸ್ಯ ಈ.ತುಕಾರಾಮ್, ಹೊಸಪೇಟೆ ಶಾಸಕ ಎಚ್.ಆರ್. ಗವಿಯಪ್ಪ, ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಕಂಪ್ಲಿ ಶಾಸಕ ಜೆ. ಗಣೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.
(ವರದಿ: ಅನಂತ ಪದ್ಮನಾಭ ರಾವ್)