ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ಇಂದ್ರನ ಅಮರಾವತಿಯೇ?

ಟೋಕಿಯೋ, ಸಿಂಗಾಪುರದಂಥ ವಿಶ್ವದರ್ಜೆಯ ನಗರವಾಗಿ ಅಮರಾವತಿ ರೂಪುಗೊಳ್ಳಬೇಕು ಎಂಬ ಕನಸಿನ ಸಾಕಾರದ ಭಾಗವಾಗಲಿದೆಯಂತೆ ಈ ನಿರ್ಮಾಣ ಕಾಮಗಾರಿ. ಸರಕಾರವೊಂದರ ಆಡಳಿತ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಮೂಲಭೂತ ಸೌಕರ್ಯಗಳ ರೂಪಣೆಯಾಗಬೇಕು, ರಾಜ್ಯದ ರಾಜಧಾನಿ ಬಹುಜನರ ನಿರೀಕ್ಷೆಗೆ ತಕ್ಕಂತೆ ಸುಸಜ್ಜಿತವಾಗಿರಬೇಕು ಎಂಬ ಆಶಯಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ

ಇದು ಇಂದ್ರನ ಅಮರಾವತಿಯೇ?

Profile Ashok Nayak Apr 15, 2025 6:18 AM

ಆಂಧ್ರಪ್ರದೇಶ ಸರಕಾರವು ರಾಜ್ಯದ ರಾಜಧಾನಿಯಾಗಿ ಅಮರಾವತಿಯನ್ನು ರೂಪಿಸಲು 65 ಸಾವಿರ ಕೋಟಿ ರುಪಾಯಿ ಮೊತ್ತದ ಯೋಜನೆಯನ್ನು ಮರಳಿ ಆರಂಭಿಸಿದೆ. ಕೃಷ್ಣಾ ನದಿಯ ದಂಡೆಯ ಮೇಲೆ ಆಕರ್ಷಕ ಶೈಲಿಯಲ್ಲಿ ಈ ಭವ್ಯನಗರಿ ರೂಪುಗೊಳ್ಳಲಿದೆಯಂತೆ. ನಿರ್ಮಾಣದ ತರುವಾಯ ಇದು ವಿಶ್ವದೆಲ್ಲೆಡೆಯ ವೃತ್ತಿಪ್ರವೀಣರು, ಉದ್ಯಮಿಗಳು, ಹೂಡಿಕೆದಾರರನ್ನು ಆಕರ್ಷಿಸಲಿದೆಯಂತೆ.

ಟೋಕಿಯೋ, ಸಿಂಗಾಪುರದಂಥ ವಿಶ್ವದರ್ಜೆಯ ನಗರವಾಗಿ ಅಮರಾವತಿ ರೂಪುಗೊಳ್ಳಬೇಕು ಎಂಬ ಕನಸಿನ ಸಾಕಾರದ ಭಾಗವಾಗಲಿದೆಯಂತೆ ಈ ನಿರ್ಮಾಣ ಕಾಮಗಾರಿ. ಸರಕಾರವೊಂದರ ಆಡಳಿತ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಮೂಲಭೂತ ಸೌಕರ್ಯಗಳ ರೂಪಣೆಯಾಗಬೇಕು, ರಾಜ್ಯದ ರಾಜಧಾನಿ ಬಹುಜನರ ನಿರೀಕ್ಷೆಗೆ ತಕ್ಕಂತೆ ಸುಸಜ್ಜಿತವಾಗಿರಬೇಕು ಎಂಬ ಆಶಯಗಳನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ.

ಇದನ್ನೂ ಓದಿ:Vishwavani Editorial: ಮತ್ತೆ ಬಾಲ ಬಿಚ್ಚಿದರೇ ಉಗ್ರರು?

ಆದರೆ, ಆಶಯದ ಈಡೇರಿಕೆಯ ಭರದಲ್ಲಿ ಅದಕ್ಕೆ ಭವ್ಯತೆಯ ಲೇಪ ಕೊಡಬೇಕು, ಅದರ ಸೌಂದ ರ್ಯ ಕಣ್ಣು ಕುಕ್ಕುವಂತಿರಬೇಕು ಎಂದು ಆಶಿಸುವುದು ಸ್ವಾಗತಾರ್ಹವಲ್ಲ. ರಾಜಧಾನಿ ಅಮರಾವತಿ ‘ಇಂದ್ರನ ಅಮರಾವತಿ’ಯಂತೆ ಕಂಗೊಳಿಸಬೇಕು ಎಂದು ಹಪಹಪಿಸುವುದು ವರ್ಣ ಚಿತ್ರದ ಹೂರಣಕ್ಕಿಂತ ಚಿತ್ರದ ಚೌಕಟ್ಟಿಗೇ ಹೆಚ್ಚು ಒತ್ತುನೀಡುವ ಕಸರತ್ತಾಗುವುದಿಲ್ಲವೇ? ಅಮರಾ ವತಿಯ ರೂಪಣೆಗೆ ತೆಗೆದಿರಿಸಲಾದ 65 ಸಾವಿರ ಕೋಟಿ ರುಪಾಯಿ ಹಣ ಸಣ್ಣ ಮೊತ್ತವೇನಲ್ಲ.

ಕೆಲ ಜನಕಲ್ಯಾಣ ಯೋಜನೆಗಳಿಗೂ ದಕ್ಕದಷ್ಟು ಮೊತ್ತ ಇದಾಗಿರಲಿಕ್ಕೂ ಸಾಕು. ಅನ್ನ-ಬಟ್ಟೆ-ವಸತಿ ಮನುಷ್ಯನ ಮೂಲಭೂತ ಅವಶ್ಯಕತೆಗಳು; ಇವಕ್ಕೆ ಯಥೋಚಿತ ಮಾನ್ಯತೆ ಇದ್ದರೇನೇ ಚೆಂದ. ಈ ಬಾಬತ್ತುಗಳಲ್ಲಿ ಅತಿರೇಕವಾದರೆ ಅದು ಸಹ್ಯವಾಗದು. ನಿರ್ದಿಷ್ಟ ಯೋಜನೆಯೊಂದಕ್ಕೆ ಜನರ ಹಣವನ್ನು ಬಳಸುವಾಗ, ಸಂಬಂಧಪಟ್ಟವರು ಇಂಥ ಆಯಾಮದಲ್ಲೂ ಸಾಕಷ್ಟು ಸಲ ಯೋಚಿಸ ಬೇಕಾಗುತ್ತದೆ, ಅಲ್ಲವೇ?