Varamahalaskhmi : ಬೆಲೆ ಏರಿಕೆ ನಡುವೆ ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿ ಜೋರೋ ಜೋರು
ಶ್ರಾವಣ ಮಾಸದ ನಡುವೆ ಬಂದಿರುವ ಸಾಲು ಸಾಲು ಹಬ್ಬಗಳಲ್ಲಿ ವರಮಹಾ ಲಕ್ಷ್ಮಿ ಹಬ್ಬಕ್ಕೆ ಇತ್ತೀಚೆಗೆ ಇನ್ನಿಲ್ಲದ ಮಹತ್ವ ಪ್ರಾಪ್ತಿಯಾಗಿದೆ.ವ್ರತಾಚಾರಣೆ ಮರೆಯಾಗಿ ಹಬ್ಬದ ಸ್ಥಾನ ಪಡೆದಿರುವ ಪರಿಣಾಮ ಹಳ್ಳಿ ನಗರ ಪಟ್ಟಣ ಎನ್ನದೆ ಎಲ್ಲೆಡೆ ಶ್ರದ್ಧಾಭಕ್ತಿಗಿಂತ ಅದ್ಧೂರಿ ತನಕ್ಕೆ ಜನತೆ ಮುಂದಾಗಿದ್ದಾರೆ.

ಎಪಿಎಂಸಿಯಲ್ಲಿ ಹೂ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿದ್ದ ಹೂಗಳು

ಚಿಕ್ಕಬಳ್ಳಾಪುರ: ಶ್ರಾವಣ ಮಾಸದ ನಡುವೆ ಬಂದಿರುವ ಸಾಲು ಸಾಲು ಹಬ್ಬಗಳಲ್ಲಿ ವರಮಹಾ ಲಕ್ಷ್ಮಿ ಹಬ್ಬಕ್ಕೆ ಇತ್ತೀಚೆಗೆ ಇನ್ನಿಲ್ಲದ ಮಹತ್ವ ಪ್ರಾಪ್ತಿಯಾಗಿದೆ.ವ್ರತಾಚಾರಣೆ ಮರೆಯಾಗಿ ಹಬ್ಬದ ಸ್ಥಾನ ಪಡೆದಿರುವ ಪರಿಣಾಮ ಹಳ್ಳಿ ನಗರ ಪಟ್ಟಣ ಎನ್ನದೆ ಎಲ್ಲೆಡೆ ಶ್ರದ್ಧಾಭಕ್ತಿಗಿಂತ ಅದ್ಧೂರಿ ತನಕ್ಕೆ ಜನತೆ ಮುಂದಾಗಿದ್ದಾರೆ.
ಹಬ್ಬಕ್ಕೆ ಮುನ್ನಾ ದಿನವಾದ ಗುರುವಾರ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆ ಸೇರಿದಂತೆ, ಬಜಾರ್‌ರಸ್ತೆ, ಎಂ.ಜಿ. ರಸ್ತೆಯಲ್ಲಿ ಖರೀದಿ ಜೋರಾಗಿ ಸಾಗಿದ್ದು ಬೆಲೆ ಏರಿಕೆ ನಡುವೆ ಜನತೆ ಮುಗಿ ಬಿದ್ದಿದ್ದ ದೃಶ್ಯ÷ಗಳು ಸಾಮಾನ್ಯವಾಗಿದ್ದವು.

ಒಂದೆಡೆ ಶ್ರಾವಣ ಮಾಸ, ಮತ್ತೊಂದೆಡೆ ವರಮಹಾಲಕ್ಷ್ಮೀ ವ್ರತಾಚರಣೆ ಒಟ್ಟೊಟ್ಟಿಗೆ ಬಂದ ಪರಿಣಾಮ ಹೂವಿನ ಬೆಲೆ ಗಗನ ಮುಟ್ಟಿದೆ.ಇದೇ ಸಾಲಿನಲ್ಲಿ ಹಣ್ಣು ಕಾಯಿ,ಸಿಹಿಯ ಬೆಲೆ ಸೇರಿ ಇತರೆ ಸಾಮಗ್ರಿಗಳ ದರವೂ ತೀವ್ರ ಏರಿಕೆ ಕಂಡಿದೆ.
ನಗರದ ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡುಬAತು. ಮಂಗಳವಾರ ಸೇವಂತಿಗೆ ಹೂವು ಒಂದು ಕೆಜಿಗೆ ೩೫೦ ರಿಂದ ೪೫೦ರ ವರೆಗೆ ಮಾರಾಟ ವಾಗಿದೆ. ಒಂದು ಮಲ್ಲಿಗೆ ಹಾರ ೫೦೦ ರೂಪಾಯಿ, ಸುಗಂಧರಾಜ ೨೫೦,ರೂಗೆ ಗುಲಾಭಿ ೬೦೦-೭೦೦ ಮಾರಾಟವಾಗುತ್ತಿತ್ತು.
ವಾರದ ಹಿಂದೆ ಮಲ್ಲಿಗೆ ಮೊಗ್ಗು ಕೆಜಿಗೆ ೧೫೦-೨೦೦ ರೂ.ಗಳೊಳಗಿದ ಬೆಲೆ ಗುರುವಾರ ಕೆ.ಜಿ. ಮಲ್ಲಿಗೆ ಹೂವು ರೂ ೧೦೦೦ ರೂ. ದಾಟಿತ್ತು. ೪೦೦-೫೦೦ ರೂ. ಇದ್ದ ಕನಕಾಂಬರ ಹೂವು ೧೪೦೦-೨೦೦೦ ರೂ, ಮಲ್ಲಿಗೆ ಹೂ ಕೆಜಿಗೆ ೧೦೦೦-೧೨೦೦ ರೂ.ಗೆ ತಲುಪಿದೆ. ಕಳೆದ ವರ್ಷ ಮಳೆ ಹೆಚ್ಚಾಗಿ ಬಿದ್ದಿರುವುದರಿಂದ ತಾವರೆ ಹೂವಿಗೆ ಕೊರತೆಯಿಲ್ಲ, ಬೆಲೆಯೂ ಕಡಿಮೆಯಾಗಬೇಕಿತ್ತು. ಆದರೆ, ಅದೂ ಕಡಿಮೆ ಇಲ್ಲ. ಲಕ್ಷ್ಮೀ ಹಬ್ಬಕ್ಕೆ ತಾವರೆ ಹಾಗೂ ಕೇದಗೆ ಬಹುಮುಖ್ಯವಾಗಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ತಾವರೆ ಹೂವಿನ ಬೆಲೆ ೩೦-೫೦ ರೂ. ಹಾಗೂ ಕೇದಗೆ ೭೦-೧೨೦ ರೂ. ಮೀರಿದೆ.
ಇದನ್ನೂ ಓದಿ: Varamahalaxmi festival 2025: ಇಂದು ವರಮಹಾಲಕ್ಷ್ಮಿ ವ್ರತ; ಏನಿದರ ವಿಶೇಷತೆ?
ಗುಲಾಬಿ ಕೆ.ಜಿ ರೂ ೧೮೦ ರಿಂದ ೩೦೦, ಕಾಕಡ ಕೆಜಿಗೆ ರೂ ೯೦೦ ರಿಂದ ೧೧೦೦, ಕೇವಲ ೫-೧೦ರೂ.ಗೆ ಸಿಗುತ್ತಿದ್ದ ಚೆಂಡು ಹೂವಿನ ಬೆಲೆ ಕೇಳಿದರೆ ಗ್ರಾಹಕರು ಬೆಚ್ಚಿಬೀಳುವಂತಾಗಿದೆ. ಸಗಟು ದರದಲ್ಲೇ ಕೆ.ಜಿ. ಚೆಂಡು ಹೂವಿನ ಬೆಲೆ ೬೦-೧೦೦ ರೂ.ಗೆ ತಲುಪಿದೆ. ಅಲಂಕಾರಿಕ ಹೂಗಳಾದ ಗ್ಲಾಡಿಯೋ ಲಸ್ ೩ ಕಡ್ಡಿಗಳಿಗೆ ರೂ ೫೦, ಇತರೆ ಅಂಲAಕಾರಿಕ ಹೂ ಗುಚ್ಚಗಳಿಗೆ ೫೦- ೧೫೦ ರೂ, ಗುಲಾಬಿ ಬಂಚ್ ಒಂದಕ್ಕೆ ೧೫೦-೨೫೦ರೂ, ದವನ, ಕಮಗಗ್ಗರಿ ಸೇರಿದಂತೆ ಸುವಾಸನಾ ಭರಿತ ಗಿಡಗಳಿಗೆ ೧೦೦-೧೫೦ರೂ, ಪತ್ರೆ ಕೆಜಿಗೆ ೮೦-೧೦೦ ರೂಗಳಿಗೆ ಮಾರಾಟವಾದವು.
ಕೆಲವೆಡೆ ಮಳೆ ಹೆಚ್ಚಾದ್ದರಿಂದ, ಇನ್ನು ಕೆಲವೆಡೆ ಮಳೆಯೇ ಇಲ್ಲದಿರುವುದರಿಂದ ಹೂವಿನ ಫಸಲು ಕಡಿಮೆಯಾಗಿದೆ. ಹೀಗಾಗಿ ಹೂವಿನ ಫಸಲು ಕಡಿಮೆಯಾಗಿದ್ದು ತಮಿಳುನಾಡಿನಿಂದ ಮಲ್ಲಿಗೆ, ಮಲ್ಲಿಗೆ ಮತ್ತಿತರ ಹೂವುಗಳು ಬರುತ್ತವೆ. ರೋಸ್ ಮತ್ತಿತರ ಹೂವುಗಳು ಚಿಕ್ಕಬಳ್ಳಾಪುರ ಸುತ್ತ ಮುತ್ತಲಿನ ಭಾಗಗಳಿಂದ ಬರುತ್ತವೆ. ಹಬ್ಬದ ಹಿನ್ನೆಲೆಯಲ್ಲಿ ಪಕ್ಕದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಕಡೆಗಳಿಂದ ಮಾರಾಟಗಾರರು ಹೂಗಳನ್ನು ಕೊಳ್ಳಲು ಬರುತ್ತಿರುವುದರಿಂದ ಮೂರು-ನಾಲ್ಕು ದಿನದಿಂದೀಚೆಗೆ ಬೆಲೆಗಳು ಹೆಚ್ಚಾಗಿವೆ. ಹಬ್ಬಕ್ಕೆ ಇನ್ನಷ್ಟು ಏರಿಕೆಯಾಗಲಿವೆ.ಹೇಳಿ, ಕೇಳಿ ಹಬ್ಬಕ್ಕೆ ಹೂವು, ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಎಲ್ಲಾ ಬಗೆಯ ಹೂವುಗಳು ಗಗನಕ್ಕೇರಿವೆ ಎನ್ನುತ್ತಾರೆ ಮಂಡಿ ವರ್ತಕ ಮುಸ್ಟೂರು ಶ್ರೀಧರ್.

ಹೂವುಗಳ ತಾಣವಾದ ಎಪಿಎಂಸಿ ಹೂ ಮಾರುಕಟ್ಟೆ ಮತ್ತು ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಯಲ್ಲೇ ಪರಿಸ್ಥಿತಿ ಹೀಗಿದೆಯೆಂದರೆ ಇನ್ನು ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆಗಳಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಸುಲಿಗೆ ಮಾಡುತ್ತಾರೆ. ವರಮಹಾ ಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು.
ಹೂವಿನ ದರ ಜತೆಗೆ ಹಣ್ಣುಗಳ ಬೆಲೆಯೂ ಏರಿಕೆಯಾಗಿದೆ.ಸೇಬು ಕೆ.ಜಿ ರೂ೨೦೦ರಿಂದ ೨೫೦, ಮರಸೇಬು ೧೫೦-೧೮೦,ಸಪೋಟ ೧೬೦, ಪೈನಾಪಲ್ ೭೦ ರಿಂದ ೧೦೦ಕ್ಕೆ, ಸೀಬೆ ೬೦-೮೦ ಕ್ಕೆ ,ಮೂಸಂಬಿಯ ಬೆಲೆ ೭೦-೧೫೦ ರೂ. ದಾಟಿದೆ. ಬಾಳೆಹಣ್ಣಿನ ಬೆಲೆ ಕೇಳುವುದೇ ಬೇಡ.ಕಳೆದ ಎರಡುಮೂರು ದಿನಗಳಿಂದ ಬಾಳೆ ಹಣ್ಣಿನ ಬೆಲೆ ಏಲಕ್ಕಿ ಬಾಳೆ ಕೆ.ಜಿ. ಗೆ ೧೩೦-೧೫೦ ರೂ.ವರೆಗೆ, ಪಚ್ಚಬಾಳೆ ೪೦-೮೦ ರೂ.ಗೆ ಏರಿದೆ. ದಾಳಿಂಬೆ ೧೦೦-೨೫೦ ಕ್ಕೆ, ಕಪ್ಪು ದ್ರಾಕ್ಷಿ ಹಣ್ಣಿನ ಬೆಲೆ ೧೮೦ ರೂಗೆ ಹೆಚ್ಚಾಗಿದೆ. ತೆಂಗಿನ ಕಾಯಿಯ ಬೆಲೆ ೩೫-೮೦ ರೂ. ದಾಟಿದೆ. ೧೦೦ ಎಲೆಯ ಒಂದು ಕಟ್ಟಿಗೆ ೧೮೦, ಅಡಿಕೆ ೧೦೦ ಗ್ರಾಮ್ ೧೫೦,ಒಮದು ಕೆ.ಜಿ ಮೈಸೂರ್ ಪಾಕ್ ೮೦೦, ಖಾರ ೪೦೦ರೂ ಮಾರಾಟವಾಗುತ್ತಿತ್ತು.
ಹಾಪ್‌ಕಾಮ್ಸ್ಗೆ ಹೆಚ್ಚಿನ ಹಣ್ಣುಗಳ ಆಗಮನ
ಹಬ್ಬದ ಹಿನ್ನೆಲೆಯಲ್ಲಿ ಹಾಪ್‌ಕಾಮ್ಸ್ನ ಎಲ್ಲ ಮಳಿಗೆಗಳಲ್ಲೂ ಬಾಳೆ, ಸೀಬೆ, ಅನಾನಸ್, ಸೇಬು, ಮರಸೇಬು, ಮೂಸಂಬಿ, ಸಪೋಟ ಇತ್ಯಾದಿ ಹಣ್ಣುಗಳನ್ನು ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಗತ್ಯ ಪ್ರಮಾಣದಲ್ಲಿ ಪೂರೈಸಲಾಗುವುದು. ಇದಕ್ಕೆ ಅಗತ್ಯ ಸಿದ್ಧತೆಯಾಗಿದೆ. ಟನ್‌ಗಟ್ಟಲೆ ಹಣ್ಣುಗಳು ಆಗಮಿಸುತ್ತಿವೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.
*
ಹಬ್ಬದ ಹಿಂದಿನ ದಿನ ಬೆಲೆಗಳು ಜಾಸ್ತಿಯಾಗುತ್ತಿದ್ದುದು ಮಾಮೂಲು. ಮಾರುಕಟ್ಟೆಯಲ್ಲಿ ಅಂದು ವಿಪರೀತ ರಷ್ ಇರುತ್ತದೆ ಎಂದು ಮುಂಚಿತವಾಗಿಯೇ ಖರೀದಿಗೆ ಬಂದೆವು. ಆದರೆ, ಬೆಲೆಗಳು ಕಡಿಮೆಯೇನಿಲ್ಲ. ತುಂಬಾ ದುಬಾರಿ. ಕನಕಾಂಬರ ೧೦೦ ಗ್ರಾಂ ಹೂವಿಗೆ ೨೦೦ ರೂ. ಕೊಟ್ಟೆವು. ತಾವರೆ ಹೂವು ಸಣ್ಣ ಮೊಗ್ಗಿಗೂ ೫೦ ರೂ. ಕೀಳುತ್ತಿದ್ದಾರೆ. ಈ ದುಬಾರಿ ಬೆಲೆಗಳಲ್ಲಿ ಹಬ್ಬಗಳು ಯಾಕಾದ್ರೂ ಬರುತವೋ ಅನಿಸುತ್ತೆ ಎಂಬುದು ಗೃಹಿಣಿ ನಾಗರತ್ನ ಅವರ ಮಾತು.
ಹಬ್ಬಕ್ಕೆ ಮುಂಚಿತವಾಗಿಯೇ ನಗರದಲ್ಲಿ ಪೈನಾಪಲ್, ಸಪೋಟ ಹಣ್ಣುಗಳ ಸಂಗ್ರಹ ಜೋರಾಗಿತ್ತು. ಸಾರ್ವಜನಿಕರು ಎಪಿಎಂಸಿ ಮಾರುಕಟ್ಟೆ, ಟೌನ್ ಹಾಲ್ ಸರ್ಕಲ್, ಎಂಜಿ ರಸ್ತೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ ಹಾಗೂ ಹೊರವಲಯದ ಕೆ.ವಿ.ಕ್ಯಾಂಪಸ್ ಹೂ ಮಾರುಕಟ್ಟೆಗಳಲ್ಲಿ ಸೇರಿದಂತೆ ವಿವಿಧೆಡೆ ಹಣ್ಣು, ಹೂವು ಖರೀದಿಯಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳು ಕಂಡು ಬಂದವು.ವಿಶೇಷವಾಗಿ ವರಮಹಾಲಕ್ಷ್ಮೀ ಹೂವಿನ ಪ್ರಭಾವಳಿಗಳ ಮಾರಾಟ ಜೋರಾಗಿ ಸಾಗಿತ್ತು.
ಹಬ್ಬದ ಮುನ್ನಾದಿನ ನಗರದಲ್ಲಿ ಜನಜಂಗುಳಿ ಹೆಚ್ಚಾದ್ದರಿಂದ ಪೊಲೀಸರು ಬಜಾರ್ ರಸ್ತೆ, ಎಂ.ಜಿ. ಯನ್ನು ಏಕಮುಖ ಸಂಚಾರ ಮಾಡಿದ್ದರು. ಆದರೂ ವಾಹನ ದಟ್ಟಣೆ ಹೆಚ್ಚಿದ್ದು ಸಂಚಾರವನ್ನು ಸಹಜ ಸ್ಥಿತಿಗೆ ತರಲು ಪೊಲೀಸರು ಹೆಣಗಾಡುತ್ತಿದ್ದರು.
ಏನೇ ಆಗಲಿ ವರಮಹಾಲಕ್ಷ್ಮೀ ವ್ರತಾಚರಣೆ ಶ್ರದ್ಧಾಭಕ್ತಿಯ ಆವರಣದಿಂದ ಹೊರಬಂದು ಹಬ್ಬದ ಮಾದರಿಗೆ ಹೊಂದಿಕೊಂಡಿರುವುದರಿಂದ ಹಬ್ಬದ ಸಾಮಾನು ಖರೀಧಿಸಲು ಮಹಿಳೆಯರು ಮುಗಿಬಿದ್ದಿದ್ದರು.ಸರಕಾರಿ ಕಛೇರಿಗಳಲ್ಲಿ ನೌಕರರ ಸಂಖ್ಯೆ ಗುರುವಾರ ವಿರಳವಾಗಿತ್ತು.