Sri Kshetra Horanadu: ಉಗ್ರರ ನಿಗ್ರಹಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ
Sri Kshetra Horanadu: ಶ್ರೀ ಕ್ಷೇತ್ರ ಹೊರನಾಡಿನ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿ ಅವರು, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ 10 ಲಕ್ಷ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.


ಚಿಕ್ಕಮಗಳೂರು: ಪಾಕಿಸ್ತಾನದ ಉಗ್ರರ ಹುಟ್ಟಡಗಿಸಲು ಭಾರತೀಯ ಸೇನೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ 10 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಕಳಸ ತಾಲೂಕಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ರಾಜ್ಯಪಾಲರಿದ್ದ ವೇದಿಕೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ ಈ ಹಣವನ್ನು ಹಸ್ತಾಂತರ ಮಾಡಲಾಗಿದೆ. ಕ್ಷೇತ್ರದ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿ ಅವರು ಚೆಕ್ ಹಸ್ತಾಂತರಿಸಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮೂಲಕ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ಹಾಗೂ ರಾಜ್ ನಾಥ್ ಸಿಂಗ್ ಅವರಿಗೆ ಪತ್ರ ಬರೆದು ಜತೆಗೆ ಶ್ರೀ ಕ್ಷೇತ್ರದಿಂದ 10 ಲಕ್ಷ ರೂ ಚೆಕ್‌ನ್ನು ಪ್ರಸಾದ ರೂಪವಾಗಿ ಭಾರತೀಯ ಸೇನೆಗೆ ನೀಡಲಾಗಿದೆ. ಆಪರೇಷನ್ ಸಿಂದೂರ ಬಳಿಕ ಇಂತಹ ಮಹತ್ತರ ನಡೆಯನ್ನು ಕೈಗೊಂಡಿರುವ ಕ್ಷೇತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಕವಿದಿದೆ. ಗುರುವಾರ ರಾತ್ರಿ ಡ್ರೋನ್‌ಗಳ ದಾಳಿ ನಡೆಸಿತ್ತು. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿತ್ತು. ಇದರ ಬೆನ್ನಲ್ಲೇ ಆಪರೇಷನ್ ಸಿಂದೂರ ಕಾರ್ಯಾಚರಣೆಯನ್ನು ಭಾರತ ಮತ್ತಷ್ಟು ತೀವ್ರಗೊಳಿಸಿದ್ದರಿಂದ ಪಾಕ್ ತತ್ತರಿಸಿ ಹೋಗಿದೆ.
ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದರೆ ಭಾರತೀಯ ಸೇನೆ ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ.
ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿತ್ತು.
ಈ ಸುದ್ದಿಯನ್ನೂ ಓದಿ | Operation Sindoor: ಭಾರತದ ಕ್ಷಿಪಣಿ ದಾಳಿ ಏಕೆ ತಡೆಯಲಿಲ್ಲ? ಪಾಕ್ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ
ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್

ವಿಜಯಪುರ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ (Operation sindoor) ನಿರ್ಮಾಣವಾಗಿರುವ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನದ ಪರ ಪೋಸ್ಟ್ ಹಾಕಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕ್ ಪರ ಪ್ರೇಮ ಮೆರೆದಿರುವುದಕ್ಕೆ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಪುರ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ತಷಾವುದ್ಧ್ ಫಾರೂಖಿ ಶೇಖ್ ಎಂಬಾಕೆ ಪಾಕ್ ಪರ ಪೋಸ್ಟ್ ಹಾಕಿದ್ದಾಳೆ. " ನನ್ನ ಪಾಕಿಸ್ತಾನಿ ಸ್ನೇಹಿತರೇ, ಐಒಜೆಕೆ, ಎಜೆಕೆ ಜನರೇ, ಗಡಿಯ 200 ಕಿ.ಮೀ ವ್ಯಾಪ್ತಿಯಲ್ಲಿ ನೀವು ಓಡಾಡಬೇಡಿ, ದಯವಿಟ್ಟು ಒಳನಾಡಿಗೆ ಹೋಗಿ. ಅಲ್ಲಾಹ್ ನಮ್ಮೆಲ್ಲರನ್ನೂ ಭಾರತದಿಂದ ರಕ್ಷಿಸುತ್ತಾನೆ" ಎಂದು ಪಾಕ್ ಧ್ವಜದೊಂದಿಗೆ ಪೋಸ್ಟ್ ಹಾಕಿದ್ದಾಳೆ.
ಈ ಪೋಸ್ಟ್‌ಗೆ ಹಿಂದುಪರ ಸಂಘಟನೆಗಳು ಸೇರಿ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿ ಯೂಟರ್ನ್ ಹೊಡೆದಿದ್ದು, ಕ್ಷಮೆಯಾಚಿಸಿ ಪೋಸ್ಟ್ ಮಾಡಿದ್ದಾಳೆ.
ನನ್ನ ಪೋಸ್ಟ್ ಬಹಳಷ್ಟು ಜನರಿಗೆ ನೋವು ತಂದಿದೆ. ನಾನು ಎಲ್ಲರಿಗೂ ಹೃದಯಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ. ಭಾರತೀಯಳಾದ ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ, ಭಾರತದಲ್ಲಿ ಹುಟ್ಟಿ ಬೆಳೆದಿದ್ದು, ಇದು ನನ್ನ ತಾಯ್ನಾಡು. ನನ್ನ ಮೂರ್ಖತನದ ಪೋಸ್ಟ್‌ಗೆ ನಾನು ಮತ್ತೊಮ್ಮೆ ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಇನ್ಮುಂದೆ ಎಂದಿಗೂ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ, ಜೈ ಹಿಂದ್' ಎಂದು ಭಾರತದ ಧ್ವಜ ಚಿತ್ರದೊಂದಿಗೆ ವಿದ್ಯಾರ್ಥಿನಿ ಪೋಸ್ಟ್ ಮಾಡಿದ್ದಾಳೆ.
ಈ ಸುದ್ದಿಯನ್ನೂ ಓದಿ | Operation Sindoor: ಭಾರತದ ಕ್ಷಿಪಣಿ ದಾಳಿ ಏಕೆ ತಡೆಯಲಿಲ್ಲ? ಪಾಕ್ ರಕ್ಷಣಾ ಮಂತ್ರಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ