Prajwal Revanna Case: ಜೀವಾವಧಿ ಶಿಕ್ಷೆ; ಪ್ರಜ್ವಲ್ ರೇವಣ್ಣ ಮುಂದಿನ ಆಯ್ಕೆ ಏನು?
Prajwal Revanna Case: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಇದರಿಂದ ಮಾಜಿ ಸಂಸದ ಜೀವನಪರ್ಯಂತ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಸದ್ಯ ಪ್ರಜ್ವಲ್ ರೇವಣ್ಣ ಮುಂದಿರುವ ಆಯ್ಕೆಗಳೇನು ಎನ್ನುವ ಕುರಿತ ಮಾಹಿತಿ ಇಲ್ಲಿದೆ.


ಬೆಂಗಳೂರು: ಕೆ.ಆರ್.ನಗರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ (Prajwal Revanna Case) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಇದರಿಂದ ಮಾಜಿ ಸಂಸದ ಜೀವನಪರ್ಯಂತ ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ. ಕೋರ್ಟ್‌ನಿಂದ ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ಸದ್ಯ ಪ್ರಜ್ವಲ್ ರೇವಣ್ಣ ಮುಂದಿರುವ ಆಯ್ಕೆಗಳೇನು ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿವೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ವಿರುದ್ಧವಾಗಿ ಪ್ರಜ್ವಲ್ ರೇವಣ್ಣ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನೀಡಿರುವ ಶಿಕ್ಷೆಗೆ ತಡೆ ಅಥವಾ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ಹಾಗೆಯೇ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಜಾಮೀನು ನೀಡುವಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು.
ಹೈಕೋರ್ಟ್ ಈ ತೀರ್ಪಿಗೆ ತಾತ್ಕಾಲಿಕ ತಡೆ ನೀಡಿದರೆ, ಉಳಿದ ಮೂರು ಪ್ರಕರಣಗಳಲ್ಲಿ ಜಾಮೀನಿಗಾಗಿ ಅವರು ಮುಂದಿನ ಕಾನೂನು ಹೋರಾಟ ನಡೆಸಬಹುದು. ಒಂದು ವೇಳೆ ಹೈಕೋರ್ಟ್ ಕೂಡ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದರೆ, ಆಗ ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಮಾರ್ಗ ಮಾತ್ರ ಉಳಿಯುತ್ತದೆ. ಆದರೆ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಸಮರ್ಥಿಸಿದರೆ, ಆಗ ಅವರು ವಿಧಿಸಲಾದ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ.
ಈ ಸುದ್ದಿಯನ್ನೂ ಓದಿ | Murder Case: ಮಾವನನ್ನೇ ಕೊಂದ ಅಳಿಯ; ಶವ ಸುಟ್ಟು ಹಾಕಲು ಪತ್ನಿ, ಮಗಳು ನೆರವು!
ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್!
ಬೆಂಗಳೂರು : ಮೈಸೂರಿನ (Mysuru) ಕೆ.ಆರ್ ನಗರದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ (Physical Abuse) ಸಂಬಂಧಪಟ್ಟಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna Case) ನ್ಯಾಯಾಲಯವು ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಜತೆಗೆ ಪ್ರಜ್ವಲ್‌ಗೆ 10 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಅಲ್ಲದೇ ಸಂತ್ರಸ್ತೆಗೆ 7 ಲಕ್ಷ ರೂ. ಪರಿಹಾರ ನೀಡಲು ಸೂಚಿಸಲಾಗಿದೆ.
ಅತ್ಯಾಚಾರಕ್ಕೆ ಸಂಬಂಧಿಸಿ ಎರಡು ಸೆಕ್ಷನ್ ಅಡಿ ತಲಾ ಐದು ಲಕ್ಷ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 376(2)(ಕೆ) ಅಂದರೆ ಪ್ರಬಲವಾದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದ್ದು, ಐದು ಲಕ್ಷ ರೂ. ದಂಡ ವಿಧಿಸಲಾಗಿದೆ. ಅದೇ ರೀತಿ ಐಪಿಸಿ ಸೆಕ್ಷನ್ 376(2)(ಎನ್) ಅಂದರೆ ಪದೇ ಪದೇ ಅತ್ಯಾಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ ಐದು ಲಕ್ಷ ರೂ. ದಂಡ ವಿಧಿಸಲಾಗಿದೆ. ಹೀಗೆ ಒಟ್ಟು 10 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.
ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ (Prajwal Revanna Case) ಎಂದು ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಕಟವಾಗಿದೆ. ವಿಚಾರಣೆಯ ಬಳಿಕ ಆದೇಶವನ್ನು ಮಧ್ಯಾಹ್ನಕ್ಕೆ ಕಾಯ್ದಿರಿಸಿದ್ದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು, ತೀರ್ಪು ಪ್ರಕಟಿಸಿದ್ದಾರೆ.