ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG 4th Test: ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌!

IND vs ENG 4th Test: ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ 358 ರನ್‌ಗಳಿಗೆ ಆಲ್‌ಔಟ್‌ ಆಗಿದೆ. ಮೊದಲನೇ ದಿನ 264 ರನ್‌ಗಳನ್ನು ಕಲೆ ಹಾಕಿದ್ದ ಪ್ರವಾಸಿಗರು, ಎರಡನೇ ದಿನ 100 ರನ್‌ಗಳನ್ನು ಕೂಡ ಸೇರಿಸಲು ಸಾಧ್ಯವಾಗಲಿಲ್ಲ. ಭಾರತದ ಪರ ಪ್ರಥಮ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌ ಹಾಗೂ ರಿಷಭ್‌ ಪಂತ್‌ ಅರ್ಧಶತಕಗಳನ್ನು ಬಾರಿಸಿದರು.

ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌!

ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

Profile Ramesh Kote Jul 24, 2025 7:08 PM

ಮ್ಯಾಂಚೆಸ್ಟರ್‌: ರಿಷಭ್‌ ಪಂತ್‌ (54 ರನ್‌) ಅರ್ಧಶತಕದ ಹೊರತಾಗಿಯೂ ಬೆನ್‌ ಸ್ಟೋಕ್ಸ್‌ (72ಕ್ಕೆ 5) ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಭಾರತ ತಂಡ, ನಾಲ್ಕನೇ ಟೆಸ್ಟ್‌ ಪಂದ್ಯದ (IND vs ENG) ಎರಡನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ 358 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆದರೆ, ಪಂದ್ಯದ ಮೊದಲನೇ ದಿನ ಉತ್ತಮವಾಗಿ ಬ್ಯಾಟ್‌ ಮಾಡಿ 264 ರನ್‌ ಕಲೆ ಹಾಕಿದ್ದ ಟೀಮ್‌ ಇಂಡಿಯಾ, ಎರಡನೇ ದಿನ ಕನಿಷ್ಠ 100 ರನ್‌ ಗಳನ್ನು ಸೇರಿಸಲು ಸಾಧ್ಯವಾಗಲಿಲ್ಲ. ಇದರ ಶ್ರೇಯ ಇಂಗ್ಲೆಂಡ್‌ ಬೌಲರ್‌ಗಳಿಗೆ ಸಲ್ಲಬೇಕಾಗುತ್ತದೆ. ವಿಶೇಷವಾಗಿ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ (Ben Stokes) ಅವರು ಮಾರಕ ಬೌಲಿಂಗ್‌ ದಾಳಿ ನಡೆಸಿ 5 ವಿಕೆಟ್‌ಗಳ ಸಾಧನೆಯನ್ನು ಮಾಡಿದರು.

ಗುರುವಾರ ಬೆಳಿಗ್ಗೆ 4 ವಿಕೆಟ್‌ ನಷ್ಟಕ್ಕೆ 264 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ್ದ ಭಾರತ ತಂಡಕ್ಕೆ ಇಂಗ್ಲೆಂಡ್‌ ಬೌಲರ್‌ಗಳು ಆಘಾತ ನೀಡಿದರು. ಯಾವೊಬ್ಬ ಭಾರತೀಯ ಬ್ಯಾಟ್ಸ್‌ಮನ್‌ ಎರಡನೇ ದಿನ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಸಮಯವನ್ನು ಕಳೆಯಲಿಲ್ಲ. ಮೊದಲನೇ ದಿನ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ರವೀಂದ್ರ ಜಡೇಜಾ (20), ಎರಡನೇ ದಿನ ಬಹುಬೇಗ ವಿಕೆಟ್‌ ಒಪ್ಪಿಸಿದರು. ಅವರು 85ನೇ ಓವರ್‌ನಲ್ಲಿ ಜೋಫ್ರಾ ಆರ್ಚರ್‌ ಎಸೆತದಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್‌ ಕೊಟ್ಟರು.

IND vs ENG: ನಾಲ್ಕನೇ ಟೆಸ್ಟ್‌ಗೆ ರಿಷಭ್‌ ಪಂತ್‌ ಲಭ್ಯತೆ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ!

ನಂತರ ಆರನೇ ವಿಕೆಟ್‌ಗೆ ಜೊತೆಯಾದ ಶಾರ್ದುಲ್‌ ಠಾಕೂರ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಜೋಡಿ ಕೆಲ ಕಾಲ ಆಂಗ್ಲರ ಮಾರಕ ದಾಳಿಯನ್ನು ಮೆಟ್ಟಿ ನಿಂತಿತು. ಈ ಇಬ್ಬರೂ 48 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ಅತ್ಯುತ್ತಮ ಬ್ಯಾಟ್‌ ಮಾಡುತ್ತಿದ್ದ ಶಾರ್ದುಲ್‌ ಠಾಕೂರ್‌ 88 ಎಸೆತಗಳಲ್ಲಿ 41 ರನ್‌ಗಳಿಸಿ ಅರ್ಧಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು.



ಕೆಲ ಕಾಲ ಇಂಗ್ಲೆಂಡ್‌ ಬೌಲಿಂಗ್‌ ದಾಳಿಯನ್ನು ಎದುರಿಸಿದ್ದ ವಾಷಿಂಗ್ಟನ್‌ ಸುಂದರ್‌ 90 ಎಸೆತಗಳಲ್ಲಿ 27 ರನ್‌ ಗಳಿಸಿ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ, ಅವರನ್ನು ನಾಯಕ ಬೆನ್‌ ಸ್ಟೋಕ್ಸ್‌ ಔಟ್‌ ಮಾಡಿದರು. ಅನ್ಶುಲ್‌ ಕಾಂಬೋಜ್‌, ಜಸ್‌ಪ್ರೀತ್‌ ಬುಮ್ರಾ ಹಾಗೂ ಮೊಹಮ್ಮದ್‌ ಸಿರಾಜ್‌ ಬೇಗ ವಿಕೆಟ್‌ ಒಪ್ಪಿಸಿದರು.



ಗಾಯದ ಹೊರತಾಗಿಯೂ ರಿಷಭ್‌ ಪಂತ್‌ ಅರ್ಧಶತಕ

ಮೊದಲನೇ ದಿನ 37 ರನ್‌ ಗಳಿಸಿ ಗಾಯಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌, ಎರಡನೇ ದಿನ ಕ್ರೀಸ್‌ಗೆ ಬಂದು ಅಚ್ಚರಿ ಮೂಡಿಸಿದ್ದರು. ಅವರ ಬಲಗಾಲಿನ ಪಾದಕ್ಕೆ ಬುಧವಾರ ಚೆಂಡು ಬಲವಾಗಿ ತಗುಲಿತ್ತು. ಗುರುವಾರ ನೋವು ನಿವಾರಕಗಳನ್ನು ತೆಗೆದುಕೊಂಡು ಕ್ರೀಸ್‌ಗೆ ಬಂದಿದ್ದ ಪಂತ್‌, ಬ್ಯಾಕ್‌ ಫುಟ್‌ನಲ್ಲಿಯೇ ಬ್ಯಾಟ್‌ ಮಾಡಿದರು. ಅವರು 75 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಮೂರು ಬೌಂಡರಿಗಳೊಂದಿಗೆ 54 ರನ್‌ಗಳನ್ನು ಗಳಿಸಿದರು. ಆ ಮೂಲಕ ಈ ಸರಣಿಯಲ್ಲಿ ಮತ್ತೊಂದು ಅರ್ಧಶತಕವನ್ನು ಸಿಡಿಸಿದರು. ಅಂತಿಮವಾಗಿ ಅವರು ಜೋಫ್ರಾ ಆರ್ಚರ್‌ಗೆ ಕ್ಲೀನ್‌ ಬೌಲ್ಡ್‌ ಆದರು.

IND vs ENG: ವಾಷಿಂಗ್ಟನ್‌ ಸುಂದರ್‌ಗೂ ಮುನ್ನ ಶಾರ್ದುಲ್‌ ಠಾಕೂರ್‌ ಆಡಿದ್ದಕ್ಕೆ ದಿನೇಶ್‌ ಕಾರ್ತಿಕ್‌ ಆಕ್ರೋಶ!

ಬೆನ್‌ ಸ್ಟೋಕ್ಸ್‌ಗೆ 5 ವಿಕೆಟ್‌

ಇಂಗ್ಲೆಂಡ್‌ ತಂಡದ ಪರ ಬೌಲಿಂಗ್‌ನಲ್ಲಿ ಗಮನ ಸೆಳೆದಿದ್ದು ಬೆನ್‌ ಸ್ಟೋಕ್ಸ್‌ ಹಾಗೂ ಜೋಫ್ರಾ ಆರ್ಚರ್‌. ಮಾರಕ ಬೌಲಿಂಗ್‌ ದಾಳಿ ನಡೆಸಿದ ಸ್ಟೋಕ್ಸ್‌ ಬೌಲ್‌ ಮಾಡಿದ 24 ಓವರ್‌ಗಳಿಗೆ 72 ರನ್‌ಗಳಿಗೆ 5 ವಿಕೆಟ್‌ ಕಬಳಿಸಿದರು. ಇವರಿಗೆ ಸಾಥ್‌ ನೀಡಿದ ಜೋಫ್ರಾ ಆರ್ಚರ್‌ 73 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು.