ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ ನನ್ನನ್ನು ಹೊರಗಟ್ಟಿದಿರಿ' ಎಂದಿದ್ದ ಬಾನು ಮುಷ್ತಾಕ್ ಹಳೆಯ ವಿಡಿಯೋ ವೈರಲ್

Mysuru Dasara: ʼಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ. ಕೆಂಪು ಮತ್ತು ಹಳದಿ, ಅರಿಶಿನ-ಕುಂಕುಮದ ಬಾವುಟ ಹಾಕಿ, ಅರಿಶಿನ-ಕುಂಕುಮ ಲೇಪಿಸಿ ಭುವನೇಶ್ವರಿಯಾಗಿ ಮಂದಾಸನದ ಮೇಲೆ ಕೂರಿಸಿ ಬಿಟ್ಟಿರಿ. ನಾನೆಲ್ಲಿ ನಿಲ್ಲಬೇಕು. ನಾನೇನನ್ನು ನೋಡಲಿ, ನಾನೆಲ್ಲಿ ತೊಡಗಿಕೊಳ್ಳಬೇಕು' ಎಂದು ಬಾನು ಮುಷ್ತಾಕ್‌ ತಮ್ಮ ಭಾಷಣದಲ್ಲಿ ಪ್ರಶ್ನಿಸಿದ್ದರು.

ಕನ್ನಡ ಭುವನೇಶ್ವರಿ ಬಗ್ಗೆ ಮಾತನಾಡಿದ ಬಾನು ಮುಷ್ತಾಕ್ ಹಳೆಯ ವಿಡಿಯೋ ವೈರಲ್

ಹರೀಶ್‌ ಕೇರ ಹರೀಶ್‌ ಕೇರ Aug 25, 2025 12:11 PM

ಬೆಂಗಳೂರು: ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಬುಕ‌ರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ (Banu Mushtaq) ಅವರ ಹೆಸರನ್ನು ಘೋಷಿಸಿದ್ದು, ಇದರ ಬೆನ್ನಲ್ಲೇ ಜನ ಸಾಹಿತ್ಯ ಸಮ್ಮೇಳನ -2023ರಲ್ಲಿ ಬಾನು ಮುಷ್ತಾಕ್ ಅವರು ಮಾಡಿರುವ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಭಾಷಣದಲ್ಲಿ ಅವರು ಕನ್ನಡ ತಾಯಿಯ ಭುವನೇಶ್ವರಿ ಸ್ವರೂಪವನ್ನು ಪ್ರಶ್ನಿಸಿರುವುದು ಕಂಡುಬಂದಿದೆ.

ಈ ವಿಡಿಯೋವನ್ನು ಹಂಚಿಕೊಂಡಿಕೊಂಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪಿಕೊಂಡು ಪುಷ್ಪಾರ್ಚನೆ ಮಾಡಿಯಾರೆ ಬೂಕರ್ ಭಾನು? ಎಂದು ಪ್ರಶ್ನಿಸಿದ್ದಾರೆ. ಇದೇ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಅವರೂ ಹಂಚಿಕೊಂಡಿದ್ದು, ಕನ್ನಡ ಭುವನೇಶ್ವರಿಯನ್ನು ಸಹಿಸಲಾಗದವರು ಚಾಮುಂಡಿ ತಾಯಿಯ ವೈಭವಕ್ಕೆ ತಲೆಬಾಗಲು ಒಪ್ಪಿದ್ದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಾನು ಮುಷ್ತಾಕ್ ಅವರು, ಬಿಳಿಮಲೆ ಅವರು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಒಬ್ಬ ಅಲ್ಪ ಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆ ಏನು ಎಂಬುದನ್ನು ನಿಮ್ಮ ಮುಂದಿಡುತ್ತಿದ್ದೇನೆ. ನಿಮಗೆ ಇಷ್ಟ ಆಗುತ್ತೋ, ಕಷ್ಟ ಆಗುತ್ತೋ ನನಗೆ ಗೊತ್ತಿಲ್ಲ. ಕನ್ನಡವನ್ನು ಭಾಷೆಯಾಗಿ ಬೆಳೆಯಲು, ಕನ್ನಡವನ್ನು ಭಾಷೆಯಾಗಿ ಬಾನು ಮುಷ್ತಾಕ್ ಮಾತನಾಡುವುದಕ್ಕೆ, ಆಕೆಯ ಮನೆಯವರು ಮಾತನಾಡುವುದಕ್ಕೆ ನೀವು ಅವಕಾಶವನ್ನೇ ನೀಡಲಿಲ್ಲ ಎಂದು ಹೇಳಿದ್ದಾರೆ.

ಕನ್ನಡವನ್ನು ಕನ್ನಡ ಭುವನೇಶ್ವರಿಯಾಗಿ ಮಾಡಿಬಿಟ್ಟಿರಿ. ಕೆಂಪು ಮತ್ತು ಹಳದಿ, ಅರಿಶಿನ-ಕುಂಕುಮದ ಬಾವುಟ ಹಾಕಿ, ಅರಿಶಿನ-ಕುಂಕುಮ ಲೇಪಿಸಿ ಭುವನೇಶ್ವರಿಯಾಗಿ ಮಂದಾಸನದ ಮೇಲೆ ಕೂರಿಸಿ ಬಿಟ್ಟಿರಿ. ನಾನೆಲ್ಲಿ ನಿಲ್ಲಬೇಕು. ನಾನೇನನ್ನು ನೋಡಲಿ, ನಾನೆಲ್ಲಿ ತೊಡಗಿಕೊಳ್ಳಬೇಕು? ನನ್ನನ್ನು ಹೊರಗಟ್ಟುವಿಕೆ ಇಂದಿನಿಂದಲ್ಲ, ಎಂದಿನಿಂದಲೋ ಆರಂಭವಾಗಿತ್ತು. ಆದರೆ, ಇಂದು ಪೂರ್ಣಗೊಂಡಿದೆಯಷ್ಟೇ ಎಂದು ಹೇಳಿದ್ದಾರೆ.



ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ... ಎಂಬ ಶ್ಲೋಕವಿದೆ. ಹಾಗೆ ಹೇಳಿ ಮಹಿಳೆಯನ್ನು ಮಂದಾಸನದ ಮೇಲೆ ಕೂರಿಸಿದಾಕ್ಷಣ ದೇವತೆಗಳು ಸಂತುಷ್ಟರಾಗ್ತಾರೆ. ಇಲ್ಲೂ ಕೂಡ ಕನ್ನಡಮ್ಮನನ್ನು ಮಂದಾಸನದ ಮೇಲೆ ಕೂರಿಸಿ ಮಹಿಳೆಯನ್ನು ಹೇಗೆ ತುಳಿಯುತ್ತಾ ಇದ್ದೀರೋ, ದೌರ್ಜನ್ಯ ಮಾಡುತ್ತಿದ್ದೀರೋ, ಹಿಂಸೆ ಮಾಡುತ್ತೀದ್ದೀರೋ,..ಕನ್ನಡ ಭಾಷೆ ಮೇಲೆ ಕೂಡ ನೀವುಗಳು ದೌರ್ಜನ್ಯ ಮಾಡುತ್ತಿದ್ದೀರಿ ಎಂದಿದ್ದಾರೆ.

ನೀವು ನನಗೆ ಉತ್ತರ ಕೊಡಬೇಕು. ಗೋಡೆಗೆ ಒತ್ತರಿಸಿ ಪ್ರಶ್ನೆ ಕೇಳುತ್ತಿದ್ದೇನೆ, ನನಗೆ ಉತ್ತರ ಕೊಡಿ. ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ, ಕನ್ನಡದ ರಥವನ್ನು ಎಳೆದು, ಕನ್ನಡದ ಜಾತ್ರೆಯನ್ನು ಮಾಡಿ, ಕನ್ನಡ ಪರಿಷೆಯನ್ನು ಮಾಡಿ, ಏನು ಮಾಡಿದಿರಿ... ನನ್ನನ್ನು ಹೊರಗಟ್ಟಲು ಇಷ್ಟೊಂದು ಹುನ್ನಾರ ಬೇಕಿತ್ತಾ ನಿಮಗೆ..? ಎಂದು ಪ್ರಶ್ನಿಸಿರುವುದು ಕಂಡು ಬಂದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಬಾನು ಮುಷ್ತಾಕ್ ಅವರು, ಇದೀಗ ಚಾಮುಂಡೇಶ್ವರಿಯನ್ನು ನಾಡದೇವತೆಯಾಗಿ ಒಪ್ಪುತ್ತಾರೆಯೇ ಎಂದು ಪ್ರಶ್ನಿಸುತ್ತಿದ್ದಾರೆ.

ಉದ್ಘಾಟನೆಗೆ ಬಾನು ಸೂಕ್ತ ಅಲ್ಲ: ಪ್ರತಾಪ್‌ ಸಿಂಹ

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರು ಆಯ್ಕೆಯಾಗಿರುವುದಕ್ಕೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ. ಬಾನು ಮುಷ್ತಾಕ್ ಬೂಕರ್ ಪ್ರಶಸ್ತಿ ಪಡೆದಿರುವುದಕ್ಕೆ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ. ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವಲ್ಲ. ಇಸ್ಲಾಂ ಅಲ್ಲಾ ಬಿಟ್ಟರೆ ಬೇರೆ ಯಾರೂ ದೇವರಿಲ್ಲಎನ್ನುತ್ತದೆ . ಹಾಗಾದರೆ ಬಾನು ಮುಷ್ತಾಕ್‌ ಹೇಗೆ ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರೆ? ಅವರ ಧರ್ಮ ಅವರ ಮಾತನ್ನು ಒಪ್ಪುತ್ತಾ ಎಂದು ಬಿಜೆಪಿ ಮುಖಂಡ, ಮಾಜಿ ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ ಬಾನು ಮುಷ್ತಾಕ್ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸಬೇಕು. ಬಾನು ಅವರು ಮುಸ್ಲಿಂ ಆಗಿರುವುದರಿಂದ ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ಅದು ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಸಿಟಿ ರವಿ ಸಹ ಮಾತನಾಡಿದ್ದು, ಚಾಮುಂಡಿ ತಾಯಿ ಮೇಲೆ ನಂಬಿಕೆ, ಭಕ್ತಿ ಇದ್ದರೆ ಅವರು ಉದ್ಘಾಟಿಸುತ್ತಾರೆ, ಈ ಬಗ್ಗೆ ನಾನೇನು ಕಮೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pratap Simha: ತಾಯಿ ಚಾಮುಂಡಿಯನ್ನು ದೇವರು ಅಂತ ಬಾನು ಮುಷ್ತಾಕ್‌ ಒಪ್ಪಿಕೊಳ್ತಾರಾ? ಪ್ರತಾಪ್‌ಸಿಂಹ ಪ್ರಶ್ನೆ