ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಐದನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್ ಪಂತ್‌ ಸ್ಥಾನಕ್ಕೆ ಯಾರು ವಿಕೆಟ್‌ ಕೀಪರ್‌?

ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಗಾಯಕ್ಕೆ ತುತ್ತಾಗಿದ್ದಾರೆ. ಮ್ಯಾಂಚೆಸ್ಟರ್‌ ಟೆಸ್ಟ್‌ ಮೊದಲನೇ ದಿನ 68ನೇ ಓವರ್‌ನಲ್ಲಿ ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ಸ್ವೀಪ್‌ ಶಾಟ್‌ ಹೊಡೆಯಲು ಯತ್ನಿಸಿದ ಪಂತ್‌, ನಿಧಾನಗತಿಯಲ್ಲಿದ್ದ ಚೆಂಡನ್ನು ಅರಿಯುವಲ್ಲಿ ವಿಫಲರಾದರು. ಇದರ ಪರಿಣಾಮ ಪಂತ್‌ ಅವರ ಪಾದಕ್ಕೆ ಗಂಭೀರ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಐದನೇ ಟೆಸ್ಟ್‌ನಲ್ಲಿ ಪಂತ್‌ ಬದಲು ಯಾರು ಆಡಲಿದ್ದಾರೆಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

5ನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್ ಪಂತ್‌ ಸ್ಥಾನಕ್ಕೆ ಯಾರು ವಿಕೆಟ್‌ ಕೀಪರ್‌?

ರಿಷಭ್‌ ಪಂತ್‌ ಸ್ಥಾನಕ್ಕೆ ಇಶಾನ್‌ ಕಿಶನ್‌ ಅಥವಾ ಎನ್‌ ಜಗದೀಶನ್‌?

Profile Ramesh Kote Jul 24, 2025 9:52 PM

ಮ್ಯಾಂಚೆಸ್ಟರ್:‌ ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಆದ ಕಾರಣ ಭಾರತ ತಂಡ ಮೊದಲು ಬ್ಯಾಟ್‌ ಮಾಡುವಂತಾಯಿತು. ಪಂದ್ಯದ ಮೊದಲನೇ ದಿನ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಲು ಬಂದ ರಿಷಭ್ ಪಂತ್‌ (Rishabh Pant) ಆಂಗ್ಲ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸುತ್ತಿದ್ದರು. ಕ್ರಿಸ್‌ ವೋಕ್ಸ್‌ ಬೌಲ್‌ ಮಾಡಿದ 68ನೇ ಓವರ್​ನಲ್ಲಿ ರಿವರ್ಸ್ ಸ್ವೀಪ್ ಶಾಟ್ ಬಾರಿಸಲು ಪಂತ್ ಮುಂದಾದರು. ಈ ಪ್ರಯತ್ನದ ನಡುವೆ ಬಾಲ್‌ ಬ್ಯಾಟನ್ನು ಸ್ಪರ್ಶಿಸದೇ ನೇರವಾಗಿ ಬಲಗಾಲಿನ ಪಾದಕ್ಕೆ ಬಡಿಯಿತು. ಇದರಿಂದ ಪಂತ್‌ ಗಂಭೀರ ಗಾಯಕ್ಕೆ ತುತ್ತಾಗಿ ನೋವಿನಿಂದ ಬಳಲಿದರು. ನಂತರ ಪೆವಿಲಿಯನ್‌ ಕಡೆ ನಡೆದ ಪಂತ್‌ ಅವರನ್ನು ಆಂಬುಲೆನ್ಸ್‌ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ಅವರ ಕಾಲಿನ ಬೆರಳು ಮುರಿದಿರುವುದು ದೃಢಪಟ್ಟಿದೆ. ಚೇತರಿಸಿಕೊಳ್ಳಲು ಕನಿಷ್ಠ 6 ವಾರಗಳ ಕಾಲ ವಿಶ್ರಾಂತಿಯ ಅಗತ್ಯ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಪಂತ್ 5ನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿಯುದು ಖಚಿತ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಇದು ತಂಡಕ್ಕೆ ದೊಡ್ಡ ಆಘಾತವಾಗಿದ್ದು, ರಿಷಭ್ ಪಂತ್‌ ಹೊರಗುಳಿದರೆ ಭಾರತ ತಂಡದ ಬಲ ಕುಸಿಯುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಂತ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅದಲ್ಲದೇ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು. ಇನ್ನು 2ನೇ ಟೆಸ್ಟ್‌ನಲ್ಲೂ ಕೂಡ 90 ರನ್‌ ಗಳಿಸುವುದರ ಮೂಲಕ ತಂಡದ ಗೆಲುವಿಗೆ ನೆರವು ನೀಡಿದ್ದರು. ಮೂರನೇ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ 83 ರನ್​ ಕಲೆಹಾಕಿದ್ದರು. ಇದೀಗ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಗಾಯದ ನಡುವೆಯೂ 75 ಬಾಲ್‌ಗಳಲ್ಲಿ 54 ರನ್​ ಬಾರಿಸಿ ಗಮನ ಸೆಳೆದಿದ್ದಾರೆ.

IND vs ENG: ಭಾರತ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಸ್ಥಾನಕ್ಕೆ ಸೇರ್ಪಡೆಯಾದ ಎನ್‌ ಜಗದೀಶನ್‌!

ವಿಕೆಟ್ ಕೀಪರ್ ಯಾರು?

ಪಂತ್‌ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಹೊರಗುಳಿಯುದು ಬಹುತೇಕ ಖಚಿತವಾಗಿದೆ. ಆದ ಕಾರಣ ಈ ಪಂದ್ಯದಲ್ಲಿ ವಿಕೆಟ್‌ ಕೀಪಿಂಗ್‌ ಯಾರು ಮಾಡಲಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಪಂದ್ಯದಲ್ಲಿ ಧ್ರುವ ಜುರೆಲ್‌ ವಿಕೆಟ್‌ ಕೀಪಿಂಗ್‌ ಮಾಡಲಿದ್ದಾರೆ ಎನ್ನಬಹುದು. ಈ ಹಿಂದೆ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪಂತ್‌ ಅವರ ಬೆರಳಿಗೆ ಗಾಯವಾಗಿತ್ತು. ಈ ವೇಳೆ ಬದಲಿ ವಿಕೆಟ್‌ ಕೀಪರ್‌ ಆಗಿ ಧ್ರುವ ಜುರೆಲ್‌ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಈ ಪಂದ್ಯದಲ್ಲೂ ಕೂಡ ವಿಕೆಟ್‌ ಕೀಪಿಂಗ್‌ ಜವಬ್ದಾರಿ ಜುರೆಲ್‌ ಹೆಗಲೇರುವುದು ಖಚಿತ ಎನ್ನಬಹುದು.

ಐದನೇ ಟೆಸ್ಟ್‌ಗೆ ಯಾರಿಗೆ ಅವಕಾಶ?

ಈ ಸರಣಿಯ ಐದನೇ ಟೆಸ್ಟ್ ಜುಲೈ 31ರಂದು ಲಂಡನ್‌ನ ಕೆನ್ನಿಂಗ್ಟನ್‌ ಓವಲ್‌ನಲ್ಲಿ ನಡೆಯಲಿದೆ. ಪಂತ್‌ ಅಲಭ್ಯತೆಯ ಕಾರಣ ತಂಡಕ್ಕೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿ ಇಶಾನ್ ಕಿಶಾನ್ ಅವರನ್ನು ಸೇರಿಸಿಕೊಳ್ಳಲು ಆಯ್ಕೆ ಸಮಿತಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಆದರೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕರೆ ಟೀಮ್‌ ಇಂಡಿಯಾ ಪರ ಕಣಕ್ಕಿಳಿಯಲು ಇಶಾನ್ ಕಿಶನ್ ಮಾನಸಿಕವಾಗಿ ಸಿದ್ದರಾಗಿದ್ದಾರೋ? ಇಲ್ಲವೋ? ಎನ್ನುವುದು ಇನ್ನು ಸ್ಪಷ್ಟವಾಗಿ ತಿಳಿದಿಲ್ಲ. ಇನ್ನು ಧ್ರುವ ಜುರೆಲ್‌ ಕೂಡ ಈ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮ್ಯಾನೇಜ್‌ಮೆಂಟ್‌ ಯಾರಿಗೆ ಮಣೆ ಹಾಕುತ್ತೋ ಕಾದು ನೋಡಬೇಕಿದೆ.

IND vs ENG 4th Test: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌!

ಲಂಡನ್‌ಗೆ ತೆರಳಿದ ಎನ್‌ ಜಗದೀಶನ್‌

ಇದರ ನಡುವೆ ಮತ್ತೊಂದು ಬೆಳವಣಿಗೆ ನಡೆದಿದೆ. ತಮಿಳುನಾಡು ವಿಕೆಟ್‌ ಕೀಪರ್‌ ಎನ್‌ ಜಗದೀಶನ್‌ ಅವರು ಲಂಡನ್‌ಗೆ ತೆರಳಿದ್ದಾರೆಂದು ವರದಿಯಾಗಿದೆ. ಆ ಮೂಲಕ ಭಾರತ ಟೆಸ್ಟ್‌ ತಂಡದಲ್ಲಿ ರಿಷಭ್‌ ಪಂತ್‌ ಅವರ ಸ್ಥಾನವನ್ನು ಜಗದೀಶನ್‌ ತುಂಬಲಿದ್ದಾರೆಂದು ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಇದು ಸತ್ಯವಾದರೆ ಐದನೇ ಟೆಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್‌ ಅವರ ಸ್ಥಾನವನ್ನು ಎನ್‌ ಜಗದೀಶನ್‌ ತುಂಬುವುದರಲ್ಲಿ ಅನುಮಾನವೇ ಇಲ್ಲ.

ಭಾರತ ತಂಡದ ಮೊದಲ ಇನಿಂಗ್ಸ್‌ ಸ್ಕೋರ್

ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಕಣಕ್ಕಿಳಿದ ಕನ್ನಡಿಗ ಕೆಎಲ್ ರಾಹುಲ್ 46 ರನ್ ಬಾರಿಸಿದರೆ, ಯಶಸ್ವಿ ಜೈಸ್ವಾಲ್ 58 ರನ್​ ಕಲೆಹಾಕಿ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಳಿದ ಸಾಯಿ ಸುದರ್ಶನ್ 61 ರನ್​ ಗಳಿಸಿ ತಮ್ಮ ಮೇಲಿದ್ದ ನಿರೀಕ್ಷೆಯನ್ನು ಉಳಿಸಿಕೊಂಡಿದ್ದಾರೆ. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶುಭ್‌ಮನ್‌ ಗಿಲ್‌ 12 ರನ್‌ ಗಳಿಸಿ ಬೆನ್‌ ಸ್ಟೋಕ್ಸ್‌ನ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

IND vs ENG: ನಾಲ್ಕನೇ ಟೆಸ್ಟ್‌ಗೆ ರಿಷಭ್‌ ಪಂತ್‌ ಲಭ್ಯತೆ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ!

ಹಾಗೆಯೇ ರಿಷಭ್ ಪಂತ್ ಗಾಯದ ನಡುವೆಯೂ ತಂಡಕ್ಕೆ 54 ರನ್‌ಗಳ ಕೊಡುಗೆ ನೀಡಿದ್ದಾರೆ. ಶಾರ್ದುಲ್‌ ಠಾಕೂರ್‌ 40 ರನ್‌ ಕೆಲೆಹಾಕಿ ತಂಡಕ್ಕೆ ಆಸರೆಯಾದರು. ಇನ್ನು ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಜಡೇಜಾ 20 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿ ಮೈದಾನದಿಂದ ಹೊರ ನಡೆದರು. ವಾಷಿಂಗ್ಟನ್‌ ಸುಂದರ್‌ ಕೂಡ ಕೆಲಹೊತ್ತು ಮೈದಾನದಲ್ಲಿದ್ದು, 27ರನ್‌ ಗಳಿಸಿ ಔಟ್‌ ಆದರು. ಜಸ್‌ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್‌ ಸಿರಾಜ್‌ ಕ್ರಮವಾಗಿ 4 ಮತ್ತು 5 ರನ್‌ ಕಲೆಹಾಕಿದರು. ಒಟ್ಟಾರೆಯಾಗಿ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358ರನ್‌ ಕಲೆಹಾಕಿದೆ.

ಬರಹ: ಕೆ ಎನ್ ರಂಗು ಚಿತ್ರದುರ್ಗ