Ranya Rao: ಚಿನ್ನ ಸ್ಮಗ್ಲಿಂಗ್ ಕೇಸ್: ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
Actress Ranya Rao: ನಟಿ ರನ್ಯಾ ರಾವ್‌ಗೆ ಸೇರಿದ ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ನಿವೇಶನ, ತುಮಕೂರಿನಲ್ಲಿರುವ ಕೈಗಾರಿಕಾ ನಿವೇಶನ, ಆನೇಕಲ್ ತಾಲೂಕಿನಲ್ಲಿರುವ ಕೃಷಿ ಜಮೀನನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿಕೊಂಡಿದೆ.

ರನ್ಯಾ ರಾವ್

ಬೆಂಗಳೂರು: ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ (Kannada actress Ranya Rao) ಅವರಿಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಶುಕ್ರವಾರ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಅಂತಾರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾಗೆ ಸೇರಿದ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಲ್ಲಿರುವ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಲೇಔಟ್‌ನಲ್ಲಿರುವ ಮನೆ, ಅರ್ಕಾವತಿ ಲೇಔಟ್‌ನಲ್ಲಿರುವ ನಿವೇಶನ, ತುಮಕೂರಿನಲ್ಲಿರುವ ಕೈಗಾರಿಕಾ ನಿವೇಶನ, ಆನೇಕಲ್ ತಾಲೂಕಿನಲ್ಲಿರುವ ಕೃಷಿ ಜಮೀನನ್ನು ಜಪ್ತಿ ಮಾಡಲಾಗಿದೆ.
ಕಳೆದ ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.
ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ರನ್ಯಾ ರಾವ್ ಮತ್ತು ಅವರ ಸಹಚರರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಜಾಮೀನು ನೀಡಲಾಗಿದ್ದರೂ, ರನ್ಯಾ ರಾವ್ ಮತ್ತು ಅವರ ಇಬ್ಬರು ಸಹಚರರಾದ ತರುಣ್ ಕೊಡೂರು ರಾಜು ಹಾಗೂ ಸಾಹಿಲ್ ಸಕರಿಯಾ ಜೈನ್ ಅವರನ್ನು ಕಠಿಣ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974(COFEPOSA ಕಾಯ್ದೆ, 1974) ಅಡಿಯಲ್ಲಿ ಬಂಧಿಸಿರುವುದರಿಂದ ನಟಿಯನ್ನು ಜೈಲಿನಿಂದ ಬಿಡುಗಡೆ ಮಾಡಿಲ್ಲ.
ಇದನ್ನೂ ಓದಿ: Actress Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪ್ರಕರಣಕ್ಕೆ ಐಟಿ ಎಂಟ್ರಿ, 3 ದಿನ ನಟಿಯ ವಿಚಾರಣೆ