Hari Paraak Column: ಅಕ್ವೇರಿಯಂನಲ್ಲಿ ಮೀನು ಸಾಕುವವನು : ವೆಜಿಟೇರಿಯನ್
ಹೌದು, ಹೊಂಬಾಳೆ ಫಿಲ್ಮ್ಸ್ ಈಗ ‘ಬಾಳೆ ಬಂಗಾರ’ ಎಂದು ಹಾಡುವಂಥ ಕಾಲ. ಯಾಕಂದ್ರೆ, ಸ್ಯಾಂಡಲ್ ವುಡ್ ನ ಇದ್ದು ಬಾವಿಕಪ್ಪೆ ಥರ ಆಗೋದು ಬೇಡ ಅಂತ ಬಾಲಿವುಡ್‌ಗೂ ಕಾಲಿಟ್ಟಿದೆ ಈ ಬ್ಯಾನರ್. ಅಲ್ಲೂ ಒಳ್ಳೆಯ ಬೆಳೆ ತೆಗೆಯುವ ಆಶಯ ಹೊಂಬಾಳೆಯದ್ದು. ವಿಜಯ್ ಕಿರಗಂದೂರು ಅವರು ಈ ಬ್ಯಾನರ್‌ನ ಅಡಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾ ಮಾಡಿ ಸೋತಾಗ, ‘ನಿನ್ನಿಂದಲೇ ಸೋತೆ ಒಪ್ಪಿಕೋ’ ಎಂದು ಆಡಿಕೊಂಡವರು ಈ ಹೊಂಬಾಳೆ ಇಷ್ಟರ ಮಟ್ಟಕ್ಕೆ ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ.


ತುಂಟರಗಾಳಿ
ಸಿನಿಗನ್ನಡ
ನಮ್ಮ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್ ಈಗ ‘ಅಸ ಸ್ಟುಡಿಯೋಸ್’ ಎಂಬ ಕಂಪನಿಯೊಂದಿಗೆ ಕೈ ಜೋಡಿಸಿ ‘ಎಐ’ನಲ್ಲೂ ಹೊಸ ಭಾಷ್ಯ ಬರೆಯಲು ಮುನ್ನುಡಿ ಹಾಕಿದೆ. ಇದರ ಮೂಲಕ ಸಿನಿಮಾ ತಂತ್ರಜ್ಞಾನವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ಬಯಕೆ ಹೊಂಬಾಳೆಯದ್ದು. ಹೊಂಬಾಳೆ ಫಿಲ್ಮ್ಸ್ ಈಗ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ಭಾರತದಾದ್ಯಂತ ಸದ್ದು ಮಾಡುತ್ತಿದೆ.
ಹೌದು, ಹೊಂಬಾಳೆ ಫಿಲ್ಮ್ಸ್ ಈಗ ‘ಬಾಳೆ ಬಂಗಾರ’ ಎಂದು ಹಾಡುವಂಥ ಕಾಲ. ಯಾಕಂದ್ರೆ, ಸ್ಯಾಂಡಲ್‌ವುಡ್ ನ ಇದ್ದು ಬಾವಿಕಪ್ಪೆ ಥರ ಆಗೋದು ಬೇಡ ಅಂತ ಬಾಲಿವುಡ್‌ಗೂ ಕಾಲಿಟ್ಟಿದೆ ಈ ಬ್ಯಾನರ್. ಅಲ್ಲೂ ಒಳ್ಳೆಯ ಬೆಳೆ ತೆಗೆಯುವ ಆಶಯ ಹೊಂಬಾಳೆಯದ್ದು. ವಿಜಯ್ ಕಿರಗಂದೂರು ಅವರು ಈ ಬ್ಯಾನರ್‌ನ ಅಡಿಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ನಿನ್ನಿಂದಲೇ’ ಸಿನಿಮಾ ಮಾಡಿ ಸೋತಾಗ, ‘ನಿನ್ನಿಂದಲೇ ಸೋತೆ ಒಪ್ಪಿಕೋ’ ಎಂದು ಆಡಿಕೊಂಡವರು ಈ ಹೊಂಬಾಳೆ ಇಷ್ಟರ ಮಟ್ಟಕ್ಕೆ ಬೆಳೆಯುತ್ತೆ ಅಂತ ಅಂದುಕೊಂಡಿರಲಿಲ್ಲ.
ಈಗ ಈ ಹೊಂಬಾಳೆಯ ಗೊನೆ, ಕೊನೆ ಇಲ್ಲ ಎಂಬಂತೆ ಬೆಳೆಯುತ್ತಿದೆ. ಅದಕ್ಕೆ ಕಾರಣ ‘ಕೆಜಿಎಫ್’ ಎಂದರೆ ತಪ್ಪಿಲ್ಲ. ಇದರ ನಂತರ ‘ಕೆಜಿಎಫ್ 2’ ಮತ್ತು ‘ಸಲಾರ್’ ಮೂಲಕ ಸದ್ದು ಮಾಡಿತ್ತು ಈ ಬ್ಯಾನರ್. ಇದರ ಜತೆಗೆ ಪುನೀತ್ ನಾಯಕತ್ವದ ‘ರಾಜಕುಮಾರ’ ಸಿನಿಮಾ ಮಾಡಿ ಗೆದ್ದಿತ್ತು. ಮತ್ತೆ ಪುನೀತ್ ಜತೆ ‘ದ್ವಿತ್ವ’ ಸಿನಿಮಾ ಕೂಡ ಅನೌ ಮಾಡಿತ್ತು. ಆದರೆ ಅದಾದ ನಂತರ ತಾನು ಯಶ್, ಪುನೀತ್ ಮತ್ತು ಪ್ರಶಾಂತ್ ನೀಲ್ ಅವರಿಗೆ ಮಾತ್ರ ಸೀಮಿತ ಅಲ್ಲ ಎನ್ನುವಂತೆ ಈಗೀಗ ಕನ್ನಡದ ಎಲ್ಲ ನಟರನ್ನೂ ಟಚ್ ಮಾಡಿತ್ತು ಹೊಂಬಾಳೆ.
ಇದನ್ನೂ ಓದಿ: Hari Paraak Column: ಸರ್ಕ್ಯುಲೇಶನ್ ಕಡಿಮೆ ಆಗಿರೋ ಡೈಲಿ ಪತ್ರಿಕೆ: ʼವೀಕ್ʼ ಲಿ
ಶ್ರೀಮುರಳಿ ಅವರ ಜತೆ ‘ಭಗೀರಾ’, ರಕ್ಷಿತ್ ಶೆಟ್ಟಿ ನಿರ್ದೇಶನದ ‘ರಿಚರ್ಡ್ ಆಂಟನಿ’ ಹೀಗೆ ಹೊಂಬಾಳೆ ಬ್ಯಾನರ್‌ನ ಅಂಬಾರಿ ಹೊರಟಿದೆ. ನಂತರ ರಿಷಭ್ ಶೆಟ್ಟಿ ಅವರ ಜತೆಗೂ ‘ಕಾಂತಾರ’ ಮಾಡಿದೆ. ಇದನ್ನೆ ನೋಡಿ, ಹಿಂದೊಮ್ಮೆ, ‘ಹೊಂಬಾಳೆ, ಹೊಂಬಾಳೆ’ ಅಂತ ತಮ್ಮ ಸಿನಿಮಾದಲ್ಲಿ ಹಾಡಿದ್ದ ನಮ್ಮ ನವರಸ ನಾಯಕ ಜಗ್ಗೇಶ್, “ನಿಮ್ ಬ್ಯಾನರ್‌ನಲ್ಲಿ ‘ನನ್ನಾಸೆಯ ಹೂವೇ ಪಾರ್ಟ್ 2’ ಮಾಡೋಣ್ವೇ?" ಅಂತ ಕೇಳಿದ್ರು ಅನ್ನೋದು ಮಾತ್ರ ಶುದ್ಧ ಸುಳ್ಳು.
ಲೂಸ್ ಟಾಕ್- ವಿಶ್ವೇಶ್ವರ ಭಟ್
ಏನ್ ಸರ್, ಬರೀತಾ ಬರೀತಾ 100 ಪುಸ್ತಕ ಮುಗಿಸಿಬಿಟ್ರಲ್ಲ?
- ಮತ್ತೆ? ಬರೀ ಹಿಸ್ಟರಿ ಕ್ರಿಯೇಟ್ ಮಾಡುವಂಥದ್ದು ಬರೆದ್ರೆ ಹೆಂಗೆ, ಬರೆದು ಹಿಸ್ಟರಿ ಕ್ರಿಯೇಟ್ ಮಾಡೋ ಕೆಲಸನೂ ಆಗಬೇಕಲ್ಲ.
ಈಗ ಪ್ರವಾಸದ ಬಗ್ಗೆನೂ ಬರೆಯೋಕೆ ಶುರು ಮಾಡಿದ್ದೀರ?
- ಹೌದು, ಎಲ್ಲರೂ ಸ್ನೇಹಿತರ ಜತೆ ಬೆರೆಯೋಕೆ ಅಂತ ಪ್ರವಾಸ ಹೋದ್ರೆ ನಾನು ನನ್ನ ಓದುಗರಿಗೋಸ್ಕರ ಬರೆಯೋಕೆ ಅಂತನೇ ಪ್ರವಾಸ ಹೋಗ್ತೀನಿ.
ಆದ್ರೂ ನೀವು ವಿದೇಶ ಪ್ರವಾಸ ಹೋಗೋದೇ ಜಾಸ್ತಿ ಅಲ್ವಾ?
- ಹೋಮ್ ಪಿಚ್ಚಲ್ಲಿ ಯಾರ್ ಬೇಕಾದ್ರೂ ಆಡ್ತಾರೆ, ಫಾರಿನ್ ಪಿಚ್ಚಲ್ಲಿ ಆಡಿ ತೋರಿಸ್ಬೇಕು
ಯಾವಾಗಲೂ ವಿದೇಶ ಪ್ರವಾಸ ಮಾಡುವ ನಿಮ್ಮ ಪಾಲಿಸಿ ಏನು?
- ಪ್ರಪಂಚ ಇದ್ದಷ್ಟು ಕಾಲು ಚಾಚು. ‘ಕಾಲಾ’ಯ ತಸ್ಮೈ ನಮಃ
ಸರಿ, ನಿಮ್ಮ ಮುಂದಿನ ಗುರಿ?
- ಪ್ರಪಂಚದ ಎಲ್ಲ ದೇಶಗಳಿಗೂ ಭೇಟಿ ಕೊಟ್ಟು ಕುವೆಂಪು ಹೇಳಿದ ರೀತಿಯಲ್ಲಿ ‘ವಿಶ್ವ’-ಮಾನವ
ಆಗೋದು
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಒಂದು ದಿನ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಹೋದ್ರು. ಅಲ್ಲಿ ಒಂದು ಜಯಂಟ್ ವೀಲ್ ನೋಡಿ ಖೇಮುಗೆ ಅದರಲ್ಲಿ ಕೂರಬೇಕು ಅಂತ ಆಸೆ ಆಯ್ತು. ಹಾಗಂತ ಖೇಮುಶ್ರೀಗೆ ಹೇಳಿದ. ಅದಕ್ಕೆ ಖೇಮುಶ್ರೀ, “ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ 500 ರುಪಾಯಿ. 500 ರುಪಾಯಿ ಏನು ಸುಮ್ನೆ ಬರುತ್ತಾ?" ಅಂದ್ಳು. ಸರಿ ಅಂತ ಖೇಮು ಸುಮ್ಮನೆ ಆದ. ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಖೇಮುಗೆ ಮತ್ತೆ ಜಯಂಟ್ ವೀಲ್‌ನಲ್ಲಿ ಕೂತ್ಕೊಳ್ಳೋ ಆಸೆ ಆಯ್ತು.
ಹೆಂಡತಿಗೆ ಹೇಳಿದ. ಖೇಮುಶ್ರೀಯಿಂದ ಅದೇ ಉತ್ತರ ಬಂತು, “500 ರುಪಾಯಿ ಏನು ಸುಮ್ನೆ ಬರುತ್ತಾ?" ಅಂತ. ಸರಿ ಹೀಗೇ ವರುಷಗಳು ಕಳೆದು ಖೇಮು ಮುದುಕ ಆದ, ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. “ನಂಗೆ ವಯಸ್ಸು 70 ಆಯ್ತು, ಈ ಸಲನಾದ್ರೂ ಅದರಲ್ಲಿ ಕೂತ್ಕೊತೀನಿ ಕಣೇ.
ಇಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ" ಅಂದ ಖೇಮು. ಅದಕ್ಕೆ ಖೇಮುಶ್ರೀ ಮತ್ತೆ ಅದೇ ಮಾತು ಹೇಳಿದ್ಳು- “500 ರುಪಾಯಿ ಏನು ಸುಮ್ನೆ ಬರುತ್ತಾ?". ಆಗ ಇದನ್ನ ಆ ಜಯಂಟ್ ವೀಲ್ ರೈಡರ್ ಕೇಳಿಸಿಕೊಂಡ. “ನೋಡಿ, ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವೀಲ್‌ನಲ್ಲಿ ಕರ್ಕೊಂಡ್ ಹೋಗ್ತೀನಿ. ಆದ್ರೆ, ಒಂದ್ ಕಂಡೀಷನ್. ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮ್ಗೆ 500 ರುಪಾಯಿ ಫೋನ್ ಆಗುತ್ತೆ" ಅಂತ ಖೇಮು ದಂಪತಿಗೆ ಹೇಳಿದ.
ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್ ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್-ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, “ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್". ಅದಕ್ಕೆ ಹಿಂದೆ ಕೂತಿದ್ದ ಖೇಮು ಮೆಲ್ಲಗೆ ಹೇಳಿದ “ಹಂಗೇನಿಲ್ಲ ಸರ್, ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದುಹೋದಳು. ಆದ್ರೂ ಸುಮ್ಮನೆ ಕೂತಿದ್ದೆ, ಯಾಕಂದ್ರೆ 500 ರುಪಾಯಿ ಏನು ಸುಮ್ನೆ ಬರುತ್ತಾ?".
ಲೈನ್ ಮ್ಯಾನ್
ಭೂಮಿ ಬಗ್ಗೆ ಸಾಕಷ್ಟು ತಿಳಿದುಕೊಂಡವನು
- Earth ಶಾಸ್ತ್ರಜ್ಞ
ಅಕ್ವೇರಿಯಂನಲ್ಲಿ ಮೀನು ಸಾಕುವವರನ್ನು ಏನಂತಾರೆ?
- ವೆಜಿಟೇರಿಯನ್ಸ್
‘ದತ್ತು’ ಪುತ್ರ ಮದುವೆ ಆದಮೇಲೆ ಮೂರ್ನಾಲ್ಕು ಮಕ್ಕಳನ್ನ ಹುಟ್ಟಿಸಿದ್ರೆ ಅವರಪ್ಪ ಅಮ್ಮ ಏನು ಹೇಳ್ತಾರೆ?
- ‘ಸಾಕು’ ಮಗ
ಕಲಿಯುಗ ಅಂದ್ರೆ ಯಾವುದು?
- ಜನ ಪ್ರೀತಿ ವಾಪಸ್ ಕೊಟ್ಟಷ್ಟೇ ನಿಯತ್ತಾಗಿ ಸಾಲನೂ ವಾಪಸ್ ಕೋಡೋ ಕಾಲ
ಶಾಲಾ ಕಾಲೇಜು ದಿನಗಳನ್ನು ಏನೆನ್ನಬಹುದು?
- ‘ಕಲಿ’ಯುಗ
ಭಯಾನಕವಾಗಿ ಗೊರಕೆ ಹೊಡೆಯುವವನು
- ‘ಖರ್ರಾಟೆ’ ಕಿಂಗ್
ಎಂಬಿಎ ಮಾಡಿದವರು ಬುಕ್ ಮಾಡೋ ಫ್ಲೈಟ್ ಟಿಕೆಟ್
- ಬ್ಯುಸಿನೆಸ್ ಕ್ಲಾಸ್
ಬುದ್ಧನಂತೆ ಆಗೋಕೆ ಇರಬೇಕಾದ ಅರ್ಹತೆ ಏನು?
- ಎಲ್ಲವನ್ನೂ ಬಿಟ್ಟು ಹೋಗೋಕೆ, ಏನಾದ್ರೂ ಇರಬೇಕು
ಕೈ ನಡುಗುವ ಕಾಯಿಲೆ ಇರೋನ ಸಮಸ್ಯೆ
- ಯಾರ ಜತೆಗಾದ್ರೂ ‘ಹ್ಯಾಂಡ್ ಶೇಕ್’ ಮಾಡೋದು ಸುಲಭ
ಕತ್ತಲಲ್ಲಿ ಮಾಡೋ ಮೋಸ
-ಇರುಳು ಮರುಳು