Dharmasthala: ಸುಳ್ಳೇ... ಸುಳ್ಳು... ಸುಜಾತಾ ಭಟ್ ಹೇಳಿದ್ದೆಲ್ಲಾ ಸುಳ್ಳು! ಈಕೆಯ ಮುಖವಾಡ ಕಳಚಿ ಬಿದ್ದಿದ್ದು ಹೇಗೆ?
ಮಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದೆ. ಅನನ್ಯಾ ಭಟ್ ಎಂಬ ಮಗಳೇ ತಮಗೆ ಇಲ್ಲ ಎಂದು ತಾಯಿ ಸುಜಾತಾ ಭಟ್ ಹೇಳಿಕೆ ನೀಡಿದ್ದಾರೆ. ಆಸ್ತಿ ವಿವಾದಕ್ಕಾಗಿ ಈ ಕಟ್ಟುಕಥೆ ಸೃಷ್ಟಿಸಿದ್ದಾಗಿ ಅವರು ಒಪ್ಪಿಕೊಂಡಿದ್ದು, ಈ ರೀತಿ ಮಾಡುವಂತೆ ಗಿರೀಶ್ ಮಟ್ಟಣ್ಣನವರ್ ಹಾಗೂ ಜಯಂತ್ ಟಿ ಎಂಬುವವರು ಹೇಳಿಕೊಟ್ಟಿದ್ದರು ಎಂದು ತಿಳಿಸಿದ್ದಾರೆ.

ಸುಜಾತಾ ಭಟ್

ಧರ್ಮಸ್ಥಳ: ಸುಜಾತಾ ಭಟ್ (Sujata Bhat) ಎಂಬ ವೃದ್ಧೆ ತನ್ನ ಮಗಳು ಅನನ್ಯ ಭಟ್ (Ananya Bhat) 2003 ರಲ್ಲಿ ಧರ್ಮಸ್ಥಳದಲ್ಲಿ (Dharmasthala) ಕಾಣೆಯಾಗಿದ್ದಾಳೆ ಎಂದು ಆರೋಪಿಸಿದ್ದು, ಪ್ರಭಾವಿ ವ್ಯಕ್ತಿಗಳು ಈ ಪ್ರಕರಣವನ್ನು ಮುಚ್ಚಿಹಾಕಿದ್ದಾರೆ ಎಂದಿದ್ದಾರೆ. ಆದರೆ, ದಾಖಲೆಗಳು, ಸಾಕ್ಷಿಗಳು ಮತ್ತು ಎಸ್‌ಐಟಿ ತನಿಖೆಯ ಫಲಿತಾಂಶಗಳು ಅವರ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಗಂಭೀರ ಸಂದೇಹಗಳನ್ನು ಹುಟ್ಟುಹಾಕಿವೆ.
ಅನನ್ಯ ಭಟ್ ದಾಖಲೆಗಳಿಲ್ಲ
ಸುಜಾತಾ, ತನ್ನ ಮಗಳು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು ಎಂದಿದ್ದಾರೆ. ಆದರೆ, ಕಾಲೇಜಿನ ದಾಖಲೆಗಳಲ್ಲಿ ‘ಅನನ್ಯ ಭಟ್’ ಎಂಬ ಹೆಸರಿನ ವಿದ್ಯಾರ್ಥಿಯ ಯಾವುದೇ ದಾಖಲೆ ಇಲ್ಲ. ಶಾಲೆಯ ದಾಖಲೆಗಳು, ಪ್ರವೇಶ ಫಾರ್ಮ್‌ಗಳು ಅಥವಾ ಪ್ರಮಾಣಪತ್ರಗಳು ಲಭ್ಯವಿಲ್ಲ. ಕುಟುಂಬದವರು ಮತ್ತು ಆಪ್ತರೂ ಕೂಡ ಸುಜಾತಾರಿಗೆ ಮಗಳಿದ್ದಾಳೆ ಎಂಬುದನ್ನು ಗೊತ್ತಿಲ್ಲ ಎಂದಿದ್ದಾರೆ.
ಎಸ್‌ಐಟಿ ತನಿಖೆಯ ಫಲಿತಾಂಶ
ಮಾಜಿ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ತಲೆಬುರುಡೆಯೊಂದನ್ನು ಸಾಕ್ಷಿಯಾಗಿ ಒದಗಿಸಿದ್ದ. ಆದರೆ, ಎಸ್‌ಐಟಿ ತನಿಖೆಯಲ್ಲಿ ಆ ಶವ ಗಂಡಸಿನದ್ದು ಎಂದು ದೃಢಪಟ್ಟಿದ್ದು, ಸುಜಾತಾರ ಆರೋಪವನ್ನು ದುರ್ಬಲಗೊಳಿಸಿದೆ.
ಈ ಸುದ್ದಿಯನ್ನೂ ಓದಿ: Dharmasthala Case: 'ಧರ್ಮದ ಉಳಿವಿಗೆ ಧರ್ಮ ಯುದ್ಧ' ಯಾತ್ರೆ ಆರಂಭಿಸಿದ ಬಿಜೆಪಿ
ದಿನಕ್ಕೊಂದು ಹೇಳಿಕೆ
ಸುಜಾತಾ ಅವರು ನನ್ನನ್ನು ಅಪಹರಣ ಮಾಡಿ ಕುರ್ಚಿಗೆ ಕಟ್ಟಲಾಗಿತ್ತು, ಆಸ್ಪತ್ರೆಯಲ್ಲಿ ಮೂರು ತಿಂಗಳು ಕೋಮಾದಲ್ಲಿದ್ದೆ ಎಂದಿದ್ದಾರೆ. ಆದರೆ, ಆ ಪ್ರದೇಶದ ಆಸ್ಪತ್ರೆಗಳಲ್ಲಿ ಅವರ ಹೇಳಿಕೆಗೆ ತಕ್ಕ ದಾಖಲೆಗಳಿಲ್ಲ. ಅವರು ಕೋಲ್ಕತ್ತಾದ ಸಿಬಿಐನಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ ಮಾಡಿದ್ದೆ ಎಂದರೂ, ಸಿಬಿಐ ಯಾವುದೇ ಉದ್ಯೋಗ ದಾಖಲೆ ಇಲ್ಲ ಎಂದಿದೆ. 1999 ರಿಂದ 2007 ರವರೆಗೆ ಸುಜಾತಾ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿ ಪ್ರಭಾಕರ ಬಾಳಿಗ ಜೊತೆ ವಾಸಿಸುತ್ತಿದ್ದು, ಸ್ಥಳೀಯ ಪತ್ರಿಕೆಗಳು ಇವರನ್ನು “ಮಕ್ಕಳಿಲ್ಲದ ಪ್ರಾಣಿಪ್ರಿಯರು” ಎಂದು ವರ್ಣಿಸಿದ್ದವು, ಇದು ಅವರ ಈಗಿನ ಕಥೆಗೆ ವಿರುದ್ಧವಾಗಿದೆ.
ಸುಜಾತಾ ಅವರು ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬದವರು ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ, ಆದರೆ ಆಕೆಯ ಕಥೆಯಲ್ಲಿ ವ್ಯತ್ಯಾಸಗಳಿವೆ. ಎಸ್‌ಐಟಿ ತನಿಖೆಯಲ್ಲಿ ಸುಜಾತಾ ಅವರ ಕಥೆಯನ್ನು ಸುಳ್ಳು ಎಂದು ಸಾಬೀತಾಗಿದೆ. ಭಕ್ತರು ಮತ್ತು ಸ್ಥಳೀಯರು, ಧರ್ಮಸ್ಥಳದ ವಿರುದ್ಧ ಉದ್ದೇಶಪೂರ್ವಕ ತಪ್ಪು ಮಾಹಿತಿ ಹರಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.