ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramakant Joshi: ಮನೋಹರ ಗ್ರಂಥಮಾಲಾ ಪ್ರಕಾಶಕ, ಲೇಖಕ ಡಾ. ರಮಾಕಾಂತ ಜೋಶಿ ನಿಧನ

Ramakant Joshi: ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ತಂದೆ ಖ್ಯಾತ ಸಾಹಿತಿ ಮತ್ತು ರಂಗಕರ್ಮಿ, ಪದ್ಮಶ್ರೀ ಪುರಸ್ಕೃತ ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ಇವರು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.

ಮನೋಹರ ಗ್ರಂಥಮಾಲಾ ಪ್ರಕಾಶಕ ಡಾ. ರಮಾಕಾಂತ ಜಿ. ಜೋಶಿ ನಿಧನ

Profile Prabhakara R May 17, 2025 6:42 PM

ಧಾರವಾಡ: ನಗರದ ಮನೋಹರ ಗ್ರಂಥಮಾಲಾ ಸಂಪಾದಕ, ಪ್ರಕಾಶಕ, ಲೇಖಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ರಮಾಕಾಂತ ಜಿ. ಜೋಶಿ (89) ಅವರು ಹುಬ್ಬಳ್ಳಿಯ ಶುಚಿರಾಯಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ರಮಾಕಾಂತ್ ಜೋಶಿ ಅವರು ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದವರು. ತಂದೆ ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು.

ರಮಾಕಾಂತ್ ಜೋಶಿ 1936ರ ಡಿಸೆಂಬರ್ 23ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಖ್ಯಾತ ಸಾಹಿತಿ ಮತ್ತು ರಂಗಕರ್ಮಿ ಪದ್ಮಶ್ರೀ ಪುರಸ್ಕೃತ ಜಿ.ಬಿ. ಜೋಶಿ (ಜಡಭರತ), ತಾಯಿ ಪದ್ಮಾವತಿ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ರಮಾಕಾಂತರು, ಅದೇ ವಿಶ್ವವಿದ್ಯಾಲಯದಿಂದ “The use of myth in Indian English Drama” ಮಹಾಪ್ರಬಂಧಕ್ಕೆ ಪಿಎಚ್‌.ಡಿ ಗಳಿಸಿದರು. ಮುಂದೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು.

ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಪುಸ್ತಕ ಪ್ರಕಾಶನ ಇವರ ಅನುವಾದಿತ ಕೃತಿ.

ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ರಮಾಕಾಂತ್ ಜೋಶಿ ಅವರಿಗೆ ‘ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಸಂದೇಶ ವಿಶೇಷ ಗೌರವ ಪ್ರಶಸ್ತಿ’, ‘ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ’, ಅಂಕಿತ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.

ಇವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ನಗರದ ಮಂಗಳವಾರ ಪೇಟೆಯ ಮೆಣಸಿನಕಾಯಿ ಓಣಿಯ ಸ್ವಗೃಹದಲ್ಲಿ ಮೇ 18ರಂದು ಬೆಳಗ್ಗೆ 9 ರಿಂದ 10 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ | Roopa Gururaj Column: ಹದ್ದಿನ ರೂಪಾಂತರದ ಹಿಂದಿನ ಸಂಘರ್ಷ